ADVERTISEMENT

‘ಒಕ್ಕಲಿಗ ಮಠಾಧೀಶರು ಒಗ್ಗಟ್ಟಾಗಲಿ’

ಕೆ.ಎಚ್‌.ರಾಮಯ್ಯ ಸಂಸ್ಮರಣ ಗ್ರಂಥ ಬಿಡುಗಡೆ, ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಗರದಲ್ಲಿ ಸೋಮವಾರ 'ರಾಜ್ಯ ಒಕ್ಕಲಿಗರ ಸಂಘ' ಮತ್ತು 'ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್' ಜಂಟಿಯಾಗಿ ಕುವೆಂಪು ಕಲಾಕ್ಷೇತ್ರ ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ (ಎಡದಿಂದ ನಾಲ್ಕನೆಯವರು) ‘ಒಕ್ಕಲಿಗರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಕೆ.ಎಚ್‌.ರಾಮಯ್ಯ ಅವರ ಸಂಸ್ಮರಣ ಗ್ರಂಥ ಬಿಡುಗಡೆ ಮಾಡಿದರು. (ಎಡದಿಂದ) ಜೆ.ಡಿ.ಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ, ನಂಜಾವಧೂತ ಸ್ವಾಮೀಜಿ, ಕುಮಾರಚಂದ್ರಶೇಖರನಾಥ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪದ್ಮಶೇಖರ್, ಸಂಸ್ಕರಣ ಗ್ರಂಥ ಸಂಪಾದಕ ಹ.ಕ. ರಾಜೇಗೌಡ ಮತ್ತು ಸಚಿವ ಡಿ.ವಿ ಸದಾನಂದ ಗೌಡ ಇದ್ದರು. -ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಒಕ್ಕಲಿಗ ಸಮಾಜದಲ್ಲಿ ಏಕತೆ ಮೂಡಿಸಲು ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡಲು ಒಕ್ಕಲಿಗ ಮಠಾಧೀಶರು ಒಗ್ಗಟ್ಟಾಗಬೇಕು’ ಎಂದು ಸಂಸದ ಎಚ್‌.ಡಿ.ದೇವೇಗೌಡ ಸಲಹೆ ನೀಡಿದರು.

ರಾಜ್ಯ ಒಕ್ಕಲಿಗರ ಸಂಘ ಮತ್ತು ಕೃಷ್ಣಪ್ಪ ರಂಗಮ್ಮ ಎಜುಕೇಷನ್‌ ಟ್ರಸ್ಟ್‌ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಕೆ.ಎಚ್‌.ರಾಮಯ್ಯ ಕುರಿತ ಸಂಸ್ಮರಣ ಗ್ರಂಥ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ  ಕುಮಾರಚಂದ್ರಶೇಖರ ಸ್ವಾಮೀಜಿ ಹಾಗೂ ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಅವರನ್ನು ಉದ್ದೇಶಿಸಿ ದೇವೇಗೌಡರು, ‘ನಾವು ಎಷ್ಟು ದಿನ ರಾಜಕೀಯ ಮಾಡಲು ಸಾಧ್ಯ. ಆರೋಗ್ಯ ಕೂಡ ಕೈಕೊಡುತ್ತಿದೆ. ನೀವು ಮೂವರು ಸ್ವಾಮೀಜಿಗಳು ಒಗ್ಗಟ್ಟಾಗಬೇಕು’ ಎಂದರು.

ADVERTISEMENT

‘ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ನನ್ನ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯ ಇರಲಿಲ್ಲ. ಕೆಲಸಗಳ ವಿಚಾರದಲ್ಲಿ ಅಭಿಪ್ರಾಯಭೇದವಿತ್ತು. ಒಕ್ಕಲಿಗ ಸಮಾಜದ ಶಿಕ್ಷಣ, ಸಂಘಟನೆಗೆ ಸ್ವಾಮೀಜಿ ಕೊಟ್ಟಿರುವ ಕೊಡುಗೆ ಅನನ್ಯ. ಕೆ.ಎಚ್‌.ರಾಮಯ್ಯ ಅವರು ಸಹ ಸಮಾಜಕ್ಕೆ ಸ್ಮರಣೀಯ ಕೊಡುಗೆ ನೀಡಿದ್ದಾರೆ. ಎಲ್ಲ ಹಿಂದುಳಿದ ವರ್ಗದವರನ್ನು ಮೇಲೆತ್ತುವ ಹಂಬಲ ಅವರಲ್ಲಿತ್ತು’ ಎಂದು ಸ್ಮರಿಸಿದರು.

‘ಸಚಿವ ಸದಾನಂದಗೌಡರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನಾಡಿದರೆ ಅವರ ಪಕ್ಷದೊಳಗಿರುವ ನಮ್ಮ ಸಮುದಾಯದವರೇ ಸಹಿಸುವುದಿಲ್ಲ. ಇದೇ ನಮ್ಮ ಸಮಾಜದ ದೊಡ್ಡ ದೌರ್ಬಲ್ಯ. ಸದಾನಂದಗೌಡ ಮುಖ್ಯಮಂತ್ರಿ ಆದಾಗಲೂ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆಯಾಗದಂತೆ ತಡೆಯುವ ಕುತಂತ್ರ ನಡೆದವು. ಆಗಲೂ ನಾವು ಅವರಿಗೆ ನೆರವು ಕೊಟ್ಟಿದ್ದೇವೆ. ಎಸ್‌.ಎಂ.ಕೃಷ್ಣ ಅವರಿಗೂ ಸಹಕಾರ ಕೊಟ್ಟಿದ್ದೇವೆ. ಆದರೆ, ನಾನು ಪ್ರಧಾನಿಯಾಗಲು ಹೊರಟಾಗ ನನ್ನ ಮಂತ್ರಿಮಂಡಲದಲ್ಲಿದ್ದವರೇ ಕನಿಷ್ಠ ಒಂದು ಚಹಾಕೂಟ ಮಾಡಿ ಬೀಳ್ಕೊಟ್ಟಿರಲಿಲ್ಲ. ರಾಜಕೀಯ ದ್ವೇಷ, ಅಸಹಿಷ್ಣುತೆ ತೋರಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಂಥ ಸಂಪಾದಕ ಹ.ಕ.ರಾಜೇಗೌಡ ಮಾತನಾಡಿ, ‘ಶತಮಾನಗಳಿಂದಲೂ ಒಕ್ಕಲಿಗರು ಬೆಳೆ ಬೆಳೆದು, ಎಲ್ಲ ವರ್ಗದ ಜನರಿಗೆ ಅನ್ನ ನೀಡಿದ್ದೇವೆ. ಗೌಡ ಎಂದು ಗುರುತಿಸಿಕೊಳ್ಳಲು ಒಕ್ಕಲಿಗರು ಸಂಕೋಚಪಡಬಾರದು’ ಎಂದರು.

*
ಜೀವನದ ಉದ್ದಕ್ಕೂ ಸ್ವಾಭಿಮಾನದಿಂದ ಹೋರಾಡಿದ್ದೇನೆ. ಎಂತಹ ಸನ್ನಿವೇಶದಲ್ಲೂ ಬಿಟ್ಟುಕೊಟ್ಟಿಲ್ಲ. ಒಕ್ಕಲಿಗರು ಎಂದಿಗೂ ಸ್ವಾಭಿಮಾನವನ್ನು ಬಿಡಬೇಡಿ.
–ಎಚ್‌.ಡಿ.ದೇವೇಗೌಡ, ಸಂಸದ

*
ದೇವೇಗೌಡರು, ನಾನು ಬೇರೆ ಬೇರೆ ಪಕ್ಷದಲ್ಲಿರಬಹುದು. ಸಮಾಜದ ವಿಚಾರ ಬಂದಾಗ ನಾವೆಲ್ಲರೂ ಒಂದೇ. ದೇವೇಗೌಡರೇ ನನ್ನ ನಾಯಕ.
–ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

*
ಕೆ.ಎಚ್‌.ರಾಮಯ್ಯ ಸ್ಮರಣಾರ್ಥ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಸಂಘ ನಿರ್ಧಾರ ತೆಗೆದುಕೊಂಡಿದೆ.
–ಡಿ.ಎನ್‌.ಬೆಟ್ಟೇಗೌಡ,ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.