ADVERTISEMENT

ಎ.ಸಿ ಪೆಟ್ಟಿಗೆಯಲ್ಲಿ ಗಬ್ಬು ವಾಸನೆ!

₹10 ಲಕ್ಷ ಪರಿಹಾರ ಕೋರಿಕೆ: ಗ್ರಾಹಕರ ವೇದಿಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:59 IST
Last Updated 21 ಜನವರಿ 2017, 19:59 IST
ಎ.ಸಿ ಪೆಟ್ಟಿಗೆಯಲ್ಲಿ ಗಬ್ಬು ವಾಸನೆ!
ಎ.ಸಿ ಪೆಟ್ಟಿಗೆಯಲ್ಲಿ ಗಬ್ಬು ವಾಸನೆ!   

ಬೆಂಗಳೂರು: ಹವಾ ನಿಯಂತ್ರಣ ಪೆಟ್ಟಿಗೆಯಿಂದ ಗಬ್ಬು ವಾಸನೆ ಹೊರಬರುತ್ತಿದೆ ಎಂಬ ಆರೋಪದಡಿ ಪ್ರತಿಷ್ಠಿತ ಸ್ಯಾಮ್‌ಸಂಗ್ ಇಂಡಿಯಾ  ಕಂಪೆನಿಗೆ ನೋಟಿಸ್‌ ಜಾರಿ ಮಾಡಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ಈ ಕುರಿತಂತೆ ಗಿರಿನಗರದಲ್ಲಿರುವ ಸಾಫ್ಟ್‌ವೇರ್‌ ಎಂಜಿನಿಯರ್ ಕೃತ್ತಿಕಾ ಗಂಗಾಧರ ಸಲ್ಲಿಸಿರುವ ಅರ್ಜಿಯನ್ನು ಜಿಲ್ಲಾ ವೇದಿಕೆ ಶುಕ್ರವಾರ ವಿಚಾರಣೆ ನಡೆಸಿದೆ.

ಕೃತ್ತಿಕಾ ದೂರಿನ ವಿವರ: ‘2016ರ ಮಾರ್ಚ್‌ 26ರಂದು  ಕತ್ರಿಗುಪ್ಪೆಯ 80 ಅಡಿ ರಸ್ತೆಯಲ್ಲಿರುವ ಸ್ಯಾಮ್‌ಸಂಗ್‌ ಪ್ಲಾಜಾದಲ್ಲಿ ನಾನು ‘ಸ್ಪ್ಲಿಟ್‌ ಯುನಿಟ್‌’ (ಕಟ್ಟಡದ ಹೊರ ಮತ್ತು ಒಳಭಾಗದಲ್ಲಿ ಅಳವಡಿಸಲಾಗುವ ಹವಾ ನಿಯಂತ್ರಣ ಸಾಧನ)  ಖರೀದಿಸಿದ್ದೆ.

ಸಾಧನವನ್ನು ಮನೆಗೆ ಅಳವಡಿಸಿದ ಮೂರೇ ದಿನದಲ್ಲಿ ಇದರಿಂದ ಗಬ್ಬು ವಾಸನೆ ಹೊರ ಹೊಮ್ಮಲಾರಂಭಿಸಿತು. ಇದಕ್ಕಾಗಿ ನಾನು ಕಂಪೆನಿಗೆ ದೂರು ನೀಡಿದ್ದೆ. ತಂತ್ರಜ್ಞರು ಬಂದು ಸರಿಪಡಿಸಿದ್ದರು. ಮತ್ತೆ ಇದೇ ರೀತಿ ಅಸಹನೀಯ ವಾಸನೆ ಹೊರಬರಲು ಆರಂಭಿಸಿತು. ಪುನಃ  ದೂರು ನೀಡಿದೆ.

ಈ ಬಾರಿ ತಂತ್ರಜ್ಞರು ಮನೆಯ ಒಳಗೆ ಅಳವಡಿಸಿದ್ದ ಭಾಗದ ಪರಿಶೀಲನೆ ನಡೆಸಿ ಸುಗಂಧ ದ್ರವ್ಯ ಪೂಸಿ ಹೋಗಿದ್ದರು. ಆದರೆ ಮತ್ತೆ ಎರಡೇ ದಿನದಲ್ಲಿ ಮತ್ತೆ ಗಬ್ಬು ವಾಸನೆ ಬರಲಾರಂಭಿಸಿತು. ಇದರಿಂದ ರೋಸಿ ಹೋದ ನಾನು, ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗೆ ಇ ಮೇಲ್‌ ಮೂಲಕ ದೂರು ನೀಡಿದೆ. ಆದರೆ ಪ್ರಯೋಜನವಾಗಿಲ್ಲ’ ಎಂದು ದೂರಿರುವ ಕೃತ್ತಿಕಾ ₹ 10 ಲಕ್ಷ ಮೊತ್ತದ ಪರಿಹಾರ ಕೋರಿದ್ದಾರೆ.
*
ಸುಶಿಕ್ಷಿತರಿಗೆ ಹೀಗಾದರೆ ಸಾಮಾನ್ಯರ ಪಾಡೇನು?
‘ನಮ್ಮ ಕಕ್ಷಿದಾರರು ಒರಾಕಲ್‌ ಇಂಡಿಯಾ ಲಿಮಿಟೆಡ್‌ ಕಂಪೆ ನಿಯ ಬೆಂಗಳೂರು ಕಚೇರಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಸಾಕಷ್ಟು ಸುಶಿಕ್ಷಿತರಿದ್ದಾರೆ. ಮೊಬೈಲ್ ಫೋನು, ಸ್ಮಾರ್ಟ್‌ ಫೋನು, ಪಾನೆಲ್‌ ಟಿ.ವಿಗಳು, ರೆಫ್ರಿಜ ರೇಟರು, ಹವಾ ನಿಯಂತ್ರಣ ಸಾಧನ ಮತ್ತು ಹಲವು ಬಗೆಯ ಎಲೆಕ್ಟ್ರಾನಿಕ್‌ ವಸ್ತುಗಳ  ಮಾರಾಟದಲ್ಲಿ ಮುಂಚೂಣಿ ಯಲ್ಲಿರುವ ಸ್ಯಾಮ್‌ಸಂಗ್ ಕಂಪೆನಿ ಸುಶಿಕ್ಷಿತರ ದೂರನ್ನೇ ನಿರ್ಲಕ್ಷಿಸಿದರೆ ಸಾಮಾನ್ಯರ ಪಾಡೇನು’ ಎಂಬುದು ದೂರು ದಾರರ ಪರ ವಕೀಲ ಕೆ.ಜಿ. ಅಯ್ಯಪ್ಪ ಅವರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.