ADVERTISEMENT

ಕಂಪೆನಿ ವಿರುದ್ಧ  ಕಾರ್ಮಿಕ ಇಲಾಖೆ ದೂರು

ಸಾಮೂಹಿಕ ಅತ್ಯಾಚಾರ ಪ್ರಕರಣ: ಸಾರಿಗೆ ಸೌಲಭ್ಯ, ಭದ್ರತೆ ಒದಗಿಸದೆ ಲೋಪ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:34 IST
Last Updated 8 ಅಕ್ಟೋಬರ್ 2015, 19:34 IST

ಬೆಂಗಳೂರು: ಬಿಪಿಒ ಕಂಪೆನಿ ಉದ್ಯೋಗಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯೋಗಿಗೆ ಸೂಕ್ತ ಸಾರಿಗೆ ಮತ್ತು ಭದ್ರತಾ ಸೌಲಭ್ಯ ಕಲ್ಪಿಸದ ಕಂಪೆನಿ ವಿರುದ್ಧ ಕಾರ್ಮಿಕ ಇಲಾಖೆ ಮಡಿವಾಳ ಠಾಣೆಯಲ್ಲಿ ದೂರು ದಾಖಲಿಸಿದೆ.

 ಮಹಿಳಾ ಉದ್ಯೋಗಿಗಳಿಗೆ ರಾತ್ರಿ 8 ರಿಂದ ಬೆಳಗಿನ ಜಾವ 6 ಗಂಟೆವರೆಗೆ ಸಾರಿಗೆ ಸೌಲಭ್ಯ ಮತ್ತು ಅಗತ್ಯ ಭದ್ರತಾ ಸಿಬ್ಬಂದಿಯೊಬ್ಬರನ್ನು ನಿಯೋಜಿಸುವುದು ಕಂಪೆನಿಗಳ ಕರ್ತವ್ಯವಾಗಿದೆ. ಆದರೆ, ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಕಂಪೆನಿ ಈ ನಿಯಮವನ್ನು ಪಾಲಿಸಿಲ್ಲ ಎಂದು ಇಲಾಖೆ ದೂರಿನಲ್ಲಿ ತಿಳಿಸಿದೆ.

ಸ್ವಯಂ ದೂರು: ಘಟನೆಗೆ ಸಂಬಂಧಿಸಿಂತೆ ಇಲಾಖೆ ಕಾರ್ಮಿಕ ಕಾಯ್ದೆಯಡಿ ಕಂಪೆನಿ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂದು ವೇಳೆ ಕಂಪೆನಿ ಪರವಾನಗಿ ರದ್ದು ಮಾಡುವಂತೆ ಶಿಫಾರಸು ಮಾಡಿದರೆ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನಗರದಲ್ಲಿರುವ ಬಿಪಿಒ ಕಂಪೆನಿಗಳು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

45 ಟಿಟಿಗಳ ವಿರುದ್ಧ ಪ್ರಕರಣ: ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಹೊರವರ್ತುಲ ರಸ್ತೆಗಳಲ್ಲಿ ಬುಧವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ಪರವಾನಗಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 45 ಟೆಂಪೊ ಟ್ರಾವೆಲರ್‌ಗಳ (ಟಿಟಿ) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.‘ಪರವಾನಗಿ ಹೊಂದಿರುವ ಕಂಪೆನಿಗಳ ಉದ್ಯೋಗಿಗಳನ್ನು ಮಾತ್ರ ಕರೆದೊಯ್ಯಬೇಕು. ಆದರೆ, ಉದ್ಯೋಗಿಗಳನ್ನು ಬಿಟ್ಟ ನಂತರ ಹಣಕ್ಕಾಗಿ ಬಸ್ಸು ನಿಲ್ದಾಣಗಳಲ್ಲಿ ಜನರನ್ನು ಹತ್ತಿಸಿಕೊಂಡು ಹೋಗುತ್ತಿದ್ದರು. ಇಂತಹ ವಾಹನಗಳಲ್ಲಿ ಸಾರ್ವಜನಿಕರು  ಪ್ರಯಾಣಿಸಬಾರದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಅಲ್ಲದೆ ಹೆಚ್ಚಿನ ಬಾಡಿಗೆ ವಸೂಲಿ, ಡಿಸ್‌ಪ್ಲೆ ಕಾರ್ಡ್ ಪ್ರದರ್ಶಿಸದಿರುವುದು ಹಾಗೂ ಕರೆದಲ್ಲಿಗೆ ಹೋಗದ ಆಟೊಗಳ ವಿರುದ್ಧ ಗುರುವಾರ ವಿವಿಧೆಡೆ ಕಾರ್ಯಾಚರಣೆ ನಡೆಸಿ, 568 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದರು.

270 ವಾಹನಗಳ ಜಪ್ತಿ: ನಿಯಮ ಉಲ್ಲಂಘನೆ ವಿರುದ್ದ ಕಾರ್ಯಾಚರಣೆ ಮುಂದುವರೆಸಿರುವ ಸಾರಿಗೆ ಇಲಾಖೆ, 270 ವಾಹನಗಳನ್ನು ಜಪ್ತಿ ಮಾಡಿ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದೆ. ಸಿಲ್ಕ್‌ಬೋರ್ಡ್ ಜಂಕ್ಷನ್, ಬಿಟಿಎಂ ಲೇಔಟ್‌, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 5 ಸಾವಿರ ವಾಹನಗಳ ತಪಾಸಣೆ ನಡೆಸಿದ ಅಧಿಕಾರಿಗಳು ಖಾಸಗಿ ಬಸ್ಸುಗಳು, ಮ್ಯಾಕ್ಸಿ ಕ್ಯಾಬ್‌, ಟ್ಯಾಕ್ಸಿ, ಕಾರು, ಟಿಟಿಗಳು ಸೇರಿದಂತೆ ಒಟ್ಟು 270 ವಾಹನಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ. ಟಿಟಿಗಳ ಒಳಭಾಗದಲ್ಲಿ ಅಳವಡಿಸಿದ್ದ ಸ್ಕ್ರೀನ್‌ಗಳು, ಪ್ರಖರ ದೀಪಗಳನ್ನು ತೆರವುಗೊಳಿಸಲಾಯಿತು ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.