ADVERTISEMENT

ಕರ್ತವ್ಯ ಲೋಪ: ಇನ್‌ಸ್ಪೆಕ್ಟರ್‌ ತಲೆದಂಡ

ಮಣಿಪುರ ಯುವತಿಗೆ ಲೈಂಗಿಕ ದೌರ್ಜನ್ಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:32 IST
Last Updated 3 ಮೇ 2016, 19:32 IST
ಅಕ್ಷಯ್
ಅಕ್ಷಯ್   

ಬೆಂಗಳೂರು: ಮಣಿಪುರ ಮೂಲದ ಯುವತಿಯನ್ನು ಕಾರು ಚಾಲಕನೊಬ್ಬ ರಸ್ತೆಯಿಂದ ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿ
ಸಿದ ಪ್ರಕರಣದಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಇನ್‌ಸ್ಪೆಕ್ಟರ್ ಹಾಗೂ ಹೆಡ್‌ಕಾನ್‌ಸ್ಟೆಬಲ್‌ ಅವರ ತಲೆದಂಡವಾಗಿದೆ.

‘ಈ ರೀತಿಯ ಘಟನೆ ನಡೆದ ಬಗ್ಗೆ ಪೇಯಿಂಗ್ ಗೆಸ್ಟ್‌ ಕಟ್ಟಡದ ಮಾಲೀಕರು ಠಾಣೆಗೆ ಕರೆ ಮಾಡಿ ತಿಳಿಸಿದ್ದರು.

ಆದರೂ ಕರ್ತವ್ಯದಲ್ಲಿದ್ದ ಹೆಡ್‌ಕಾನ್‌ಸ್ಟೆಬಲ್‌ ರಾಮಚಂದ್ರಯ್ಯ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅಲ್ಲದೆ, ಇನ್‌ಸ್ಪೆಕ್ಟರ್ ಸದಾಶಿವಯ್ಯ ಕೂಡ ಈ ಬಗ್ಗೆ ವಿಚಾರಿಸುವ ಗೋಜಿಗೆ ಹೋಗಿರಲಿಲ್ಲ. ಹೀಗಾಗಿ  ಕರ್ತವ್ಯ ಲೋಪ ಆರೋಪದಡಿ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಎನ್‌.ಎಸ್.ಮೇಘರಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ನಾಲ್ಕು ತಿಂಗಳಿನಿಂದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಇರಲಿಲ್ಲ. ಹೀಗಾಗಿ ಹೈಕೋರ್ಟ್ ವಿಚಕ್ಷಣ ದಳದಲ್ಲಿದ್ದ ಇನ್‌ಸ್ಪೆಕ್ಟರ್ ಸದಾಶಿವಯ್ಯ ಅವರನ್ನು 15 ದಿನಗಳ ಹಿಂದಷ್ಟೇ ಈ ಠಾಣೆಗೆ ವರ್ಗಾಯಿಸಲಾಗಿತ್ತು.

ರೌಡಿ ಶೀಟರ್: ಈ ಪ್ರಕರಣದಲ್ಲಿ ಬಂಧಿತನಾಗಿರುವ ಕ್ಯಾಬ್‌ ಚಾಲಕ ಅಕ್ಷಯ್‌ಕುಮಾರ್ (24) ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ರೌಡಿಶೀಟರ್.
‘ಕಳೆದ ವರ್ಷ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಗಣೇಶನ ಮೆರವಣಿಗೆ ನಡೆಯುತ್ತಿದ್ದ ವೇಳೆ ಆರೋಪಿ ಅಕ್ಷಯ್, ಶಶಿ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಈ ಸಂಬಂಧ ಕೊಲೆಯತ್ನ (ಐಪಿಸಿ 307) ಆರೋಪದಡಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲದೆ, ಚನ್ನಮ್ಮನಕೆರೆ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಈತನ ಹೆಸರು ಸೇರಿಸಲಾಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏಪ್ರಿಲ್ 13ರಂದು ರೌಡಿಗಳ ಪರೇಡ್ ನಡೆಸಲಾಗಿತ್ತು. ಆಗ ಈ ಅಕ್ಷಯ್‌ನನ್ನೂ ಕರೆಯಿಸಿ ಪ್ರಸ್ತುತ ವಿಳಾಸ, ಮಾಡುತ್ತಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿತ್ತು. ಅಲ್ಲದೆ, ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಬುದ್ಧಿಮಾತನ್ನೂ ಹೇಳಲಾಗಿತ್ತು ಎಂದು ದಕ್ಷಿಣ ವಿಭಾಗದ ಪೊಲೀಸರು ಹೇಳಿದರು.

ನ್ಯಾಯಾಂಗ ಬಂಧನ: ‘ಅಕ್ಷಯ್‌ನನ್ನು ಮಂಗಳವಾರ ರಾತ್ರಿ ಕೋರಮಂಗಲದಲ್ಲಿರುವ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಕರೆದೊಯ್ಯಲಾಯಿತು. ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅವರು ಆದೇಶಿಸಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಏಪ್ರಿಲ್ 23ರ ರಾತ್ರಿ ಕತ್ರಿಗುಪ್ಪೆಯಲ್ಲಿ ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡದ ಬಳಿ ನಿಂತಿದ್ದ ಮಣಿಪುರದ ಯುವತಿಯನ್ನು ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಈ ಸಂಬಂಧ ಪಿ.ಜಿ ಕಟ್ಟಡದ ಮಾಲೀಕ ಮಂಜುನಾಥ್ ಸೋಮವಾರ ದೂರು ಕೊಟ್ಟಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಕನಕಪುರದಲ್ಲಿ ಬಂಧಿಸಲಾಯಿತು ಎಂದು ಮಾಹಿತಿ ನೀಡಿದರು.
*****

ಸಿಬ್ಬಂದಿ ತಪ್ಪು ಮಾಡಿದ್ದರೆ ಇಲಾಖಾ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಮಿಷನರ್‌ಗೆ ಸೂಚಿಸಿದ್ದೆ. ಅದರಂತೆ ಅಮಾನತು ಮಾಡಲಾಗಿದೆ
-
ಡಾ.ಜಿ.ಪರಮೇಶ್ವರ್, ಗೃಹಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT