ADVERTISEMENT

ಒತ್ತುವರಿದಾರರ ಧಮಕಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:55 IST
Last Updated 28 ನವೆಂಬರ್ 2014, 19:55 IST

ಬೆಂಗಳೂರು: ಸರ್ಕಾರಿ ಕೆರೆಯ ಒತ್ತುವರಿ ತೆರವು ಮಾಡಿದ್ದಕ್ಕೆ ಆಕ್ರೋಶಗೊಂಡ ಒತ್ತುವರಿದಾರರೊಬ್ಬರು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಗೆ ಧಮಕಿ ಹಾಕಿದ ಘಟನೆ ನಡೆದಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್‌.ಪುರ ಸಮೀಪದ ಚೇಳಕೆರೆ ಗ್ರಾಮದಲ್ಲಿ ‘ರಾಯಲ್‌ ಕಾನ್‌ಕಾರ್ಡ್‌ ಅಂತರರಾಷ್ಟ್ರೀಯ ಶಾಲೆ’ ಮಾಡಿದ್ದ ನಾಲ್ಕು ಎಕರೆ ಸರ್ಕಾರಿ ಕೆರೆಯ ಒತ್ತುವರಿ­ಯನ್ನು ಜಿಲ್ಲಾಡಳಿತ ಬುಧವಾರ ತೆರವುಗೊಳಿಸಿತ್ತು.

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ­ಗೊಂಡ ತಕ್ಷಣ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ ಒತ್ತುವರಿದಾರರೊಬ್ಬರು, ‘ನಾನು ಒತ್ತುವರಿ ಮಾಡಿರುವುದಕ್ಕೆ ನಿಮ್ಮ ಬಳಿ ಯಾವ ಆಧಾರ ಇದೆ? ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡು­ತ್ತೇನೆ’ ಎಂದು ಬೆದರಿಕೆ ಹಾಕಿ­ದರು ಎಂದು ಮೂಲಗಳು ತಿಳಿಸಿವೆ.

ಮರುದಿನ ಬೆಳಿಗ್ಗೆ ಮತ್ತೊಬ್ಬ ಹಿರಿಯ ಅಧಿಕಾರಿಗೆ ಕರೆ ಮಾಡಿದ ಅದೇ ವ್ಯಕ್ತಿ, ‘ನಾವು ನೀವು ಗಾಜಿನ ಮನೆಯಲ್ಲಿ ಇರುವವರು. ಪರಸ್ಪರ ಕಲ್ಲೆಸೆಯುವ ಕೆಲಸ ಮಾಡಬಾರದು’ ಎಂದು ಎಚ್ಚರಿಸಿದರು.

‘ನಾನು ಒತ್ತುವರಿ ಮಾಡಿದ್ದೇನೆಂದು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದೀರಿ. ನಿಮಗೆಷ್ಟು ಧೈರ್ಯ? ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಧಮಕಿ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ನಾನು ಕಾನೂನು ವ್ಯಾಪ್ತಿ­ಯಲ್ಲೇ ಕೆಲಸ ಮಾಡಿದ್ದೇನೆ. ಒತ್ತುವರಿ­ಯಾದುದನ್ನು ತೆರವು ಮಾಡಿದ್ದೇನೆ. ಮೊಕದ್ದಮೆ ಹೂಡಿದರೆ ಕಾನೂನು ವ್ಯಾಪ್ತಿಯಲ್ಲೇ ಉತ್ತರ ನೀಡುತ್ತೇನೆ’ ಎಂದು ತಿರುಗೇಟು ನೀಡಿದರು. ಇದರಿಂದ ಮತ್ತಷ್ಟು ಕುಪಿತಗೊಂಡ ಒತ್ತುವರಿದಾರರು, ‘ನನ್ನ ಬಳಿ 300 ಎಕರೆ ಜಾಗ ಇದೆ. ನಾನ್ಯಾಕೆ ಒತ್ತುವರಿ ಮಾಡಲಿ?’  ಎಂದು ಪ್ರಶ್ನಿಸಿದರು.

‘ಜಾಗದ ಲೀಸ್‌ ಅವಧಿ ಮುಕ್ತಾಯ­ಗೊಂಡು ಆರು ತಿಂಗಳು ಕಳೆದಿದೆ. ನೀವು ಭೂಮಿಯನ್ನು ಸರ್ಕಾರದ ವಶಕ್ಕೆ ಒಪ್ಪಿಸ­ಬೇಕಿತ್ತು. ಒಪ್ಪಿಸದ ಕಾರಣ ನೋಟಿಸ್‌ ನೀಡಿ ಕಾನೂನು ಪ್ರಕಾರವೇ ಒತ್ತುವರಿ ತೆರವು ಮಾಡಲಾಗಿದೆ’ ಎಂದು ಅಧಿಕಾರಿ ಸ್ಪಷ್ಟಪಡಿಸಿದರು. ಅಧಿಕಾರಿಯ ಜೊತೆಗೆ ಒತ್ತುವರಿದಾರ ಸುಮಾರು 30 ನಿಮಿಷ ವಾಗ್ವಾದ ನಡೆಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ಗಬ್ಬೆದ್ದು ಹೋದ ಕೆರೆ: ‘ಶಾಲೆಗೆ ನಾಲ್ಕು ಎಕರೆ ಜಾಗವನ್ನು 10 ವರ್ಷಗಳ ಅವಧಿಗೆ ಲೀಸ್‌ ನೀಡಲಾಗಿತ್ತು. ಕೆರೆ­ಯನ್ನು ಸಮಗ್ರವಾಗಿ ಅಭಿವೃದ್ಧಿಪಡಿ­ಸ­ಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು. ಆದರೆ, ಶಾಲಾ ಆಡಳಿತ ಮಂಡಳಿ ಕೆರೆಯನ್ನು ಅಭಿವೃದ್ಧಿಪಡಿಸಿಲ್ಲ. ಕೆರೆ ಮತ್ತಷ್ಟು ಗಬ್ಬೆದ್ದು ಹೋಗಿದೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.