ADVERTISEMENT

ಒಳಗಿನವರಿಂದಲೇ ನ್ಯಾಯಾಂಗಕ್ಕೆ ಅಪಾಯ

ನ್ಯಾಯಮೂರ್ತಿ ಎನ್‌.ಕುಮಾರ್‌ಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 19:44 IST
Last Updated 27 ಜೂನ್ 2016, 19:44 IST
ನ್ಯಾಯಮೂರ್ತಿ ಎನ್‌.ಕುಮಾರ್  ಅವರಿಗೆ ಸೋಮವಾರ ರಾಜ್ಯ ವಕೀಲರ ಪರಿಷತ್‌ ವತಿಯಿಂದ ನೀಡಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಕುಮಾರ್‌ ಮತ್ತು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅವರು ಸಂತಸದಲ್ಲಿದ್ದ ಕ್ಷಣ    ಪ್ರಜಾವಾಣಿ ಚಿತ್ರ
ನ್ಯಾಯಮೂರ್ತಿ ಎನ್‌.ಕುಮಾರ್ ಅವರಿಗೆ ಸೋಮವಾರ ರಾಜ್ಯ ವಕೀಲರ ಪರಿಷತ್‌ ವತಿಯಿಂದ ನೀಡಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಕುಮಾರ್‌ ಮತ್ತು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅವರು ಸಂತಸದಲ್ಲಿದ್ದ ಕ್ಷಣ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನ್ಯಾಯಾಂಗಕ್ಕೆ ಒಳಗಿನ ಶಕ್ತಿಗಳಿಂದಲೇ ಅಪಾಯವಿದೆ’ ಎಂದು ನ್ಯಾಯಮೂರ್ತಿ ನಾಗರಾಜ ರಾವ್ ಕುಮಾರ್‌  ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ವಕೀಲರ ಸಂಘ ಹಾಗೂ ಪರಿಷತ್‌ನಿಂದ ಸೋಮವಾರ ಹೈಕೋರ್ಟ್‌ನಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು, ‘ಒಬ್ಬ ಕೆಟ್ಟ ನ್ಯಾಯಮೂರ್ತಿಯ ವರ್ತನೆ ಇಡೀ ನ್ಯಾಯಾಂಗದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದರು.

‘ವಕೀಲರ  ಸಂಘಗಳಲ್ಲಿ ಇವತ್ತು ಗುರು ಶಿಷ್ಯರ ಪ್ರೀತಿ- ವಿಶ್ವಾಸಗಳ ಬದಲಿಗೆ ಜಾತಿ, ರಾಜಕಾರಣ ಮತ್ತು ವ್ಯಾಪಾರಿ ಮನೋಧರ್ಮವೇ ತುಂಬಿಕೊಂಡಿದೆ’ ಎಂದು ಕುಮಾರ್ ವಿಷಾದಿಸಿದರು.

‘ಕೆಲವರು ವೃತ್ತಿ ನಡೆಸುವುದನ್ನು ಬಿಟ್ಟು, ರಾಜಕಾರಣ, ಚುನಾವಣೆ ಮಾಡಿಕೊಂಡು ದುಡ್ಡು ಗಳಿಸುತ್ತಿದ್ದಾರೆ. ಇಂಥವರು ವಕೀಲಿಕೆ ಮಾಡುವುದಕ್ಕೇ ಬರಬಾರದು.  ಇಂತಹ ಕೆಟ್ಟ ಜೀವನ ನಡೆಸಬಾರದು’ ಎಂದರು.

‘ವಕೀಲಿ ವೃತ್ತಿಗೆ ಒಳ್ಳೆಯ ಪರಂಪರೆ ಇದೆ. ಸಮಾಜ ನಮ್ಮನ್ನು ಸದಾ ಗಮನಿಸುತ್ತಿರುತ್ತದೆ. ವಕೀಲರಾಗ ಬಯಸುವವರು ಈ ವೃತ್ತಿಯನ್ನು ಮೆಚ್ಚಿ ಬರಬೇಕು. ತನ್ಮೂಲಕ ವೃತ್ತಿಯ ನಡತೆ ಮತ್ತು ದೃಢತೆಯನ್ನು ಹೆಚ್ಚಿಸಲು ಶ್ರಮಿಸಬೇಕು’ ಎಂದು ಕುಮಾರ್‌ ಹೇಳಿದರು.

ಗಂಟಲು ಬಿಗಿದ ಕ್ಷಣ: ವಕೀಲರ ಪರಿಷತ್‌ನಿಂದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡುವಾಗ ಕುಮಾರ್ ಕೆಲ ಕ್ಷಣ ಭಾವುಕರಾದರು. ಮಾತುಗಳ ಕೊನೆಯ ಹಂತದಲ್ಲಿ ಕಂಠ ಬಿಗಿದು ಬಂತು. ‘ನೀವೆಲ್ಲಾ ನನಗೆ 16 ವರ್ಷಗಳ ಕಾಲ ಪ್ರೀತಿಯನ್ನು ಧಾರೆ ಎರೆದಿದ್ದೀರಿ. ನಮಸ್ಕಾರ. ಬರ್ತೀನಿ’ ಎಂದು ಕೈಮುಗಿದು ಕೋರ್ಟ್‌ ಹಾಲ್‌ 1 ರಿಂದ ಹೊರ ನಡೆದರು.

ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮಾತನಾಡಿ, ‘ಕುಮಾರ್‌ ಅವರ ನಿವೃತ್ತಿಯ ಈ ಕ್ಷಣ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರ ನಿವೃತ್ತಿಯ ಕ್ಷಣಗಳನ್ನು ನೆನಪಿಸುತ್ತಿದೆ’ ಎಂದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್‌.ಸಿ.ಶಿವರಾಮು, ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ, ಖಜಾಂಚಿ ಎಚ್‌.ಪ್ರವೀಣಗೌಡ, ಹೈಕೋರ್ಟ್‌ ಘಟಕದ ಉಪಾಧ್ಯಕ್ಷ ಎಸ್‌.ರಾಜು, ಜಂಟಿ ಕಾರ್ಯದರ್ಶಿ ಎಂ.ಚಾಮರಾಜು ಇದ್ದರು.

ಒಂದೇ ದಿನಕ್ಕೆ ಲಾಯರ್‌ ಆಗಲು ಸಾಧ್ಯವಿಲ್ಲ...
‘ಒಂದು ಸುಂದರ ವಿಗ್ರಹಕ್ಕೆ ಸಾಕಷ್ಟು ಉಳಿ ಪೆಟ್ಟು ಬಿದ್ದಿರುತ್ತದೆ ಎಂಬುದನ್ನು ನಾವು ಮರೆಯಬಾರದು. ಅದೇ ರೀತಿ ಯಾರೂ ಒಂದೇ ದಿನದಲ್ಲಿ ಲಾಯರ್‌ ಆಗಲು ಸಾಧ್ಯವಿಲ್ಲ’ ಎಂದು ಕುಮಾರ್‌ ಹೇಳಿದರು.

‘ಇಂದು ಆಧುನಿಕ ತಂತ್ರಜ್ಞಾನವಿದೆ.  ಬುದ್ಧಿವಂತ ಯುವ ಜನಾಂಗವಿದೆ. ಈ ವೃತ್ತಿಗೆ ಮೇಧಾವಿ ತರುಣ ತರುಣಿಯರು ಕಾಲಿಡುತ್ತಿದ್ದಾರೆ. ಇವರಿಗೆಲ್ಲಾ ಹಿರಿಯರು ಸರಿಯಾದ ಮಾರ್ಗದರ್ಶನ ನೀಡದೇ ಹೋದರೆ ಸಮಾಜಕ್ಕೆ ಉಪಟಳವಾಗಿ ಪರಿಣಮಿಸುತ್ತಾರೆ’ ಎಂದು ಕುಮಾರ್‌ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT