ADVERTISEMENT

‘ಕನ್ನಡ ಪ್ರಜ್ಞೆ–ಸಂಸ್ಕೃತಿಗಳ ಸಂಗಮ ರಾಜ್‌ ವ್ಯಕ್ತಿತ್ವ’

ಡಾ.ರಾಜ್‌ಕುಮಾರ್‌ ರಾಷ್ಟ್ರೀಯ ಉತ್ಸವದಲ್ಲಿ ಮನು ಚಕ್ರವರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:35 IST
Last Updated 3 ಡಿಸೆಂಬರ್ 2016, 19:35 IST
ಸಮಾರಂಭದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಡಾ.ರಾಜ್‌ಕುಮಾರ್‌ ಸಿನಿಮಾಗಳ ಛಾಯಾಚಿತ್ರಗಳನ್ನು   ಅಭಿಮಾನಿಗಳು ಮೊಬೈಲ್‌ನಲ್ಲಿ ಸೆರೆಹಿಡಿದರು.–ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಡಾ.ರಾಜ್‌ಕುಮಾರ್‌ ಸಿನಿಮಾಗಳ ಛಾಯಾಚಿತ್ರಗಳನ್ನು ಅಭಿಮಾನಿಗಳು ಮೊಬೈಲ್‌ನಲ್ಲಿ ಸೆರೆಹಿಡಿದರು.–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡದ ಹಲವು ಪ್ರಜ್ಞೆ ಹಾಗೂ ಸಂಸ್ಕೃತಿಗಳ ಸಂಗಮವಾಗಿ ಡಾ.ರಾಜ್‌ಕುಮಾರ್‌ ಅವರ ವ್ಯಕ್ತಿತ್ವ ರೂಪಗೊಂಡಿತು’ ಎಂದು ಕಲಾ ವಿಮರ್ಶಕ ಪ್ರೊ. ಮನು ಚಕ್ರವರ್ತಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರೀತಿ ಪುಸ್ತಕ ಪ್ರಕಾಶನ ವತಿಯಿಂದ ನಗರದಲ್ಲಿ ನಡೆಯುತ್ತಿರುವ ‘ಡಾ.ರಾಜ್‌ಕುಮಾರ್ ರಾಷ್ಟ್ರೀಯ ಉತ್ಸವ’ ಕಾರ್ಯಕ್ರಮದಲ್ಲಿ ‘ಆಧುನಿಕ ಕನ್ನಡ ರಾಷ್ಟ್ರೀಯತೆಯ ಪ್ರತಿಕವಾಗಿ ಡಾ.ರಾಜ್‌ಕುಮಾರ್‌’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ರಾಜ್‌ಕುಮಾರ್‌ ಅವರು ನಟಿಸಿದ ಐತಿಹಾಸಿಕ ಪಾತ್ರಗಳ ಮಯೂರ, ಶ್ರೀಕೃಷ್ಣದೇವರಾಯ, ರಣಧೀರ ಕಂಠೀರವ ಚಿತ್ರಗಳಲ್ಲಿ ಮೇಲ್ಮೋಟಕ್ಕೆ ಹಿಂದೂ ರಾಷ್ಟ್ರ ರಚನೆಯ ಕಲ್ಪನೆ ಕಾಣುತ್ತದೆ. ಹುಲಿ ಹಾಲಿನ ಮೇವು ಚಿತ್ರದಲ್ಲಿ ಕೊಡವ ಸಮುದಾಯದ ಬಿಂಬವಿದೆ. ಅವರ ಸಿನಿಮಾಗಳು ಇತಿಹಾಸದಲ್ಲಿನ ಸ್ಥಳೀಯ ಪ್ರ್ಯಾಂತಗಳ ಸ್ವಾತಂತ್ರ್ಯದ ಹಂಬಲವನ್ನು ಪ್ರತಿನಿಧಿಸುತ್ತವೆ’ ಎಂದು ಅವರು ಹೇಳಿದರು.

‘ರಾಜ್‌ ಅವರು ಧಾರ್ಮಿಕ, ಮೌಖಿಕ, ವೇದಾಂತ, ಶೂದ್ರ ಹಾಗೂ ಜಾನಪದ ಸಂಸ್ಕೃತಿಯ ಪಾತ್ರಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು. ಅವರ ಮೇಯರ್‌ ಮುತ್ತಣ್ಣ, ಸರ್ವಮಂಗಳ, ಉಯ್ಯಾಲೆ, ನಾಂದಿ, ಭೂದಾನ ಸಿನಿಮಾಗಳಲ್ಲಿ  ಮಧ್ಯಮ ಹಾಗೂ ಕೆಳ ವರ್ಗದ ಜನಜೀವನದ ಚಿತ್ರಣವಿದೆ’ ಎಂದು ಅವರು ಹೇಳಿದರು.

ಅಂಕಣಕಾರ ಪ್ರೊ.ಚಂದನ್‌ ಗೌಡ ಮಾತನಾಡಿ,‘ರಾಜ್‌ ಕುಮಾರ್ ಅವರ ಕನ್ನಡ ಧರ್ಮ ಎಂಬುದು ಕರ್ಮ ಸಂಸ್ಕೃತಿ, ದ್ವೈತ, ಅದ್ವೈತ ಸಿದ್ಧಾಂತ ಹಾಗೂ ಆಧುನಿಕತೆಯ ಮಿಶ್ರಣವಾಗಿದೆ. ಅವರ ಪಾತ್ರಗಳಲ್ಲಿ ಅಹಿಂಸೆ, ದಾನ, ಕರುಣೆ, ಮಾನವೀಯ ಗುಣಗಳಿಂದ ಸಭ್ಯ ಸಮಾಜ ನಿರ್ಮಿಸುವ ಕನಸಿತ್ತು. ಕನ್ನಡ ರಾಷ್ಟ್ರ ಕಲ್ಪನೆಯ ಬದಲಿಗೆ ಕನ್ನಡ ಸಮಾಜ ರಚನೆಯ ಉದ್ದೇಶ ಅವರ ಚಿತ್ರಗಳಲ್ಲಿದೆ. ಯಾವುದೇ ನಿರ್ದಿಷ್ಟ ಸಮುದಾಯದ ಪ್ರತಿನಿಧಿಯಾಗಿ ರಾಜ್‌ ಬೆಳೆಯಲಿಲ್ಲ ಎಂಬುದರಲ್ಲಿಯೇ ಅವರ ಹಿರಿಮೆ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿ, ‘ರಾಜ್‌ ಅವರ ಪಾತ್ರಗಳಿಂದ ವ್ಯಾವಹಾರಿಕ ಸಿನಿಮಾಗಳಲ್ಲಿ ಜಾತ್ಯಾತೀತ ದೃಷ್ಟಿಕೋನ ಆರಂಭವಾಯಿತು. ಅವರು ರಾಜಕೀಯಕ್ಕೆ ಸೇರದೆ ನೈತಿಕ ಪ್ರಾಬಲ್ಯದ ಸ್ಥಾನ ಪಡೆದರು. ಅಗತ್ಯವಿದ್ದಾಗ ನಾಡಿನ ಪರ ಧ್ವನಿ ಮೊಳಗಿಸಿದರು. ಸಂತರು, ದಾಸರು, ಇತಿಹಾಸದ ನಾಯಕರನ್ನು ಸಾಮಾನ್ಯರಿಗೆ ಪರಿಚಯಿಸಿದರು’ ಎಂದು ಅವರು ಹೇಳಿದರು.

*
ಯೋಗ ಎಂಬುದು ದೈಹಿಕ ಸಂಸ್ಕೃತಿಯ ಭಾಗ. ಅದನ್ನು ಧರ್ಮಕ್ಕೆ ಸೀಮಿತಗೊಳಿಸಬಾರದು. ರಾಜ್‌ ಅವರ ಶರೀರ ಹಾಗೂ ಶಾರೀರವನ್ನು ಸಾಂಸ್ಕೃತಿಕ ನೆಲೆಯಲ್ಲಿ ನೋಡಬೇಕು.
-ಪ್ರೊ. ಮನು ಚಕ್ರವರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT