ADVERTISEMENT

‘ಕನಕದಾಸ ಪ್ರೇಮಕವಿ’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 20:08 IST
Last Updated 4 ಫೆಬ್ರುವರಿ 2017, 20:08 IST
ಸಂಶೋಧನಾ ಕೇಂದ್ರದ ಸಮನ್ವಯ ಅಧಿಕಾರಿ ಕಾ.ತ.ಚಿಕ್ಕಣ್ಣ ಅವರು ಕಮಲಾ ಹಂಪನಾ ಅವರೊಂದಿಗೆ ಮಾತುಕತೆ ನಡೆಸಿದರು. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ ಇದ್ದರು
ಸಂಶೋಧನಾ ಕೇಂದ್ರದ ಸಮನ್ವಯ ಅಧಿಕಾರಿ ಕಾ.ತ.ಚಿಕ್ಕಣ್ಣ ಅವರು ಕಮಲಾ ಹಂಪನಾ ಅವರೊಂದಿಗೆ ಮಾತುಕತೆ ನಡೆಸಿದರು. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ ಇದ್ದರು   

ಬೆಂಗಳೂರು: ‘ಕನಕದಾಸ ಸಂತ, ಮಾರ್ಗದರ್ಶಕ, ಕೀರ್ತನೆಕಾರ, ಪ್ರತಿಭಟನಾಕಾರ ಮಾತ್ರವಲ್ಲ, ಆತ ಪ್ರೇಮಕವಿಯೂ ಆಗಿದ್ದಾನೆ’ ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಹೇಳಿದರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವೂ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಕನಕದಾಸರ ಕಾವ್ಯಗಳಲ್ಲಿ ಮಹಿಳಾ ಸಂವೇದನೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಕನಕದಾಸ ಮೋಹನ ತರಂಗಿಣಿ ಮತ್ತು ನಳಚರಿತೆ ಕಾವ್ಯಗಳನ್ನು ಶೃಂಗಾರ ರಸದಲ್ಲಿ ಕಟ್ಟಿದ್ದಾನೆ. ಹಾಗಾಗಿ ಆತನನ್ನು ಪ್ರೇಮಕವಿ ಹಾಗೂ ಪ್ರಣಯಕವಿ ಎಂದು ಕರೆಯಬಹುದು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಮೋಹನ ತರಂಗಿಣಿಯಲ್ಲಿನ ಬಾಣಸೂರನ ಭೋಗ ವೈಭವ, ಉಷಾದೇವಿಯ ಶೃಂಗಾರ ಹಾಗೂ ಉಷಾ–ಅನಿರುದ್ಧರ ಏಕಾಂತದ ಪ್ರಸಂಗಗಳಲ್ಲಿ ಶೃಂಗಾರ ರಸವಿದೆ’ ಎಂದರು.

‘ಕನಕರನ್ನು ಭಕ್ತಿ, ಕುಲ ಮತ್ತು ಪ್ರೇಮದ ವಿಷಯಗಳು ಹೆಚ್ಚು ಕಾಡಿದ್ದವು. ನಳಚರಿತೆ ಸ್ತ್ರೀ ಸಂವೇದನೆ ಬಿಂಬಿಸುತ್ತದೆ. ಅದನ್ನು ದಮಯಂತಿ ಚರಿತೆ ಎಂತಲೂ  ಕರೆಯಬಹುದು’ ಎಂದರು.

‘ಜೈನ ಸಾಹಿತ್ಯಕ್ಕೆ ಪ್ರತಿಭಟನೆ ತೋರಲೆಂದೇ ಕನ್ನಡ ಸಾಹಿತ್ಯ ರಚನೆಯಾಗಿದೆ. ಜೈನ ಕವಿಗಳಿಂದ ಕನ್ನಡ ಸಾಹಿತ್ಯ ಬೆಳೆಯಿತು. ನಂತರ ವಚನ ಸಾಹಿತ್ಯ ಭಾಷೆಯನ್ನು ಬೆಳೆಸಿತು’ ಎಂದು ತಿಳಿಸಿದರು.

ಲೇಖಕಿ ಎನ್‌.ಆರ್.ಲಲಿತಾಂಬ ಮಾತನಾಡಿ, ‘ಕನಕ ಸ್ತ್ರೀಭೋಗದ ಸುಖವನ್ನು ವಿವರಿಸಿದ್ದಾನೆ. ಹಾಗೆಯೇ ಆ ಸುಖದಿಂದ ವಿಮಖವಾಗಿ ವೈರಾಗ್ಯ ತಾಳುವ ಪರಿಯನ್ನೂ ತಿಳಿಸಿದ್ದಾನೆ’ ಎಂದರು.

‘ಸಮಕಾಲಿನ ದಾಸರಿಗಿಂತ ಜನಪದರ ಬದುಕಿನ ಅನುಭವಗಳನ್ನು ಭಿನ್ನವಾಗಿ ಚಿತ್ರಿಸಿದ್ದಾನೆ. ಅಲ್ಲದೇ ಸಮಾಜದ ಒಪ್ಪಿತ ಮೌಲ್ಯ ಹಾಗೂ ಆದರ್ಶಗಳಿಂದ ಸ್ತ್ರೀಸ್ವಾತಂತ್ರವನ್ನು ಸೀಮಿತಗೊಳಿಸಿದ್ದಾನೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.