ADVERTISEMENT

ಎಲ್ಲೆಡೆ ಕನ್ನಡದಲ್ಲೇ ವ್ಯವಹರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 19:30 IST
Last Updated 1 ಮಾರ್ಚ್ 2015, 19:30 IST
ಸಮ್ಮೇಳನಾಧ್ಯಕ್ಷೆ  ನಾಗಮಣಿ ಎಸ್‌.ರಾವ್‌ (ಎಡದಿಂದ ಮೂರನೆಯವರು) ಅವರು ತಮ್ಮ ಲಿಖಿತ ಭಾಷಣದ ಪ್ರತಿ ವೀಕ್ಷಿಸಿದರು. ಚಾಮರಾಜಪೇಟೆ ವಿಧಾನಸಭಾ ಕಸಾಪ ಅಧ್ಯಕ್ಷ ಎಂ.ಪಿ.ನಟರಾಜು, ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಹಾಗೂ ಪಾಲಿಕೆ ಸದಸ್ಯ ಬಿ.ವಿ.ಗಣೇಶ್‌ ಇದ್ದಾರೆ. (ಎಡ ಚಿತ್ರ),  ಸಮ್ಮೇಳನಾಧ್ಯಕ್ಷರ ಮೆರವಣಿಗೆ ವೇಳೆ ಮಹಿಳೆಯರು ಪೂರ್ಣ ಕುಂಭ ಹಿಡಿದು ಸಾಗಿದರು _ಪ್ರಜಾವಾಣಿ ಚಿತ್ರಗಳು
ಸಮ್ಮೇಳನಾಧ್ಯಕ್ಷೆ ನಾಗಮಣಿ ಎಸ್‌.ರಾವ್‌ (ಎಡದಿಂದ ಮೂರನೆಯವರು) ಅವರು ತಮ್ಮ ಲಿಖಿತ ಭಾಷಣದ ಪ್ರತಿ ವೀಕ್ಷಿಸಿದರು. ಚಾಮರಾಜಪೇಟೆ ವಿಧಾನಸಭಾ ಕಸಾಪ ಅಧ್ಯಕ್ಷ ಎಂ.ಪಿ.ನಟರಾಜು, ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಹಾಗೂ ಪಾಲಿಕೆ ಸದಸ್ಯ ಬಿ.ವಿ.ಗಣೇಶ್‌ ಇದ್ದಾರೆ. (ಎಡ ಚಿತ್ರ), ಸಮ್ಮೇಳನಾಧ್ಯಕ್ಷರ ಮೆರವಣಿಗೆ ವೇಳೆ ಮಹಿಳೆಯರು ಪೂರ್ಣ ಕುಂಭ ಹಿಡಿದು ಸಾಗಿದರು _ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ‘ಕೇವಲ ಸರ್ಕಾರದ ಸುತ್ತೋಲೆ­ಗಳಿಂದ, ಅಕಾಡೆಮಿಗಳು ಹೊರತರುವ ಉನ್ನತ ಗ್ರಂಥಗಳಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಬದಲಾಗಿ ಅಂಗಡಿ ಮುಂಗಟ್ಟು­ಗಳಲ್ಲಿ, ಜನವಸತಿ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಕಡ್ಡಾಯ­ವಾಗಿ ಕನ್ನಡದಲ್ಲಿಯೇ ವ್ಯವ­ಹರಿಸಬೇಕು’ ಎಂದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ನಾಗಮಣಿ ಎಸ್‌.ರಾವ್‌ ಅಭಿಪ್ರಾಯ ಪಟ್ಟರು.

ಕ್ಷೇತ್ರದ ಮಕ್ಕಳಕೂಟದಲ್ಲಿ ನಿರ್ಮಿಸ ಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ವೇದಿಕೆಯಲ್ಲಿ ಭಾನುವಾರ ನಡೆದ ಸಮ್ಮೇಳನದ ಉದ್ಘಾಟನಾ ಸಮಾರಂಭ ದಲ್ಲಿ ಮಾತನಾಡಿದರು. ‘ಬೆಂಗಳೂರಿನಲ್ಲಿ ವರ್ಷಾನುಗಟ್ಟಲೆ ಕನ್ನಡ ಕಲಿಯದೆ ಬದುಕಬಹುದು ಎಂಬ ಸ್ಥಿತಿ ನೆಲೆಸಿದೆ. ದುರದೃಷ್ಟವೆಂದರೆ ನಾವೂ ಅವರ ಭಾಷೆಯಲ್ಲಿಯೇ ವ್ಯವಹಾರ ಮಾಡುತ್ತಿದ್ದೇವೆ. ಪರಭಾಷೆ ಯನ್ನು  ದ್ವೇಷಿಸಬೇಕಿಲ್ಲ. ಆದರೆ, ಕನ್ನಡದಲ್ಲಿ ಮಾತನಾಡಿದರೆ ಘನತೆಗೆ ಕುಂದುಂಟಾಗುತ್ತದೆ ಎಂಬ ಭಾವನೆ ಯನ್ನು ತೊಡೆದುಹಾಕಬೇಕು’ ಎಂದು ಸಲಹೆ ನೀಡಿದರು.

‘ಕನ್ನಡಿಗರು ಕನ್ನಡವನ್ನು ಬಳಸು ವುದರ ಜೊತೆಗೆ ಇತರ ಭಾಷೆಯ ಜನರೂ ಬಳಸುವಂಥ ವಾತಾವರಣ ನಿರ್ಮಿಸಬೇಕಾದ ಜರೂರತ್ತಿದೆ. ಭಾಷಾ ಅಭಿಮಾನದ ಬಗ್ಗೆ ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯದವರನ್ನು ನೋಡಿ ಕಲಿಯಬೇಕು’ ಎಂದರು.
‘ಬೇರೆ ಯಾವ ಭಾಷೆಯೂ ಮಾತೃ ಭಾಷೆಯ ಸ್ಥಾನ ತುಂಬಲಾರದು. ಆದರೆ, ರಾಜ್ಯದಲ್ಲಿ ಕನ್ನಡ ಮಾಧ್ಯಮ ವನ್ನೇ ಮಾಯವಾಗಿಸುವ ಸಂಚು ನಡೆಯುತ್ತಿದೆ. ಮುಂದೊಂದು ದಿನ ಕನ್ನಡದ ಓದು ಬರಹ ಬಲ್ಲವರೇ ಇಲ್ಲದಂತಾಗುವ ಅಪಾಯವಿದೆ. ಭಾಷೆಯ ಉಳಿವಿಗಾಗಿ ಪ್ರತಿದಿನವೂ ಹೋರಾಟ ನಡೆಸಬೇಕಾಗದ ಪರಿಸ್ಥಿತಿ ನೆಲೆಸಿರುವುದು ದುರದೃಷ್ಟಕರ’ ಎಂದು ವಿಷಾದಿಸಿದರು.

ಕನ್ನಡ ಮಾಧ್ಯಮದ ಶಾಲೆಗಳನ್ನು ಮುಚ್ಚದಂತೆ ಎಚ್ಚರ ವಹಿಸುವುದು, ಕೇಂದ್ರೀಯ ಹಾಗೂ ಇತರ ಭಾಷಾ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯಗೊಳಿಸುವುದು ಹಾಗೂ ಸರೋಜಿನಿ ಮಹಿಷಿ ವರದಿ ಜಾರಿ­ಗೊಳಿಸಲು ಘಟಕವು ಸರ್ಕಾರವನ್ನು ಒತ್ತಾಯಿಸಬೇಕು ಎಂದರು.

ಸ್ಥಳಾಂತರ ಹುನ್ನಾರ: ‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದ್ದರೂ ಈವರೆಗೆ ಹೇಳಿಕೊಳ್ಳುವಂಥ ಕೆಲಸ ನಡೆದಿಲ್ಲ. ಮೈಸೂರಿನಲ್ಲಿರುವ ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದರ ವನ್ನು ಬೆಂಗಳೂರಿಗೆ ಸ್ಥಳಾಂತ ರಿಸುವ ಸಂಚು ನಡೆದಿದೆ. ಯಾವ ಪುರುಷಾರ್ಥಕ್ಕಾಗಿ ಬೆಂಗಳೂರಿಗೆ ವರ್ಗಾಯಿಸಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಕ್ಕೆ ಕಟ್ಟಡ ಬೇಕು: ‘ಕರ್ನಾಟಕ ಲೇಖಕಿಯರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೊಂದು ವಿಶಾಲ ಕಟ್ಟಡದ ಅಗತ್ಯ­ವಿದೆ. ದಾನ, ಗುತ್ತಿಗೆ, ಮಾರಾಟ... ಹೀಗೆ ಯಾವುದೇ ರೀತಿಯಲ್ಲಿ ನಿವೇಶನ ದೊರಕಿಸಿ ಕೊಡಬೇಕು. ಅಲ್ಲದೆ, ಸಂಘದ ನೆಲೆ ಚಾಮರಾಜಪೇಟೆಯಲ್ಲಿಯೇ ಇರಬೇಕು’ ಎಂದರು.

ಕನ್ನಡದ ಮಮಕಾರವೇ ಇಲ್ಲ: ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಮಾತನಾಡಿ, ‘ಮಾತೃಭಾಷೆಯಲ್ಲಿ ಶಿಕ್ಷಣ ಸಂಬಂಧ ನ್ಯಾಯಾಲಯದಲ್ಲಿ ವಾದಿಸುವವರಿಗೆ ಕನ್ನಡದ ಬಗ್ಗೆ ಮಮಕಾರವೂ ಇಲ್ಲ, ನಂಬಿಕೆಯೂ ಇಲ್ಲ. ಮಾತೃಭಾಷೆಯಲ್ಲಿ ಶಿಕ್ಷಣಕ್ಕಾಗಿ ಗೋಖಾಕ್‌ ಚಳವಳಿ ರೀತಿ ಹೋರಾಟ ನಡೆಸಬೇಕಾದ ಅಗತ್ಯವಿದೆ. ಆ ಹೋರಾಟ ಚಾಮರಾಜ­ಪೇಟೆ ಯಿಂದಲೇ ಆರಂಭವಾಗಬೇಕು’ ಎಂದು ಕರೆ ನೀಡಿದರು.

ಸಮ್ಮೇಳನ ಉದ್ಘಾಟಿಸಿದ ಪಾಲಿಕೆ ಸದಸ್ಯ ಬಿ.ವಿ.ಗಣೇಶ್‌, ‘ಎಷ್ಟು ಮಂದಿಗೆ ಕನ್ನಡ ಕಲಿಸಿದ್ದೇವೆ ಎಂಬುದರ ಮೇಲೆ ಸಾಹಿತ್ಯ ಸಮ್ಮೇಳನಗಳ ಯಶಸ್ಸು ಅವಲಂಬಿಸಿದೆ. ಭಾಷೆಯನ್ನು ಬೆಳೆಸಲು ಪ್ರೋತ್ಸಾಹ ನೀಡದಿದ್ದರೆ ಕನ್ನಡ ತಾಯಿಗೆ ಮೋಸಮಾಡಿದಂತೆ’ ಎಂದರು. ನಿವೃತ್ತ ಪೊಲೀಸ್‌ ಅಧಿಕಾರಿ ಜಿ.ಎ.ಬಾವ ಅವರು ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಇದಕ್ಕೂ ಮೊದಲು ಸಮ್ಮೇಳನಾ ಧ್ಯಕ್ಷರ ನೇತೃತ್ವದಲ್ಲಿ ಕನ್ನಡ ಜಾಗೃತಿ ಮೆರವಣಿಗೆ ನಡೆಯಿತು. ಜಾನಪದ ಕಲಾ ತಂಡಗಳು ಹಾಗೂ ಶಾಲೆಯ ಮಕ್ಕಳು ನೃತ್ಯ ಕಾರ್ಯಕ್ರಮ ನಡೆಸಿ ಕೊಟ್ಟರು. ಕ್ಷೇತ್ರ ಕಸಾಪ ಅಧ್ಯಕ್ಷ ಎಂ.ಪಿ.ನಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.