ADVERTISEMENT

ಎನ್‌ಜಿಟಿ ಆದೇಶ ನೋಡಿ ನಕ್ಷೆ ನೀಡಿ

ಅಧಿಕಾರಿಗಳಿಗೆ ಬಿಬಿಎಂಪಿ ವಿಶೇಷ ಆಯುಕ್ತರ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:30 IST
Last Updated 6 ಮೇ 2016, 19:30 IST

ಬೆಂಗಳೂರು: ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠ ನೀಡಿರುವ ತೀರ್ಪಿನ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣದ ನಕ್ಷೆಗೆ ಮಂಜೂರಾತಿ ನೀಡಬೇಕು. ನಿಯಮಗಳಿಗೆ ಅನುಗುಣವಾಗಿ ಇಲ್ಲದಿದ್ದರೆ ಮಂಜೂರಾತಿ ನೀಡಲೇಬಾರದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತರು (ಯೋಜನೆ) ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ತೀರ್ಪಿನ ಬೆನ್ನಲ್ಲೇ ಅವರು ಈ ಆದೇಶ ಹೊರಡಿಸಿದ್ದಾರೆ. ಕೆರೆ ಅಂಚಿನಿಂದ 75 ಮೀಟರ್ ಪ್ರದೇಶವನ್ನು ನ್ಯಾಯಮಂಡಳಿ ಬಫರ್‌ ಝೋನ್‌ ಎಂದು ಗುರುತಿಸಿದೆ.

ಆ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕೈಗೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ. ರಾಜಕಾಲುವೆಗೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ಕಾಲುವೆಯಿಂದ 50 ಮೀಟರ್‌, ದ್ವಿತೀಯ ಹಂತದ ಕಾಲುವೆಯಿಂದ 35 ಮೀಟರ್‌ ಹಾಗೂ ತೃತೀಯ ಹಂತದ ಕಾಲುವೆಯಿಂದ 25 ಮೀಟರ್‌ ಬಫರ್‌ ಝೋನ್‌ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದೆ. ಮುಖ್ಯವಾಗಿ ಕಾಲುವೆಯ ಮಧ್ಯಭಾಗದ ಬದಲಿಗೆ ರಾಜಕಾಲುವೆಯ ಅಂಚಿನಿಂದ ಬಫರ್‌ ವಲಯದ ಅಳತೆ ಮಾಡಲು ಸೂಚಿಸಿದೆ.

ನ್ಯಾಯಮಂಡಳಿಯ ಆದೇಶದ ಬಗ್ಗೆ ಬಿಬಿಎಂಪಿಯ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ವಿ. ಸತೀಶ್‌ ಪ್ರತಿಕ್ರಿಯಿಸಿ, ‘ಈ ಆದೇಶದಿಂದ ನಗರದ ಕೆರೆಗಳಿಗೆ ಮರುಜೀವ ಬರಲಿದೆ’ ಎಂದರು. ‘ಈ ಆದೇಶವನ್ನು ಅನುಷ್ಠಾನಕ್ಕೆ ತರುವುದು ದೊಡ್ಡ ಸವಾಲು’ ಎಂದರು.

ಬಿಡಿಎ ಕಾದು ನೋಡುವ ತಂತ್ರ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ತೀರ್ಪಿನಿಂದಾಗಿ 2015ನೇ ಪರಿಷ್ಕೃತ ಮಹಾಯೋಜನೆಯಲ್ಲಿ ಕೆರೆ ಹಾಗೂ ರಾಜಕಾಲುವೆಗಳ ಬಫರ್‌ ಝೋನ್‌ ವ್ಯಾಖ್ಯಾನ ಬದಲಾಗಲಿದೆ. 

ಮಹಾಯೋಜನೆಯಲ್ಲಿ ಪ್ರಾಥಮಿಕ ಹಂತದ ರಾಜಕಾಲುವೆಯ ಮಧ್ಯಭಾಗದಿಂದ 50 ಮೀಟರ್‌, ದ್ವಿತೀಯ ಹಂತದ ಕಾಲುವೆಯಿಂದ 25 ಮೀಟರ್‌ ಹಾಗೂ ತೃತೀಯ ಹಂತದ ಕಾಲುವೆಯಿಂದ 15 ಮೀಟರ್‌ ಬಫರ್‌ ಝೋನ್‌ ಆಗಿತ್ತು.

ಕೆರೆಯ ಮಧ್ಯಭಾಗದಿಂದ 30 ಮೀಟರ್‌ ಬಫರ್‌ ಝೋನ್‌ ನಿಗದಿ ಮಾಡಲಾಗಿತ್ತು. ‘ಬಫರ್‌ ಝೋನ್‌ ನಿಗದಿ ಮಾಡುವಾಗ ವೈಜ್ಞಾನಿಕ ಮಾನದಂಡ ಅನುಸರಿಸಿ ಇರಲಿಲ್ಲ’ ಎಂದು ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿತ್ತು.

ಈ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಚೌಡೇಗೌಡ ಪ್ರತಿಕ್ರಿಯಿಸಿ, ‘ಆದೇಶದ ಬಗ್ಗೆ ಸಮಗ್ರ ಮಾಹಿತಿ ನಮಗೆ ಇನ್ನೂ ಸಿಕ್ಕಿಲ್ಲ. ಸ್ಪಷ್ಟತೆಗಾಗಿ ರಾಜ್ಯ ಸರ್ಕಾರದ ನಿರ್ದೇಶನಕ್ಕೆ ಕಾಯುತ್ತಿದ್ದೇವೆ. ರಾಜ್ಯ ಸರ್ಕಾರ ನಿರ್ದೇಶನ ನೀಡಿದ ಬಳಿಕ  ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಪರಿಸರವಾದಿ ಡಾ.ಅ.ನ. ಯಲ್ಲಪ್ಪ ರೆಡ್ಡಿ ಅವರು ಆದೇಶವನ್ನು ಸ್ವಾಗತಿಸಿದ್ದಾರೆ. ‘ಬಿಡಿಎ ಆರಂಭದಿಂದಲೂ ಮಹಾ ತಪ್ಪುಗಳನ್ನು ಮಾಡುತ್ತಲೇ ಬಂದಿದೆ. ಬೆಳ್ಳಂದೂರು ಕೆರೆಗೆ ಸೇರಿದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯೋಜನೆಗಳಿಗೆ ಅನುಮತಿ ನೀಡಲಾಗಿತ್ತು. ಇದರಿಂದಾಗಿ ಕೆರೆಯ ವಿಸ್ತಾರ ಹಾಗೂ ಬಫರ್‌ ಝೋನ್‌ ಕಿರಿದಾಗಿದೆ.

ADVERTISEMENT

ದಶಕಗಳ ಹಿಂದೆ ಕೆರೆಗಳ ಬಫರ್‌ ಝೋನ್‌ 300 ಮೀಟರ್‌ ಇತ್ತು. ಭೂಮಾಲೀಕರ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಒತ್ತಡಕ್ಕೆ ಮಣಿದು ಅದನ್ನು 100 ಮೀಟರ್‌ಗೆ ಇಳಿಸಲಾಗಿತ್ತು.

ಪ್ರಾಧಿಕಾರದ 2015ರ ಮಹಾಯೋಜನೆ ದುರಂತಕ್ಕೆ ಹಾದಿ ಮಾಡಿಕೊಟ್ಟಿತ್ತು. 30 ಮೀಟರ್‌ಗೆ ಬಫರ್‌ ಝೋನ್‌ ಅನ್ನು ಇಳಿಸಲಾಗಿತ್ತು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.