ADVERTISEMENT

ಕದಿಯಲು ಹೋಗಿ ಕೊಂದು ಬಂದರು!

ಕೊಲೆ ರಹಸ್ಯ: ತಿಂಗಳ ನಂತರ ಬಯಲಾದ ಭದ್ರತಾ ಸಿಬ್ಬಂದಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 19:36 IST
Last Updated 30 ಏಪ್ರಿಲ್ 2016, 19:36 IST

ಬೆಂಗಳೂರು: ದೊಮ್ಮಲೂರಿನ ‘ಆಕ್ಟಿಸ್ ಟೆಕ್ನಾಲಜಿ’ ಕಂಪೆನಿಯಲ್ಲಿ ನಡೆದಿದ್ದ ಭದ್ರತಾ ಸಿಬ್ಬಂದಿ ರಾಮಚರಿತ ಮುಖಿಯಾ ಅಲಿಯಾಸ್ ರಾಮ್‌ಜೀ (50) ಎಂಬುವರ ಕೊಲೆ ಪ್ರಕರಣವನ್ನು ಭೇದಿಸಿರುವ ಇಂದಿರಾನಗರ ಪೊಲೀಸರು, ಅದೇ ಕಂಪೆನಿಯ ನೌಕರ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.

ಮಾರ್ಚ್ 26ರ ಮಧ್ಯರಾತ್ರಿ ಕಂಪೆನಿಗೆ ನುಗ್ಗಿದ್ದ ಎಂಟು ಮಂದಿ ಮುಸುಕುಧಾರಿಗಳು, ಅಲ್ಲಿನ ಭದ್ರತಾ ಸಿಬ್ಬಂದಿ ರಾಮ್‌ಜೀ ಅವರನ್ನು ಹತ್ಯೆಗೈದಿದ್ದರು. 

ಈ ಕುರಿತು ಶ್ರೀರಾಂಪುರದ ಮಂಜುನಾಥ್‌ (34), ರಾಜು (31), ಬಾಲ ಮುರುಗನ್ ಅಲಿಯಾಸ್ ಜಾಕ್ (22), ಚೆನ್ನೈನ ಪೃಥ್ವಿರಾಜ್ (20), ಶೇಷಾದ್ರಿಪುರದ ವಿಜಯ್ (36) ಹಾಗೂ ಬಿನ್ನಿಪೇಟೆಯ ರವಿಚಂದ್ರನ್ ಅಲಿಯಾಸ್ ಗುಂಡು (31) ಎಂಬುವರನ್ನು ಬಂಧಿಸಲಾಗಿದೆ. ಅರುಣ ಮತ್ತು ಸುರೇಶ್ ಎಂಬುವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್‌ಇಡಿ ಟಿ.ವಿಗಳು, ಪ್ರೊಜೆಕ್ಟರ್‌ಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಕಚೇರಿಯಲ್ಲಿ ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ತಿಳಿದಿದ್ದ ಕಂಪೆನಿ ಉದ್ಯೋಗಿ ಮಂಜುನಾಥ್, ಸ್ನೇಹಿತರಾದ ರಾಜು ಮತ್ತು ವಿಜಯ್ ಜತೆಗೂಡಿ ಅವುಗಳನ್ನು ಕಳವು ಮಾಡಲು ಸಂಚು ರೂಪಿಸಿದ್ದ. ಕೃತ್ಯಕ್ಕೆ ತಮ್ಮ ಸ್ನೇಹಿತರನ್ನೂ ಕರೆದುಕೊಂಡು ಬರುವುದಾಗಿ ಅವರು ಹೇಳಿದ್ದರು.

ಅದರಂತೆ ಮಾರ್ಚ್ 26ರ ರಾತ್ರಿ ಹಿಂಬಾಗಿಲು ಮುರಿದು ಕಚೇರಿಗೆ ನುಗ್ಗಿದ್ದ ಎಂಟು ಮಂದಿ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಟೊದಲ್ಲಿ ತುಂಬುವ ಯತ್ನದಲ್ಲಿದ್ದರು. ಈ ವೇಳೆ ಎಚ್ಚರಗೊಂಡ ರಾಮ್‌ಜೀ, ಕೃತ್ಯಕ್ಕೆ ಅಡ್ಡಿಪಡಿಸಿದ್ದರು. ಆಗ ಅವರ ಕೈ–ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿದ್ದ ಆರೋಪಿಗಳು, ಕೈನಿಂದ ಮೂಗು ಬಿಗಿ ಹಿಡಿದು ಉಸಿರುಗಟ್ಟಿಸಿ ಹತ್ಯೆಗೈದಿದ್ದರು. ನಂತರ ಕಳವು ಯೋಜನೆ ಕೈಬಿಟ್ಟು ಪರಾರಿಯಾಗಿದ್ದರು.

ಕ್ಯಾಮೆರಾದಲ್ಲಿ ಆಟೊ ಪತ್ತೆ: ಮರುದಿನ ಬೆಳಿಗ್ಗೆ ಕಂಪೆನಿ ವ್ಯವಸ್ಥಾಪಕ ಕರುಣಾನಿಧಿ ಅವರು ಕಚೇರಿಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅವರು ಇಂದಿರಾನಗರ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಕೃತ್ಯಕ್ಕೆ ಆಟೊದಲ್ಲಿ ಬಂದಿದ್ದ ಸಂಗತಿ ತಿಳಿದಿತ್ತು. ಅಲ್ಲದೆ, ಅದರ ನೋಂದಣಿ ಸಂಖ್ಯೆ ಕೂಡ ಸಿಕ್ಕಿತ್ತು.

‘ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ಅದು ಆರೋಪಿ ರವಿಚಂದ್ರನ್‌ನ ಆಟೊ ಎಂದು ಗೊತ್ತಾಯಿತು. ಸಾರಿಗೆ ಇಲಾಖೆ ಅಧಿಕಾರಿಗಳಿಂದ ಆ ಚಾಲಕನ ವಿಳಾಸ ತಿಳಿಯಿತು. ಮನೆ ಮೇಲೆ ದಾಳಿ ನಡೆಸುವಷ್ಟರಲ್ಲಿ ಆತ ಪರಾರಿಯಾಗಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ರವಿಚಂದ್ರನ್‌ನ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದಾಗ ಆತ ಕಂಪೆನಿ ನೌಕರ ಮಂಜುನಾಥ್ ಜತೆ ಸಂಪರ್ಕದಲ್ಲಿದ್ದ ಸಂಗತಿ ತಿಳಿಯಿತು. ನಂತರ ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟ. ಆತ ನೀಡಿದ ಮಾಹಿತಿ ಆಧರಿಸಿ ಉಳಿದವರನ್ನು ವಶಕ್ಕೆ ಪಡೆಯಲಾಯಿತು’ ಎಂದು ಮಾಹಿತಿ ನೀಡಿದರು.

ನಂತರವೂ ಕೆಲಸಕ್ಕೆ ಬರುತ್ತಿದ್ದ
‘ಮಂಜುನಾಥ, ರಾಜು ಹಾಗೂ ವಿಜಯ್ ಅವರು ಬಾರ್‌ವೊಂದರಲ್ಲಿ ಕುಳಿತು ದರೋಡೆಗೆ ಸಂಚು ರೂಪಿಸಿದ್ದರು. ಕಳವಿಗೆ ಹೋಗಿ ಕೊಲೆ ಮಾಡಿದ್ದರಿಂದ ಭೀತಿಗೆ ಒಳಗಾದ ಆರೋಪಿಗಳು, ಅನುಮಾನ ಬರಬಾರದೆಂದು ವಾಪಸ್ ಹೋಗಿ ಚೆಲ್ಲಾಪಿಲ್ಲಿ ಮಾಡಿದ್ದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮೊದಲಿನ ಹಾಗೆ ಜೋಡಿಸಿ ಬಂದಿದ್ದರು. ಅಲ್ಲದೆ, ಮಂಜುನಾಥ್‌ ಘಟನೆ ಬಗ್ಗೆ ಏನೂ ಅರಿಯದವನಂತೆ ಮರುದಿನ ಕೆಲಸಕ್ಕೆ ತೆರಳಿದ್ದ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.