ADVERTISEMENT

ಎಂಪ್ರಿ ಸಂಸ್ಥೆಯಿಂದ ಪ್ಲಾಸ್ಟಿಕ್‌ ನಿಷೇಧ ಜಾಗೃತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:56 IST
Last Updated 14 ಮಾರ್ಚ್ 2017, 19:56 IST
ಕೆರೆಯ ದಡದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಕಸವನ್ನು ಸ್ವಯಂ ಸೇವಕರು ಆರಿಸಿದರು
ಕೆರೆಯ ದಡದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಕಸವನ್ನು ಸ್ವಯಂ ಸೇವಕರು ಆರಿಸಿದರು   

ಬೆಂಗಳೂರು:  ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಎಂಪ್ರಿ) ಪುಟ್ಟೇನಹಳ್ಳಿಯಲ್ಲಿ ಮಂಗಳವಾರ ನಡೆಸಿದ ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಪ್ಲಾಸ್ಟಿಕ್‌ ನಿಷೇಧದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ಸಂಸ್ಥೆಯ ಆವರಣವಿರುವ ಜೆ.ಪಿ.ನಗರದ 5ನೇ ಹಂತದಿಂದ ಹೊರಟ ಜಾಥಾ ವಿನಾಯಕನಗರ ಮುಖ್ಯರಸ್ತೆ, ಬಿಓಬಿ ಕಾಲೋನಿ, ಬ್ರಿಗೇಡ್‌ ಮಿಲೆನಿಯಂ ರಸ್ತೆಗಳ ಮೂಲಕ ಪುಟ್ಟೇನಹಳ್ಳಿ ಕೆರೆಗೆ ತಲುಪಿತು.

ಜಾಥಾದಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಯಿತು. ‘ಪ್ಲಾಸ್ಟಿಕ್‌ ತ್ಯಜಿಸಿ, ಪರಿಸರ ಉಳಿಸಿ’ ಎಂಬ ಘೋಷಣೆ ಕೂಗುತ್ತ ಸಾಗಿದ 100 ಪ್ರತಿನಿಧಿಗಳು ಪ್ಲಾಸ್ಟಿಕ್‌ಗೆ ಬದಲಾಗಿ ಉಪಯೋಗಿಸಬಹುದಾದ ಕಾಗದ, ಗಾಜು, ಬಟ್ಟೆ, ಸಿರಾಮಿಕ್‌, ಮೆಲಮಿನ್‌ ಹಾಗೂ ಮಣ್ಣಿನಿಂದ ತಯಾರಿಸಿದ ವಸ್ತುಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಜಾಥಾದಲ್ಲಿ ಹಸಿರು ದಳ, ಗ್ರೀನ್‌ ಫೇಸ್‌, ಸಮರ್ಥನಂ ಟ್ರಸ್ಟ್‌ನ ಪ್ರತಿನಿಧಿಗಳು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಜಾಥಾದ ಬಳಿಕ ಪುಟ್ಟೇನಹಳ್ಳಿ ಕೆರೆಯ ಸುತ್ತಲಿನ ವಾಯುವಿಹಾರ ಪಥವನ್ನು ಶುಚಿಗೊಳಿಸಲಾಯಿತು. ‘ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿ ಟ್ರಸ್ಟ್‌’ನ ಸದಸ್ಯರೊಂದಿಗೆ ದಡದ ಮೇಲೆ ಬಿದಿದ್ದ ಬಳಸಿದ ಪ್ಲಾಸ್ಟಿಕ್‌ನ ಕೈಚೀಲಗಳು, ಲೋಟಗಳು, ತಟ್ಟೆಗಳು ಮತ್ತು ಹಾಲಿನ ಪಾಕೆಟ್‌ಗಳನ್ನು ಆಯ್ದು ಶುಚಿಗೊಳಿಸಿದರು. ಕೆಲವರು  ಕ್ಯಾಮೆರಾಗಳ ಮುಂದೆ ಕಸ ತೆಗೆಯುವಂತೆ ಫೋಸು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.