ADVERTISEMENT

ಐದು ವರ್ಷ ಪೂರೈಸಿದ ‘ನಮ್ಮ ಮೆಟ್ರೊ’

ಬೈಯಪ್ಪನಹಳ್ಳಿ –ಎಂ.ಜಿ. ರಸ್ತೆವರೆಗಿನ ಮಾರ್ಗ * ಕ್ರಮಿಸಿದ್ದು ಕಡಿಮೆ– ಸಾಧಿಸಬೇಕಾದುದು ಬಹಳಷ್ಟು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2016, 19:51 IST
Last Updated 19 ಅಕ್ಟೋಬರ್ 2016, 19:51 IST
ಐದು ವರ್ಷ ಪೂರೈಸಿದ ‘ನಮ್ಮ ಮೆಟ್ರೊ’
ಐದು ವರ್ಷ ಪೂರೈಸಿದ ‘ನಮ್ಮ ಮೆಟ್ರೊ’   

ಬೆಂಗಳೂರು: ನಗರದಲ್ಲಿ ‘ನಮ್ಮ ಮೆಟ್ರೊ’ ರೈಲು ಸೇವೆ ಆರಂಭವಾಗಿ ಇಂದಿಗೆ ಐದು ವರ್ಷ ತುಂಬಿದೆ. ಸಮಗ್ರ ಯೋಜನೆಯನ್ನು ಪರಿಗಣಿಸಿದರೆ, ಮೆಟ್ರೊ ಕ್ರಮಿಸಿದ ಹಾದಿ ಕಡಿಮೆ. ಇನ್ನು ಕ್ರಮಿಬೇಕಾದ ಗುರಿ ಬಹಳಷ್ಟಿದೆ.

2011ರ ಅಕ್ಟೋಬರ್‌ 20ರಂದು ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗೆ  ಮೆಟ್ರೊ ರೈಲು ಸೇವೆ ಆರಂಭಿಸಿದ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌), ಇನ್ನೂ ಲಾಭದ ಹಳಿಗೆ ಬಂದಿಲ್ಲ. ಆದರೆ ಮೆಟ್ರೊ ಮೊದಲ ಹಂತದಲ್ಲಿ ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ (ಮೈಸೂರು ರಸ್ತೆ– ಬೈಯಪ್ಪನಹಳ್ಳಿ) ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ ಆರಂಭವಾದ ಬಳಿಕ ಪ್ರಯಾಣಿಕರಿಂದ ಬಂದ ಪ್ರತಿಕ್ರಿಯೆ ಭರವಸೆ ಮೂಡಿಸಿದೆ.

ಆರಂಭದ ವರ್ಷದಲ್ಲಿ 41.65 ಲಕ್ಷ ಮಂದಿ  ಮೆಟ್ರೊ ಬಳಸಿದ್ದರು.  2016–17ರಲ್ಲಿ  ಸೆಪ್ಟೆಂಬರ್‌ವರೆಗೆ 2.47 ಕೋಟಿ ಮಂದಿ ಮೆಟ್ರೊ ಬಳಸಿದ್ದಾರೆ. ಈ ವರ್ಷ ಸೆಪ್ಟೆಂಬರ್‌ವರೆಗೆ ನಿಗಮವು ₹ 51.16 ಕೋಟಿ ಆದಾಯ ಗಳಿಸಿದೆ. ಮೊದಲ ಹಂತ ಪೂರ್ಣಕೊಂಡು ಉತ್ತರ ದಕ್ಷಿಣ ಕಾರಿಡಾರ್‌ (ನಾಗಸಂದ್ರದಿಂದ ಪುಟ್ಟೇನಹಳ್ಳಿವರೆಗೆ) ರೈಲು ಸಂಚಾರ ಆರಂಭವಾದರೆ ಮೆಟ್ರೊ ಬಳಸುವವರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಮೊದಲ ಹಂತ ವಿಳಂಬ: ಮೊದಲ ಹಂತದಲ್ಲಿ ಒಟ್ಟು 8.82 ಕಿ.ಮೀ ಸುರಂಗ ಮಾರ್ಗವಿದ್ದು, ಸೆಪ್ಟೆಂಬರ್‌ 23 ರಂದು ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಂಡಿದೆ. ಸುರಂಗಕ್ಕೆ ಹಳಿ ಅಳವಡಿಸುವುದು, ವಿದ್ಯುದೀಕರಣ ಕಾಮಗಾರಿ ಬಾಕಿ ಇದೆ.

ಮೊದಲ ಹಂತ 2016ರ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಈ ಹಿಂದೆ ಬಿಎಂಆರ್‌ಸಿಎಲ್‌ ಪ್ರಕಟಿಸಿತ್ತು. ಆದರೆ, ಸುರಂಗ ಕೊರೆಯುವ ಕಾಮಗಾರಿ ವಿಳಂಬವಾಗಿದ್ದರಿಂದ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಪೂರ್ಣಪ್ರಮಾಣದಲ್ಲಿ ರೈಲು ಸಂಚಾರ ಆರಂಭಿಸಲು ಮುಂದಿನ ಮಾರ್ಚ್‌ವರೆಗೆ ಕಾಯಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಸಾಧಿಸಿದ್ದು ಕಡಿಮೆ: ಮೊದಲ ಹಂತದಲ್ಲಿ 33.8 ಕಿ.ಮೀ ಎತ್ತರಿಸಿದ ಮಾರ್ಗ ಹಾಗೂ 8.82 ಕಿ.ಮೀ. ಸುರಂಗ ಮಾರ್ಗ ನಿರ್ಮಿಸುವ ಗುರಿ ಬಹುತೇಕ ಅಂತಿಮ ಘಟ್ಟದಲ್ಲಿದೆ. ಮೊದಲ ಹಂತ ವಿಳಂಬವಾದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪವೂ ವ್ಯಕ್ತವಾಗಿತ್ತು. ಮೆಟ್ರೊ ಯೋಜನೆಗಳ ತಜ್ಞರಾದ ಇ.ಶ್ರಿಧರನ್‌ ಅವರೂ ಈ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಟೀಕಿಸಿದ್ದರು.

ಕ್ರಮಿಸಬೇಕಾದುದು ಬಹಳ: ಎರಡನೇ ಹಂತದಲ್ಲಿ 13.79 ಕಿ.ಮೀ ಸುರಂಗಮಾರ್ಗವೂ ಸೇರಿದಂತೆ 72.09 ಕಿ.ಮೀ. ಮಾರ್ಗ ನಿರ್ಮಿಸಬೇಕಾಗಿದೆ. ಒಟ್ಟು 61 ನಿಲ್ದಾಣಗಳು ನಿರ್ಮಾಣವಾಗಲಿದ್ದು, ಈ ಪೈಕಿ 12 ನೆಲದಡಿಯ ನಿಲ್ದಾಣಗಳಿವೆ.

ಎರಡನೇ ಹಂತ ಪ್ರಗತಿಯಲ್ಲಿ
*ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್‌ವರೆಗಿನ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.
*ಮೈಸೂರು ರಸ್ತೆಯ ಜಂಕ್ಷನ್‌ನಿಂದ ಕೆಂಗೇರಿ ವರೆಗಿನ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.
*ನಾಗಸಂದ್ರದಿಂದ ಬೆಂಗಳೂರು ಇಂಟರ್‌ನ್ಯಾಷನಲ್‌ ಎಕ್ಸಿಬಿಷನ್‌ ಸೆಂಟರ್‌ವರೆಗಿನ ಕಾಮಗಾರಿಗೆ ಅಧಿಸೂಚನೆ ಹೊರಡಿಸಲಾಗಿದೆ.
*ಪುಟ್ಟೇನಹಳ್ಳಿಯಿಂದ ಅಂಜನಾಪುರದವರೆಗಿನ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ.
*ಆರ್‌.ವಿ.ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರ ಮಾರ್ಗದ ಕಾಮಗಾರಿ  ಸಲುವಾಗಿ ಅಗತ್ಯ ಮೂಲಸೌಕರ್ಯಗಳನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT