ADVERTISEMENT

ಕನಿಷ್ಠ ಟ್ಯಾಕ್ಸಿ ದರ ನಿಗದಿಗೆ ಪ್ರಸ್ತಾವ

ಮೊಬೈಲ್‌ ಆ್ಯಪ್‌ ಆಧರಿತ ಟ್ಯಾಕ್ಸಿ ಕಂಪೆನಿಗಳ ಅವೈಜ್ಞಾನಿಕ ಕ್ರಮಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:50 IST
Last Updated 22 ಮಾರ್ಚ್ 2017, 19:50 IST

ಬೆಂಗಳೂರು: ನಗರದ ಟ್ಯಾಕ್ಸಿಗಳಲ್ಲಿ ಸಂಚರಿಸಲು ಕನಿಷ್ಠ  ದರ ನಿಗದಿ ಮಾಡುವಂತೆ ಕೋರಿ ಸಾರಿಗೆ ಆಯುಕ್ತ ಎಂ.ಕೆ.ಅಯ್ಯಪ್ಪ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮಂಗಳವಾರ ಪ್ರಸ್ತಾವ ಸಲ್ಲಿಸಿದ್ದಾರೆ.

‘ಮೊಬೈಲ್‌ ಆ್ಯಪ್‌ ಆಧರಿತ ಟ್ಯಾಕ್ಸಿ ಸೇವಾ ಕಂಪೆನಿಗಳು ಸದ್ಯ ತಮ್ಮಿಷ್ಟದಂತೆ ದರ ನಿಗದಿ ಮಾಡಿದ್ದು, ಇದು ಅವೈಜ್ಞಾನಿಕ. ಹೀಗಾಗಿ ಕಿ.ಮೀಗೆ ₹10  (ನಾನ್‌ ಎ.ಸಿ) ಹಾಗೂ ₹12 (ಎ.ಸಿ) ಕನಿಷ್ಠ ದರ ನಿಗದಿ ಮಾಡುವಂತೆ ಪ್ರಸ್ತಾವ ಕೊಟ್ಟಿದ್ದೇವೆ’ ಎಂದು ಅಯ್ಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ಕಿ.ಮೀಗೆ ₹19.50 (ಎ.ಸಿ) ಹಾಗೂ ₹14.50 (ನಾನ್‌ ಎ.ಸಿ) ಗರಿಷ್ಠ ದರ ನಿಗದಿ ಮಾಡಿದ್ದೆವು. ಈ ಬಾರಿ ಕನಿಷ್ಠ ದರವನ್ನೂ ನಿಗದಿಪಡಿಸಲಾಗಿದ್ದು, ಸರ್ಕಾರ ಒಪ್ಪಿಗೆ ನೀಡಿದ ಬಳಿಕವೇ  ಈ ದರ ಜಾರಿಗೆ ಬರಲಿದೆ’ ಎಂದು ತಿಳಿಸಿದರು. ದರ ಬಗ್ಗೆ ಮಾತನಾಡಿದ ಟ್ಯಾಕ್ಸಿ ಚಾಲಕರೊಬ್ಬರು, ‘ಖಾಸಗಿ ಕಂಪೆನಿಗಳ ದರ ನಿಗದಿಯಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ಕನಿಷ್ಠ ದರ ನಿಗದಿ ಮಾಡಿದ್ದು ಒಳ್ಳೆಯದಾಗಿದೆ. ಇದಕ್ಕೆ ಸರ್ಕಾರವು ತ್ವರಿತವಾಗಿ ಒಪ್ಪಿಗೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ಪ್ರಯಾಣಿಕರಿಗೆ ಹೊರೆ
ಕನಿಷ್ಠ ದರ ಜಾರಿಗೆ ಬಂದರೆ ಪ್ರಯಾಣಿಕರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ‘ಸದ್ಯ ಓಲಾ ಹಾಗೂ ಉಬರ್‌ ಕಂಪೆನಿಗಳು ಕಿ.ಮೀಗೆ ₹6 ಹಾಗೂ ₹7 ಪಡೆಯುತ್ತಿವೆ. ಈ ದರವು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿತ್ತು. ಈಗ ದರ ಹೆಚ್ಚು ಮಾಡಿರುವ ಸಾರಿಗೆ ಇಲಾಖೆಯು ಕನಿಷ್ಠ ದರವೆಂದು ಹೇಳುತ್ತಿದೆ’ ಎಂದು ಪ್ರಯಾಣಿಕರು ದೂರಿದರು. ‘ದರಗಳ ಬಗ್ಗೆ ಪ್ರಯಾಣಿಕರು ಯಾರು ದೂರು ಕೊಟ್ಟಿಲ್ಲ. ಅಷ್ಟಾದರೂ ಸಾರಿಗೆ ಅಧಿಕಾರಿಗಳು ಈ ಪ್ರಸ್ತಾವ ಸಿದ್ಧಪಡಿಸಿದ್ದಾರೆ. ಇದನ್ನು ಸರ್ಕಾರ ತಿರಸ್ಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.