ADVERTISEMENT

ಒತ್ತುವರಿ ತೆರವಿಗೆ ಬಿಎಂಟಿಎಫ್‌ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 19:37 IST
Last Updated 21 ಆಗಸ್ಟ್ 2017, 19:37 IST

ಬೆಂಗಳೂರು: ರಾಜಕಾಲುವೆ ಮತ್ತು ಕೆರೆ ಒತ್ತುವರಿಯಿಂದಲೇ ಮಳೆನೀರು ತಗ್ಗು ಪ್ರದೇಶಗಳಲ್ಲಿ ರಸ್ತೆ, ಮನೆಗಳಿಗೆ ನುಗ್ಗಿತು ಎಂದು ನಾಗರಿಕರಿಂದ ವ್ಯಾಪಕ ಆರೋಪಗಳು ಕೇಳಿಬಂದ ಕಾರಣಕ್ಕೆ ಒತ್ತುವರಿ ತೆರವುಗೊಳಿಸಲು ಬಿಎಂಟಿಎಫ್‌ ಪೊಲೀಸ್‌ ಅಧಿಕಾರಿಗಳ ಆರು ತಂಡಗಳನ್ನು ರಚಿಸಿದೆ.

ಬಿಎಂಟಿಎಫ್‌ ಎಸ್‌ಪಿ ಲಕ್ಷ್ಮಿ ಗಣೇಶ್ ನೇತೃತ್ವದಲ್ಲಿ ಈ ತಂಡ ರಚಿಸಲಾಗಿದೆ. ಕಳೆದ ವಾರ ಸುರಿದ ಮಳೆಗೆ ಜಲಾವೃತಗೊಂಡಿದ್ದ ಕೋರಮಂಗಲ, ಜೆ.ಪಿ.ನಗರ, ಶಾಂತಿನಗರ, ಮಹದೇವಪುರ, ಬೆಳ್ಳಂದೂರು, ವಾರ್ಡ್ ನಂ.87, ವಾರ್ಡ್ ನಂ.53 ಹಾಗೂ ವಾರ್ಡ್ ನಂ.149ರಲ್ಲಿ ಅಧಿಕಾರಿಗಳು ಮಂಗಳ
ವಾರದಿಂದ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಿದ್ದಾರೆ.

‘ಒಂದು ವಾರದಿಂದ ಸುರಿದ ಮಳೆಯಿಂದ ನಗರದಲ್ಲಿ ಕೆರೆಗಳು ತುಂಬಿ, ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯದೆ, ತಗ್ಗುಪ್ರದೇಶಕ್ಕೆ ನುಗ್ಗಿತ್ತು. ಸಾರ್ವಜನಿಕರ ಆಸ್ತಿ ಹಾನಿಯಾಗಿರುವುದು ಮತ್ತು ಜನಜೀವನಕ್ಕೆ ತೊಂದರೆಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧ
ರಿಸಿ, ಒತ್ತುವರಿ ತೆರವಿಗೆ ಈ ತಂಡ ರಚಿಸಲಾಗಿದೆ’ ಎಂದು ಬಿಎಂಟಿಎಫ್‌ ಎಡಿಜಿಪಿ ಪ್ರಶಾಂತ್‌ ಕುಮಾರ್‌ ಠಾಕೂರ್‌ ತಿಳಿಸಿದರು.

ADVERTISEMENT

‘ಮಳೆಯಿಂದ ತೊಂದರೆಗೆ ಒಳಪಟ್ಟ ಸ್ಥಳಗಳಿಗೆ ಪೊಲೀಸ್‌ ಅಧಿಕಾರಿಗಳ ತಂಡ ಬಿಬಿಎಂಪಿ ಅಧಿಕಾರಿಗಳೊಂದಿಗೆ ಕ್ಯಾಮೆರಾಗಳ ಸಮೇತ ಭೇಟಿ ನೀಡಲಿದೆ. ಒತ್ತುವರಿದಾರರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಪಾಲಿಕೆ ಅಧಿಕಾರಿಗಳು ದೂರು ನೀಡಿದಲ್ಲಿ ಅಥವಾ ಸ್ಥಳ ಪರಿಶೀಲನೆಯಲ್ಲಿ ಒತ್ತುವರಿಯಾಗಿರುವುದು ಕಂಡುಬಂದಲ್ಲಿ ಪೊಲೀಸ್‌ ಅಧಿಕಾರಿಗಳು ಸ್ವಯಂಪ್ರೇರಿತ ಪ್ರಕರಣ ದಾಖಲಿಸುವರು’ ಎಂದು ಹೇಳಿದರು.

ಮುಖ್ಯ ಎಂಜಿನಿಯರ್‌ಗಳ ಎತ್ತಂಗಡಿ: ಮಳೆನೀರು ಬೃಹತ್‌ ಕಾಲುವೆ ಪುನಶ್ಚೇತನಗೊಳಿಸುವುದು ಮತ್ತು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಲು ವಿಫಲವಾಗಿರುವ ಕಾರಣಕ್ಕೆ ಪಾಲಿಕೆಯ ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ನಾಲ್ವರು ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಿ ಪಾಲಿಕೆ ಉಪ ಆಯುಕ್ತರು (ಆಡಳಿತ) ಸೋಮವಾರ ಆದೇಶ ಹೊರಡಿಸಿದ್ದಾರೆ.

ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಸಿದ್ದೇಗೌಡ ಅವರನ್ನು ಬೊಮ್ಮನಹಳ್ಳಿ ವಲಯದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ. ಅವರ ಸ್ಥಾನಕ್ಕೆ ಘನತ್ಯಾಜ್ಯ ನಿರ್ವಹಣೆಯ ಮುಖ್ಯ ಎಂಜಿನಿಯರ್‌ ಹಾಗೂ ಬೊಮ್ಮನಹಳ್ಳಿ ವಲಯದ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಆಗಿದ್ದ ಕೆ.ಟಿ.ಬೆಟ್ಟೇಗೌಡ ಅವರನ್ನು ವರ್ಗಾಯಿಸಲಾಗಿದೆ. ಅವರಿಗೆ ಘನತ್ಯಾಜ್ಯ ನಿರ್ವಹಣೆಯ ಹೊಣೆಯೂ ಇರಲಿದೆ.

ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರಿಗೆ ಹೆಚ್ಚುವರಿಯಾಗಿ ಟಿವಿಸಿಸಿ ಮುಖ್ಯ ಎಂಜಿನಿಯರ್‌ ಹುದ್ದೆ (ಪ್ರಭಾರ) ವಹಿಸಲಾಗಿದೆ. ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಯಿಂದ ಅವರನ್ನು ಮುಕ್ತಗೊಳಿಸಲಾಗಿದೆ. ಇಲ್ಲಿಗೆ ಟಿವಿಸಿಸಿ ಮುಖ್ಯ ಎಂಜಿನಿಯರ್‌ ಎಸ್‌.ಸೋಮಶೇಖರ್‌ ಅವರನ್ನು ವರ್ಗ ಮಾಡಲಾಗಿದೆ.

ಕೆ.ಟಿ.ನಾಗರಾಜ್‌ ಅವರನ್ನು ಮುಖ್ಯ ಎಂಜಿನಿಯರ್‌ (ಯೋಜನೆ–ಕೇಂದ್ರ) ಹುದ್ದೆಯಲ್ಲೇ ಮುಂದುವರಿಸಿ, ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.

‘ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸಚಿವರು, ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದ್ದರು. ಕಾಮಗಾರಿಯ ವಿಳಂಬಕ್ಕೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸದ್ಯದಲ್ಲೇ ಅಧಿಕಾರಿಗಳ ಎತ್ತಂಗಡಿ ಮಾಡುವ ಸುಳಿವು ನೀಡಿದ್ದರು. ಈಗ ವರ್ಗಾವಣೆ ಆದೇಶ ಹೊರಬಿದ್ದಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜಕಾಲುವೆಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಈ ಬಾರಿ ₹800 ಕೋಟಿ ಅನುದಾನ ನೀಡಿದೆ. ಆದರೆ, ಶೇ 50ರಷ್ಟೂ ಕಾಮಗಾರಿ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.