ADVERTISEMENT

ಎನ್‌.ಒ.ಸಿ ಪಡೆಯಲು ‘ಅಗ್ನಿ–2’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:46 IST
Last Updated 22 ಮಾರ್ಚ್ 2018, 19:46 IST
‘ಅಗ್ನಿ–2’ ವ್ಯವಸ್ಥೆ ಜಾರಿಗೆ ಅಗತ್ಯವಾದ ಸ್ಮಾರ್ಟ್‌ ಟ್ಯಾಬ್‌ಗಳನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಎಂ.ಎನ್.ರೆಡ್ಡಿ ಹಾಗೂ ನಿರ್ದೇಶಕ ಕೆ.ಯು.ರಮೇಶ್‌ ಅವರಿಗೆ ವಿತರಿಸಿದರು
‘ಅಗ್ನಿ–2’ ವ್ಯವಸ್ಥೆ ಜಾರಿಗೆ ಅಗತ್ಯವಾದ ಸ್ಮಾರ್ಟ್‌ ಟ್ಯಾಬ್‌ಗಳನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಎಂ.ಎನ್.ರೆಡ್ಡಿ ಹಾಗೂ ನಿರ್ದೇಶಕ ಕೆ.ಯು.ರಮೇಶ್‌ ಅವರಿಗೆ ವಿತರಿಸಿದರು   

ಬೆಂಗಳೂರು: ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಹಾಗೂ ಸುರಕ್ಷತಾ ಪ್ರಮಾಣಪತ್ರ (ಸಿಸಿ) ಸೇರಿ ಹಲವು ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸುವ ಉದ್ದೇಶದಿಂದ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ‘ಅಗ್ನಿ–2’ ಎಂಬ ಹೊಸ ಸಾಫ್ಟ್‌ವೇರ್‌ ಜಾರಿಗೆ ತಂದಿದೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಇಲಾಖೆಯ ಆರ್‌.ಎ.ಮುಂಡ್ಕುರ್‌ ಅಕಾಡೆಮಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಈ ಸಾಫ್ಟ್‌ವೇರ್‌ಗೆ ಚಾಲನೆ ನೀಡಿದರು.

ಸದ್ಯ ಕಾರ್ಯನಿರ್ವಹಿಸುತ್ತಿರುವ ಅಗ್ನಿ ತಂತ್ರಾಂಶ ಹಳೆಯದ್ದಾಗಿದ್ದು, ಅರ್ಜಿ ಸಲ್ಲಿಸಲು ಮಾತ್ರ ಸೀಮಿತವಾಗಿತ್ತು. ಉಳಿದೆಲ್ಲ ಕೆಲಸವನ್ನೂ ಸಿಬ್ಬಂದಿ ಮಾಡಬೇಕಿತ್ತು. ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ‘ಅಗ್ನಿ–2’ ಸಾಫ್ಟ್‌ವೇರ್‌ ರೂಪಿಸಲಾಗಿದೆ. ನಕ್ಷೆ ಮಂಜೂರಾತಿ, ನಿರಾಕ್ಷೇಪಣಾ ಪ್ರಮಾಣ ಪತ್ರ ಹಾಗೂ ಕ್ಲಿಯರೆನ್ಸ್ ಪ್ರಮಾಣಪತ್ರವು ಇದರಲ್ಲಿ ಸಿಗಲಿದೆ.

ADVERTISEMENT

ರಾಜ್ಯ ಮುನ್ಸಿಪಲ್‌ ಡೇಟಾ ಸೊಸೈಟಿ ಮತ್ತು ನಗರಾಭಿವೃದ್ಧಿ ಇಲಾಖೆ ಹಾಗೂ ಐಡಿಎಸ್‌ಐ ಟೆಕ್ನಾಲಜೀಸ್ ಸಹಯೋಗದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಸದ್ಯ ಈ ವ್ಯವಸ್ಥೆಯನ್ನು ಇಲಾಖೆ ಸಿಬ್ಬಂದಿ ಬಳಸಲಿದ್ದಾರೆ. ಕೆಲವೇ ದಿನಗಳಲ್ಲಿ ‘ಅಗ್ನಿ 2‘ ಹೆಸರಿನ ಆ್ಯಪ್‌ ಸಿದ್ಧಪಡಿಸಿ ಬಿಡುಗಡೆ ಮಾಡಲಾಗುತ್ತದೆ. ನಂತರ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.

‘ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಕಚೇರಿಗೆ ಅಲೆಯಬೇಕಿತ್ತು. ಅರ್ಜಿ ಸಲ್ಲಿಸಿದ ಬಳಿಕ, ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡುವುದಕ್ಕೆ ಸಾಕಷ್ಟು ದಿನಗಳು ಬೇಕಾಗುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ ಆ ರೀತಿಯಾಗುವುದಿಲ್ಲ. ತ್ವರಿತವಾಗಿ ಪರಿಶೀಲನೆ ಮುಗಿಯಲಿದ್ದು, ನಿಗದಿತ ದಿನದಂದೇ ಪ್ರಮಾಣಪತ್ರಗಳು ಅರ್ಜಿದಾರರ ಕೈ ಸೇರಲಿವೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದರು.

ವ್ಯವಸ್ಥೆಯ ವೈಶಿಷ್ಟ್ಯ

*ಕಟ್ಟಡ ನಕ್ಷೆಗಳ ಪರಿಶೀಲನೆ, ಸ್ಥಳೀಯಾಭಿವೃದ್ದಿ ನಿಯಮಾವಳಿ ಹಾಗೂ ಉಪ ಅಧಿನಿಯಮಗಳ ಪರಿಶೀಲನೆ, ರಾಷ್ಟ್ರೀಯ ಕಟ್ಟಡ ಸಂಹಿತೆ ಜಾರಿ ಹಾಗೂ ಅಗ್ನಿಶಮನ ಉಪಕರಣಗಳ ಪರಿಶೀಲನೆಗೆ ಅನುಕೂಲ.

*ಸ್ವಯಂಚಾಲಿತ ನಿರೀಕ್ಷಣಾಧಿಕಾರಿಗಳಿಗೆ ಆನ್‌ಲೈನ್‌ ಮೂಲಕವೇ ನಿರ್ಧರಿತ ಕಡತಗಳ ಹಂಚಿಕೆ.

*ಸ್ಥಳ, ಕಟ್ಟಡ ತಪಾಸಣೆ ನಡೆಸಲು ಕೈಬರಹದ ಅಗತ್ಯ ಇರುವುದಿಲ್ಲ.

*ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅನುಮೋದನೆ ಪ್ರತಿಗಳನ್ನು ಆನ್‌ಲೈನ್‌ನಲ್ಲೇ ಡೌನ್‍ಲೋಡ್ ಮಾಡಿಕೊಳ್ಳಬಹುದು.

*ಈ ವ್ಯವಸ್ಥೆ ಜಾರಿಗಾಗಿ ಪ್ರತಿಯೊಬ್ಬ ಅಗ್ನಿಶಾಮಕ ಅಧಿಕಾರಿಗೆ ಸ್ಮಾರ್ಟ್‌ ಟ್ಯಾಬ್‌ ವಿತರಿಸಲಾಗಿದೆ. ಶೇ 50ರಷ್ಟು ಕೆಲಸದ ಒತ್ತಡ ಕಡಿಮೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.