ADVERTISEMENT

ಉರುಳುವ ಮರ ಉಳಿಸಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:49 IST
Last Updated 22 ಜೂನ್ 2017, 19:49 IST
ಮರದ ಬಳಿ ಪಾರ್ಥ ಮತ್ತು ಅರ್ಜುನ್‌
ಮರದ ಬಳಿ ಪಾರ್ಥ ಮತ್ತು ಅರ್ಜುನ್‌   

ಬೆಂಗಳೂರು: ‘ಮರಗಳು ಹತ್ತಾರು ಜೀವಿಗಳಿಗೆ ಆಶ್ರಯ ನೀಡುತ್ತವೆ. ಅವುಗಳಿಗೂ ಜೀವಿತಾವಧಿ ಮುಗಿಯುವವರೆಗೂ ಬದುಕುವ ಹಕ್ಕಿದೆ. ಮರಗಳನ್ನು ಕಡಿಯಬೇಡಿ’ ಎಂದು ಪ್ರತಿಪಾದಿಸಿರುವ ಮಕ್ಕಳು  ಅಕ್ಕಪಕ್ಕದ ನಿವಾಸಿಗಳ ಮನವೊಲಿಸಿ 30 ಅಡಿ ಎತ್ತರದ ಅತ್ತಿ ಹಣ್ಣಿನ ಮರ ಕಡಿಯುವುದನ್ನು ತಡೆದಿದ್ದಾರೆ.
9 ವರ್ಷದ ಪಾರ್ಥ ಚೌಧರಿ ಮತ್ತು ಸಹೋದರ ಅರ್ಜುನ್‌ ಚೌಧರಿ ಮರವನ್ನು ಉಳಿಸಿದ ಬಾಲ ಪರಿಸರ ಪ್ರೇಮಿಗಳು.

ಬೆಳ್ಳಂದೂರು ಕೆರೆ ಪಕ್ಕದ ಯುಫೊರಿಯಾ ಅಪಾರ್ಟ್‌ಮೆಂಟ್‌ ಸಮುಚ್ಚಯದ ಒಳಚರಂಡಿ ಮಾರ್ಗಕ್ಕೆ ಮರದ ಬೇರುಗಳು ಧಕ್ಕೆ ತರುತ್ತಿವೆ ಎಂಬ ಕಾರಣಕ್ಕೆ  ಅತ್ತಿ ಮರವನ್ನು ಕಡಿಯಲು ನಿರ್ಧರಿಸಲಾಗಿತ್ತು. ಅದೇ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಪೋಷಕರೊಂದಿಗೆ ವಾಸವಿರುವ ಈ ಮಕ್ಕಳು ಮರಗಳ ಮಹತ್ವವನ್ನು ಅಪಾರ್ಟ್‌ಮೆಂಟ್‌ ಸಂಘದ ಪದಾಧಿಕಾರಿಗಳ ಗಮನಕ್ಕೆ ತಂದು ಮರ ಕಡಿಯುವುದನ್ನು ತಡೆದಿದ್ದಾರೆ.

‘ಮರಗಳನ್ನು ಕಡಿದರೆ, ಅವುಗಳನ್ನು ಅವಲಂಬಿಸಿರುವ ಜೀವಿಗಳ ಗತಿ ಏನಾಗುತ್ತದೆ. ಒಂದು ಮರ ಕಡಿದರೆ ಐದು ಸಸಿಗಳನ್ನು ನೆಡುತ್ತೇವೆಂದು ಹೇಳುತ್ತಾರೆ. ಆದರೆ, ಆ ಐದು ಸಸಿಗಳು ಮರವಾಗುವವರೆಗೂ ಅವಲಂಬಿತ ಜೀವಿಗಳು ಏನು ಮಾಡಬೇಕು’ ಎಂಬ ಪ್ರಶ್ನೆಗಳನ್ನು  ಕೇಳುವ ಮೂಲಕ ಮಕ್ಕಳು ಹಿರಿಯರ ಕಣ್ಣು ತೆರೆಸಿದ್ದಾರೆ.

ADVERTISEMENT

ಸಂಘದವರು ಸಸ್ಯ ವೈದ್ಯ ವಿಜಯ್‌ ನಿಶಾಂತ್‌ ಅವರನ್ನು ಸಂಪರ್ಕಿಸಿ ಒಳಚರಂಡಿ ನಾಲೆಗೆ ದಕ್ಕೆ ಆಗದಂತೆ ಮರವನ್ನು ಉಳಿಸಿಕೊಳ್ಳುವ ಮಾರ್ಗೋಪಾಯ ಸೂಚಿಸುವಂತೆ  ಕೋರಿದ್ದರು. ಮರದ ಸುತ್ತಲೂ ತಡೆಗೋಡೆ ನಿರ್ಮಿಸಲು ಅವರು ಸಲಹೆ ನೀಡಿದ್ದರು. ಇದಕ್ಕೆ ₹ 25,000 ವೆಚ್ಚವಾಗುತ್ತದೆ ಎಂಬುದನ್ನು ತಿಳಿದ ಮಕ್ಕಳಿಬ್ಬರು ಮನೆ–ಮನೆಗೆ ತೆರಳಿ  ₹ 7,000 ಸಂಗ್ರಹಿಸಿದ್ದರು. 

‘ಕಾಂಡಕ್ಕಿಂತ ಸ್ವಲ್ಪ ದೂರದಲ್ಲಿ ತಡೆಗೋಡೆ ನಿರ್ಮಿಸುತ್ತೇವೆ. ಇದರಿಂದ ಮರದ ಬೇರುಗಳು ವಿಸ್ತರಿಸುವುದಿಲ್ಲ. ಆದರೆ, ಮರದ ಬೆಳವಣಿಗೆ ಕುಂಠಿತಗೊಳ್ಳುವುದಿಲ್ಲ’ ಎನ್ನುತ್ತಾರೆ   ವಿಜಯ್‌ ನಿಶಾಂತ್‌.

ಕೊನೆಗೂ ಮರ ಉಳಿದಿದ್ದನ್ನು ಕಂಡು ಮಕ್ಕಳಿಗೆ ಅತೀವ ಸಂತೋಷವಾಗಿದೆ. ‘ಮರಗಳನ್ನು ಉಳಿಸಿ, ಬೆಳೆಸಬೇಕು ಎಂದು ಶಿಕ್ಷಕರು ಹೇಳಿಕೊಟ್ಟಿದ್ದರು. ಆ ಮಾತನ್ನೇ ಅನುಷ್ಠಾನಕ್ಕೆ ತಂದಿದ್ದೇವೆ. ಮುಂದೆಯೂ ಈ ಮರವನ್ನು ಜೋಪಾನವಾಗಿ ನೋಡಿಕೊಳ್ಳುತ್ತೇವೆ’ ಎಂದು ಮಕ್ಕಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.