ADVERTISEMENT

‘ಒಟ್ಟಿಗೆ ಉಣ್ಣಲು ಹಿಂಜರಿಯುವವರು ದೇಶದ್ರೋಹಿಗಳು’

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 20:08 IST
Last Updated 20 ಜನವರಿ 2017, 20:08 IST
ಪ್ರೊ.ಕಾಂಚ ಐಲಯ್ಯ ಶೆಫರ್ಡ್‌  ಅವರು ಮಾತನಾಡಿದರು –ಪ್ರಜಾವಾಣಿ ಚಿತ್ರ
ಪ್ರೊ.ಕಾಂಚ ಐಲಯ್ಯ ಶೆಫರ್ಡ್‌ ಅವರು ಮಾತನಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಾನತೆಯ ತತ್ವದಲ್ಲಿ ನಂಬಿಕೆ ಇಲ್ಲದವರು, ಎಲ್ಲರ ಒಟ್ಟಿಗೆ ಉಣ್ಣಲು ಹಿಂದೇಟು ಹಾಕುವವರೇ ನಿಜವಾದ ದೇಶದ್ರೋಹಿಗಳು’ ಎಂದು ಲೇಖಕ ಪ್ರೊ.ಕಾಂಚ ಐಲಯ್ಯ ಶೆಫರ್ಡ್‌ ಅಭಿಪ್ರಾಯಪಟ್ಟರು.

ಭಾರತೀಯ ಸಾಮಾಜಿಕ ಸಂಸ್ಥೆಯು ಹೆನ್ರಿ ವೋಲ್ಕನ್‌ ಸ್ಮರಣಾರ್ಥ ಶುಕ್ರವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಗೋವಿನ ವಿರುದ್ಧ ಎಮ್ಮೆ: ಹೊಸ ರಾಷ್ಟ್ರೀಯತೆ’ ಕುರಿತು  ಮಾತನಾಡಿದರು.

‘ಬ್ರಾಹ್ಮಣರನ್ನು ಪೂಜ್ಯ ಭಾವದಿಂದ ನೋಡದವರು ನರಕಕ್ಕೆ ಹೋಗುತ್ತಾರೆ ಎಂಬ ತಪ್ಪುಕಲ್ಪನೆಯನ್ನು ಬಿತ್ತಲಾಗುತ್ತಿದೆ. ದಲಿತರು ಯಾರೂ ನರಕಕ್ಕೆ ಹೋಗುವುದಿಲ್ಲ. ಅವರು ಮಣ್ಣನ್ನು ಉತ್ತು, ಆಹಾರವನ್ನು  ಬೆಳೆಯುವವರು. ನರಕವೇನಿದ್ದರೂ  ಇನ್ನೊಬ್ಬರ ಬೆವರಿನ ಫಲವನ್ನು ಉಣ್ಣುವವರಿಗೆ ಮೀಸಲು’ ಎಂದು ಛೇಡಿಸಿದರು.

‘ದೇಶದಲ್ಲಿ ಉತ್ಪಾದನೆ ಆಗುವ ಹಾಲಿನ ಪೈಕಿ ಎಮ್ಮೆಯ ಕೊಡುಗೆ ಶೇಕಡಾ 72.2ರಷ್ಟು. ಶೇಕಡಾ 16ರಷ್ಟು ಹಾಲು ಮಾತ್ರ ಹಸುವಿನದ್ದು. ಆದರೂ ಹಸುವಿಗೆ ಸಿಗುವ ಸಿಗುವ ಮನ್ನಣೆ ಎಮ್ಮೆಗೆ ಸಿಕ್ಕಿಲ್ಲ. ಏಕೆಂದರೆ ಅದರ ಬಣ್ಣ ಕಪ್ಪು. ಈ ಬಗ್ಗೆ ಮಾತನಾಡಿದ ನನಗೆ ದೇಶ ವಿರೋಧಿ ಎಂಬ ಪಟ್ಟಕಟ್ಟಲಾಗಿದೆ’ ಎಂದರು.

‘ಗೋವು ಮತ್ತು ಕುದುರೆ ಮೂಲತಃ ಭಾರತದ್ದಲ್ಲ. ಆದರೆ, ಎಮ್ಮೆ ಮೂಲತಃ ಭಾರತದ್ದು. ಜಗತ್ತಿನ ಬೇರೆ ಯಾವ ದೇಶದಲ್ಲೂ ಎಮ್ಮೆಗಳನ್ನು ಸಾಕುವುದಿಲ್ಲ.  ಗೊಲ್ಲರು, ಯಾದವರು  ಕಾಡೆಮ್ಮೆಗಳನ್ನು ಪಳಗಿಸಿ ಅವುಗಳನ್ನು ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡರು. ಗೋವಿಗೆ ದೇಶದ ರಾಷ್ಟ್ರೀಯ ಪ್ರಾಣಿ ಎಂಬ ಗೌರವ ಸಿಗಬೇಕು ಎನ್ನುವವರಿಗೆ ಈ ಸತ್ಯ ಗೊತ್ತಿಲ್ಲ’ ಎಂದರು.  

‘ಹಿಂದುತ್ವದ ಪ್ರತಿಪಾದಕರಿಗೆ ಅಂಕಿ ಅಂಶಗಳಲ್ಲಿ ನಂಬಿಕೆ ಇಲ್ಲ. ಏಕೆಂದರೆ ಅವರು ವಿಶ್ವಾಸ ಇಡುವುದು ನಂಬಿಕೆಗಳಲ್ಲಿ ಮಾತ್ರವೇ ಹೊರತು ಸತ್ಯಾಂಶದಲ್ಲಿ ಅಲ್ಲ’  ಎಂದು ಅವರು ವ್ಯಂಗ್ಯವಾಗಿ ಹೇಳಿದರು.

‘ಆಹಾರ ಉತ್ಪಾದನೆ, ಸಂತಾನೋತ್ಪಾದನೆ  ಹಾಗೂ ರಕ್ಷಣೆ ಮೂರು ಮುಖ್ಯ ವಿಚಾರಗಳು. ಆಹಾರ ಉತ್ಪಾದನೆ ಹಾಗೂ ರಕ್ಷಣೆಯ ವಿಷಯದಲ್ಲಿ  ಬ್ರಾಹ್ಮಣರ ಕೊಡುಗೆ ಶೂನ್ಯ. ದೇಶದ ಸೇನೆಯಲ್ಲಿ ವಿವಿಧ ರೆಜಿಮೆಂಟ್‌ಗಳಿವೆ. ಆದರೆ, ಬ್ರಾಹ್ಮಣರ ರೆಜಿಮೆಂಟ್‌ ಎಂಬ ಹೆಸರು ಕೇಳಿದ್ದೀರಾ? ಅವರು ಸೇನೆ ಸೇರುವುದಿಲ್ಲ. ದೇಶದೊಳಗೆ ಇದ್ದು ಅಧಿಕಾರ ಹೊಂದಲು ಬಯಸುತ್ತಾರೆ’ ಎಂದರು.

‘ದೇಶದ ಬ್ರಾಹ್ಮಣರ ಪೈಕಿ ಶೇಕಡಾ 99ರಷ್ಟು ಮಂದಿಗೆ ಇಂಗ್ಲಿಷ್‌ ಶಿಕ್ಷಣದ ಅವಕಾಶ ಸಿಕ್ಕಿದೆ. ದಲಿತರಿಗೆ ಈ ಅವಕಾಶವನ್ನು ನಿರಾಕರಿಸಲಾಗಿದೆ’ ಎಂದರು. ಜಲ್ಲಿಕಟ್ಟು ಕ್ರೀಡೆಯನ್ನು ಉಳಿಸಿಕೊಳ್ಳಬೇಕೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೆಲವೊಂದು ದೇಸಿ ಕ್ರೀಡೆಗಳನ್ನು ಮಾರ್ಪಾಡುಮಾಡಿಕೊಂಡು ಮುಂದುವರಿಸಬಹುದು. ಜಲ್ಲಿಕಟ್ಟು ಹೆಸರಿನಲ್ಲಿ ಪ್ರಾಣಿಯ ಕಾಲು ಮುರಿಯುವುದನ್ನು ಒಪ್ಪಿಕೊಳ್ಳಲಾಗದು’ ಎಂದರು.

***
ಕಪ್ಪು ಎಮ್ಮೆಯ ಬಿಳಿ ಹಾಲು ಎಲ್ಲರಿಗೂ ಬೇಕು. ಆದರೆ, ಅದರ ಕಪ್ಪು ದೇಹ ಮಾತ್ರ ದೇಶ ವಿರೋಧಿ. ಹಾಗಾಗಿ,   ಹಸುವಿಗೆ ಸಿಕ್ಕ ಪವಿತ್ರ ಸ್ಥಾನ ಎಮ್ಮೆಗೆ ಸಿಗುವುದಿಲ್ಲ
ಪ್ರೊ.ಕಾಂಚ ಐಲಯ್ಯ ಶೆಫರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.