ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನವೀಕರಣಕ್ಕೆ ₹50 ಲಕ್ಷ ನೆರವು: ಸಂಸದ ಪಿ.ಸಿ.ಮೋಹನ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 7:14 IST
Last Updated 28 ಅಕ್ಟೋಬರ್ 2017, 7:14 IST
ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ಕನ್ನಡ ಸಾಹಿತ್ಯ ಸಮ್ಮೇಳನ
ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ಕನ್ನಡ ಸಾಹಿತ್ಯ ಸಮ್ಮೇಳನ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನವೀಕರಣ ಕಾಮಗಾರಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಲಾಗುವುದೆಂದು ಸಂಸದ ಪಿ.ಸಿ.ಮೋಹನ್ ಘೋಷಿಸಿದ್ದಾರೆ.

ನಗರದಲ್ಲಿಂದು ಚಾಮರಾಜಪೇಟೆಯ ಅಖಿಲ ಕರ್ನಾಟಕ ಮಕ್ಕಳ ಕೂಟದಲ್ಲಿ  ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೊರ ದೇಶಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತು ಹೆಸರು ಮಾಡಿದೆ.ಈಗ ಚಾಮರಾಜ ಪೇಟೆಯಲ್ಲಿನ ಕೇಂದ್ರ ಕಟ್ಟಡದ ನವೀಕರಣದ ಖರ್ಚು ಹಾಗೂ ಇತರೆ ಉಪಕರಣಗಳನ್ನು ಖರೀದಿ ಮಾಡಲು ಸಂಸದರ ನಿಧಿಯಿಂದ 50 ಲಕ್ಷ ರೂ.ದೇಣಿಗೆ ನೀಡಲಾಗುವುದೆಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆಯಾಗಿ 100 ವರ್ಷಗಳು ಸಂದಿದೆ. 1915 ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್‌ ಕನ್ನಡ ಸಾಹಿತ್ಯದ ಕೆಲಸ ಮಾಡುತ್ತಿದೆ.

ಬಹುತೇಕ ಜನರಿಗೆ ಬೆಂಗಳೂರು ಬಗ್ಗೆ ಗೊತ್ತಿಲ್ಲ. ಈ ನಗರದ ಬಗ್ಗೆ ನಾವು ತಿಳಿದುಕೊಳ್ಳಬೇಕು. ಜೊತೆಗೆ ಇಂದಿನ ವಿದ್ಯಾರ್ಥಿಗಳು ಸಾಹಿತ್ಯ ಬಗೆಗಿನ ಪುಸ್ತಕ ಗಳನ್ನು ಓದಲು ಮುಂದಾಗಬೇಕು ಎಂದ ಅವರು, ಬೆಂಗಳೂರುನಲ್ಲಿರು ಪರಭಾಷಿಕರಿಗೆ ಕನ್ನಡ ಕಲಿಸಬೇಕೆಂದು ಕರೆ ನೀಡಿದರು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್ ಮಾತನಾಡಿ, ಮಾತೃಭಾಷೆ ಯಾವುದೇ ಇರಲಿ, ವ್ಯಾಪಾರದಲ್ಲಿ ಕನ್ನಡ ಬರಬೇಕು.ಅಲ್ಲದೆ, ಕರ್ನಾಟಕ ರಾಜ್ಯವು ಎಲ್ಲಾ ಭಾಷೆಗಳಿಗೆ ಬೆಂಬಲ ನೀಡುವ ಸೌಹಾರ್ದ ರಾಜ್ಯವಾಗಿದೆ ಎಂದರು.

ಕಸಾಪ ಹೋರಾಟದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ದೊರೆತಿದೆ.ಅದೇರೀತಿ, ಕೇಂದ್ರ ಸರ್ಕಾರವು ಕನ್ನಡಿಗರಿಗೆ ಮೀಸಲಾತಿ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಲೇಖಕ, ಸಮ್ಮೇಳನಾಧ್ಯಕ್ಷ ಸುರೇಶ್ ಮೂನ ಮಾತನಾಡಿ, ಚಾಮರಾಜಪೇಟೆಯಲ್ಲಿ ವಿವಿಧ ದೇವಾಲಯಗಳು, ಮಸೀದಿಗಳು, ಚರ್ಚ್ ಗಳು ಸೇರಿ ಹತ್ತು ಹಲವು ಧರ್ಮದವರು ವಾಸವಾಗಿದ್ದು, ಕೋಮು ಸೌಹಾರ್ದತೆಗೆ ಮಾದರಿಯಾಗಿದೆ ಎಂದು ನುಡಿದರು.

ಕನ್ನಡ ನಾಡುನುಡಿ ಸಂಸ್ಕೃತಿಯ ಮತ್ತಷ್ಟು ಅಭಿವೃದ್ಧಿ ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಪ್ರಗತಿಗೆ ಮುಂದಾಗಬೇಕೆಂದು ಅವರು ಹೇಳಿದರು.

ಧ್ವಜಾರೋಹಣ: ಬೆಳಗ್ಗೆ 7.30 ಕ್ಕೆ ಬೆಂ.ನಗರ ಕಸಾಪ ಅಧ್ಯಕ್ಷ ಮಾಯಣ್ಣ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಾಡಧ್ವಜವನ್ನು ಅಶೋಕ್ ಕುಮಾರ್ ನೆರವೇರಿಸಿದರು, ಪರಿಷತ್‌ ಧ್ವಜವನ್ನು ಚಾಮರಾಜಪೇಟೆಯ  ಕಸಾಪ ಅಧ್ಯಕ್ಷ ಡಾ.ಶ್ರೀಧರ್ ನೆರವೇರಿಸಿದರು.

ಪುಸ್ತಕ ಮಳಿಗೆಗಳು: ವೇದಿಕೆ ಪಕ್ಕದಲ್ಲಿ ಸುಮಾರು 10 ಪುಸ್ತಕ ಮಳಿಗೆಗಳಿವೆ.

ಸಮ್ಮೇಳನದಲ್ಲಿ ಬೆಂ.ನಗರ ಕಸಾಪ ಅಧ್ಯಕ್ಷ ಮಾಯಣ್ಣ, ಸಾಹಿತಿ ಎಂ.ಎನ್.ವ್ಯಾಸರಾವ್, ಬಿಬಿಎಂಪಿ ಸದಸ್ಯೆ ಕೋಕಿಲಾ, ಚಾಮರಾಜಪೇಟೆಯ ಕಸಾಪ ಅಧ್ಯಕ್ಷ ಶ್ರೀಧರ್ ಸೇರಿ ಪ್ರಮುಖರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.