ADVERTISEMENT

ಕನ್ನಡದ ವೆಬ್‌ಸೈಟ್‌ ರೂಪಿಸಲು ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2017, 20:33 IST
Last Updated 8 ಆಗಸ್ಟ್ 2017, 20:33 IST
ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಂಗಳವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲಿಸುವಾಗ ಇಲಾಖೆಯ ಮಾಹಿತಿ ಪುಸ್ತಕಗಳಲ್ಲಿ ಕನ್ನಡ ಭಾಷೆ ಮತ್ತು ಸ್ಥಳೀಯ ಕಲೆಗಳಿಗೆ ಮನ್ನಣೆ ಕೊಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆ ನಿರ್ದೇಶಕಿ ಡಾ.ಎನ್‌.ಮಂಜುಳಾ ಇದ್ದಾರೆ –ಪ್ರಜಾವಾಣಿ ಚಿತ್ರ
ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಂಗಳವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲಿಸುವಾಗ ಇಲಾಖೆಯ ಮಾಹಿತಿ ಪುಸ್ತಕಗಳಲ್ಲಿ ಕನ್ನಡ ಭಾಷೆ ಮತ್ತು ಸ್ಥಳೀಯ ಕಲೆಗಳಿಗೆ ಮನ್ನಣೆ ಕೊಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆ ನಿರ್ದೇಶಕಿ ಡಾ.ಎನ್‌.ಮಂಜುಳಾ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ ಎರಡು ವರ್ಷಗಳಿಂದ ಅಪ್‌ಡೇಟ್‌ ಆಗಿಲ್ಲ. ಅಪ್‌ಡೇಟ್‌ ಮಾಡಲು ಇಲಾಖೆ ಬಳಿ ಪಾಸ್‌ವರ್ಡ್‌ ಕೂಡ ಇಲ್ಲ. ಇನ್ನೂ ವೆಬ್‌ಸೈಟ್‌ನಲ್ಲಿ ಕನ್ನಡದ ಅವತರಣಿಕೆ ಲಭ್ಯ ಇಲ್ಲ... ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಜಿ.ಎಸ್‌.ಸಿದ್ದರಾಮಯ್ಯ ಅವರು ಮಂಗಳವಾರ ಇಲಾಖೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿಪರಿಶೀಲನೆ ನಡೆಸಿದಾಗ ಬೆಳಕಿಗೆ ಬಂದ ಸಂಗತಿಗಳು ಇವು.

ಸ್ಟಾರ್ಕ್ ಕಮ್ಯುನಿಕೇಷನ್‌ ಕಂಪೆನಿಯ ನಿರ್ವಹಣೆಯಲ್ಲಿದ್ದ ಪ್ರವಾಸೋದ್ಯಮ ಇಲಾಖೆಯ ಅಂತರ್ಜಾಲ ತಾಣವನ್ನು ಮರುವಿನ್ಯಾಸಗೊಳಿಸಿ, ರಾಜ್ಯಸರ್ಕಾರದ ವ್ಯಾಪ್ತಿಯಲ್ಲಿ ನಿರ್ವಹಿಸಬೇಕು. ಕಡ್ಡಾಯವಾಗಿ ಪ್ರಧಾನ ಪುಟ ಕನ್ನಡದಲ್ಲಿರಬೇಕು ಎಂದು ಅಧ್ಯಕ್ಷರು ತಾಕೀತು ಮಾಡಿದರು.

ಜಾಗತಿಕವಾಗಿ ವ್ಯವಹರಿಸುವ ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ ದೀರ್ಘ ಸಮಯದಿಂದ ನಿಷ್ಕ್ರಿಯಗೊಂಡಿರುವುದು ನಾಚಿಕೆಗೇಡು ಮತ್ತು ಇಲಾಖೆ ಚಟುವಟಿಕೆ ಯಾವಮಟ್ಟಿಗೆ ನಡೆಯುತ್ತಿದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಹೊಸ ವೈಬ್‌ಸೈಟ್‌ ರೂಪಿಸಲು ₹10 ಕೋಟಿಯ ಯೋಜನೆ ರೂಪಿಸಿದ್ದು, ಟೆಂಡರ್‌ಗೆ ಸಂಪುಟ ಅನುಮೋದನೆ ನೀಡಬೇಕಿದೆ. ಹೊಸ ವೆಬ್‌ಸೈಟ್‌ನಲ್ಲಿ ಕನ್ನಡದಲ್ಲಿ ಆದ್ಯತಾಪುಟ ಇರಲಿದೆ. ಇನ್ನು ಎರಡು ತಿಂಗಳಲ್ಲಿ ಇಲಾಖೆ ಹೊಸ ವೆಬ್‌ಸೈಟ್‌ ಹೊಂದಲಿದೆ’ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಡಾ.ಎನ್‌.ಮಂಜುಳಾ ಸಮಜಾಯಿಷಿ ನೀಡಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಂವಹನಕ್ಕಾಗಿ ಇಂಗ್ಲಿಷ್‍ಗೆ ಪ್ರಾಮುಖ್ಯತೆ ನೀಡಿರುವುದಾಗಿ ನಿರ್ದೇಶಕರು ತಿಳಿಸಿದಾಗ, ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷರು, ‘ರಾಜ್ಯದ ಇಲಾಖೆ ಪ್ರಧಾನವಾಗಿ ಕನ್ನಡವನ್ನೇ ಬಳಸಬೇಕು. ರಾಜ್ಯದೊಳಗೆ ವ್ಯವಹರಿಸುವ ಪತ್ರವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಇದನ್ನು ಪಾಲಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಇಲಾಖೆ ನೀಡುವ ಜಾಹೀರಾತುಗಳಲ್ಲಿ ನಮ್ಮ ನೆಲದ ಸಂಸ್ಕತಿ ಬಿಂಬಿಸುತ್ತಿಲ್ಲ. ಗೋಲ್ಡನ್ ಚಾರಿಯಟ್ ರೈಲು ಒಳಗೊಂಡಂತೆ ಎಲ್ಲೆಡೆ ಕನ್ನಡ ಕಣ್ಣಿಗೆ ಕಾಣುವಂತೆ ಮತ್ತು ಕಿವಿಗೆ ಕೇಳುವಂತೆ ಮಾಡಬೇಕು. ಪ್ರವಾಸೋದ್ಯಮ ಇಲಾಖೆ ಉದ್ಯಮ ನೀತಿ ಅನುಸರಿಸಿದರೆ ಸಾಲದು, ಸಾಂಸ್ಕೃತಿಕ ನೀತಿ ಪಾಲಿಸಬೇಕು. ಪ್ರವಾಸಿ ತಾಣಗಳ ನಿರ್ವಹಣೆಗೆ ಸಿ ಮತ್ತು ಡಿ ಗ್ರೂಪ್‌ ಹುದ್ದೆ ತುಂಬುವಾಗ ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕು. ಕಲೆ, ಸಂಸ್ಕೃತಿ ಪ್ರದರ್ಶನಕ್ಕೆ ಕನ್ನಡಿಗರನ್ನೇ ಕರೆದೊಯ್ಯಬೇಕು’ ಎಂದು ಸೂಚಿಸಿದರು.

‘ಪ್ರವಾಸೋದ್ಯಮ ಇಲಾಖೆಯ ವಿಷನ್ ಗ್ರೂಪ್‍ನಲ್ಲಿ ಕನ್ನಡ ಪ್ರತಿನಿಧಿಸುವವರೇ ಇಲ್ಲ. ರಾಜಕಾರಣಿಗಳು, ಉದ್ಯಮಿಗಳು ಹಾಗೂ ಹೊರನಾಡಿನವರು ತುಂಬಿಕೊಂಡಿದ್ದಾರೆ. ಇದನ್ನು ಸರ್ಕಾರದ ಗಮನಕ್ಕೆ ತಂದು, ಇಲಾಖೆಯ ವಿಷನ್ ಗ್ರೂಪ್‍ನಲ್ಲಿ ರಾಜ್ಯದ ಕಲೆ, ಸಂಸ್ಕೃತಿ ಪ್ರತಿನಿಧಿಸುವವರನ್ನು ನೇಮಿಸಲು ಪ್ರಸ್ತಾವನೆ ಸಲ್ಲಿಸಬೇಕು’ ಎಂದು ತಿಳಿಸಿದರು.

ಇಲಾಖೆಯಲ್ಲಿ ಇತ್ತೀಚಿನ ಕಡತಗಳು ಕನ್ನಡದಲ್ಲೇ ಇರುವ ಬಗ್ಗೆ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಗೆ ತಿಂಗಳ ಗಡುವು
ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷರು, ಇಲಾಖೆಯ ವೆಬ್‌ಸೈಟ್‌ನಲ್ಲಿ ಕನ್ನಡ ಆದ್ಯತಾ ಪುಟ ಇಲ್ಲದಿರುವುದಕ್ಕೆತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ತಂತ್ರಾಂಶ ಬಳಕೆಗೆ ಸಂಬಂಧಪಟ್ಟಂತೆ 2004 ಮತ್ತು 2008ರಲ್ಲಿ ಸರ್ಕಾರ ನೀಡಿರುವ ಆದೇಶಗಳನ್ನು ಲೋಕೋಪಯೋಗಿ ಇಲಾಖೆ ಉಲ್ಲಂಘಿಸಿದೆ. ಇನ್ನು 15 ದಿನಗಳಲ್ಲಿ ಈ ಲೋಪ ಸರಿಪಡಿಸಬೇಕು. ಅಲ್ಲದೆ, ಟೆಂಡರ್‌ ಜಾಹೀರಾತು ಮತ್ತು ದರ ಪಟ್ಟಿಗಳನ್ನು ಸಂಪೂರ್ಣ ಕನ್ನಡೀಕರಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

ಮಾಹಿತಿ ಹಕ್ಕು ಅರ್ಜಿಗಳಿಗೆ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು. ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನಗೊಳಿಸಬೇಕು. ಅಲ್ಲದೆ, ಹೆದ್ದಾರಿ ಟೋಲ್‌ಗಳಿಗೂ ಕನ್ನಡಿಗರನ್ನೇ ನೇಮಿಸಬೇಕು. ಹೆದ್ದಾರಿ ಮೈಲುಗಲ್ಲು ಮತ್ತು ಮಾರ್ಗಸೂಚಿಯಲ್ಲಿ ಕನ್ನಡ ಅಕ್ಷರಗಳು ಎದ್ದುಕಾಣುವಂತೆ ಬರೆಸಲು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಅವರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.