ADVERTISEMENT

ಕಸಾಯಿಖಾನೆ ನಿರ್ಮಾಣ ವಿರೋಧ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2015, 19:55 IST
Last Updated 3 ಮಾರ್ಚ್ 2015, 19:55 IST

ಬೆಂಗಳೂರು: ಕನಕಪುರ ತಾಲ್ಲೂಕು ಹಾರೋಹಳ್ಳಿ ಹೋಬಳಿಯ ಕೈಗಾರಿಕಾ ಪ್ರದೇಶದಲ್ಲಿನ ಬೃಹತ್‌ ಯಾಂತ್ರೀಕೃತ ಕಸಾಯಿಖಾನೆ ನಿರ್ಮಾಣ ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

ಈ ಸಂಬಂಧ ಹಾರೋಹಳ್ಳಿ ಹೋಬಳಿ ರಾಮಸಾಗರ ಗ್ರಾಮದ ರಾಮಣ್ಣ ಹಾಗೂ ಇತರ ಐವರು ಸಲ್ಲಿಸಿದ್ದ ಅರ್ಜಿ­ಯನ್ನು ಹಿರಿಯ ನ್ಯಾಯಮೂರ್ತಿ ಕೆ.ಎಲ್‌.­ಮಂಜುನಾಥ್‌ ಮತ್ತು ನ್ಯಾಯ­ಮೂರ್ತಿ ಪಿ.ಬಿ.ಬಜಂತ್ರಿ ಅವರಿದ್ದ ವಿಭಾಗೀಯ ಪೀಠವು ಮಂಗಳವಾರ ವಿಲೇವಾರಿ ಮಾಡಿತು.

‘ಕಸಾಯಿಖಾನೆ ನಿರ್ಮಾಣದಿಂದ ಸುತ್ತಲಿನ ಗ್ರಾಮಸ್ಥರು ಪರಿಸರ ಮಾಲಿ­ನ್ಯದ ಸಮಸ್ಯೆಗಳನ್ನು ಎದುರಿಸಬೇಕಾ­ಗು­ತ್ತದೆ ಎಂಬ ಅರ್ಜಿದಾರರ ವಾದ ಸಮ­ರ್ಥನೀಯವಲ್ಲ. ಹೀಗೊಂದು ವೇಳೆ ಪರಿಸರ ಮಾಲಿನ್ಯದ ದಿಕ್ಕಿನಲ್ಲೇ ಯೋಚಿ­ಸು­ವುದಾದರೆ ಹಾರೋಹಳ್ಳಿಯ ಸಾವಿ­ರಾರು ಎಕರೆ ಕೈಗಾರಿಕಾ ಪ್ರದೇಶದ ಪರವಾನಗಿಯನ್ನೇ ನಾವು ಪ್ರಶ್ನಿಸಬೇಕಾ­ಗುತ್ತದೆ’ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

‘ಕಸಾಯಿಖಾನೆ ನಿರ್ಮಾಣಕ್ಕೆ ಸಂಬಂಧಿ­­ಸಿದಂತೆ ಸರ್ಕಾರವು 2008­ರಲ್ಲಿಯೇ ಅಧಿಸೂಚನೆ ಹೊರಡಿ­ಸಿದೆ. 2010ರಲ್ಲಿ ಇದರ ನಿರ್ಮಾಣಕ್ಕೆ ಟೆಂಡರ್‌ ಕೂಡ ಕರೆಯ­ಲಾಗಿದೆ. ಆದರೆ ಇದನ್ನು ಪ್ರಶ್ನಿಸುವಲ್ಲಿ ಅರ್ಜಿದಾರರು ಸಾಕಷ್ಟು ವಿಳಂಬ ಮಾಡಿದ್ದಾರೆ’ ಎಂದು ಪೀಠವು ಅರ್ಜಿ ವಜಾ ಮಾಡಿದ್ದಕ್ಕೆ ಕಾರಣ ನೀಡಿತು.

ಅರ್ಜಿದಾರರ ವಾದ: ‘ಹಾರೋಹಳ್ಳಿಯ 40 ಎಕರೆ  ಪ್ರದೇಶದಲ್ಲಿ ನಿರ್ಮಿಸಲಾಗು­ತ್ತಿ­ರುವ ಉದ್ದೇಶಿತ ಕಸಾಯಿಖಾನೆಯಲ್ಲಿ ದಿನವೊಂದಕ್ಕೆ ಕನಿಷ್ಠ 14,500 ಪ್ರಾಣಿಗಳನ್ನು ವಧೆ ಮಾಡಲಾಗುತ್ತದೆ. ಈ ಪ್ರಾಣಿಗಳ ವಧೆಯಿಂದ ಸುಮಾರು 2 ಲಕ್ಷ ಲೀಟರ್‌ ದ್ರವರೂಪದ ತ್ಯಾಜ್ಯವು ಪಕ್ಕದ ಸುವರ್ಣಮುಖಿ ಮತ್ತು ವೃಷಭಾ­ವತಿ ನದಿ ಸೇರುತ್ತದೆ.

ಈ ತ್ಯಾಜ್ಯವು ಇಲ್ಲಿಂದ  ಮುಂದೆ ಹರಿದು ಸಂಗಮ್‌ ಪ್ರದೇಶದಲ್ಲಿ ಕಾವೇರಿ ಮತ್ತು ಅರ್ಕಾವತಿ ನದಿಗಳಲ್ಲಿ ಲೀನವಾಗುತ್ತದೆ. ಆದ್ದರಿಂದ ಕಸಾಯಿ­ಖಾನೆಯನ್ನು ಈ ಪ್ರದೇಶದಲ್ಲಿ ನಿರ್ಮಾಣ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಅರ್ಜಿ­ದಾರರು ಕೋರಿದ್ದರು.

ಸರ್ಕಾರಿ ವಕೀಲರಿಗೆ ಭದ್ರತೆ ಒದಗಿಸಲು ಸೂಚನೆ: ಮಾಹಿತಿ ಹಕ್ಕು ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಸರ್ಕಾ­ರದ ವಿಶೇಷ ವಕೀಲರಾಗಿ ಕರ್ತವ್ಯ ನಿರ್ವ­ಹಿಸುತ್ತಿರುವ ಸದಾಶಿವಮೂರ್ತಿ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಹೈ­ಕೋರ್ಟ್ ಗೃಹ ಇಲಾಖೆಗೆ ಸೂಚಿಸಿದೆ.

‘ಸದಾಶಿವಮೂರ್ತಿ ಅವರಿಗೆ ಪ್ರಕರಣದ ಆರೋಪಿಗಳಿಂದ ಜೀವ ಬೆದರಿಕೆ ಇದೆ. ಆದ್ದರಿಂದ ಅವರಿಗೆ ಸೂಕ್ತ ರಕ್ಷಣೆ ನೀಡಲು ಗೃಹ ಇಲಾಖೆಗೆ ಆದೇಶಿಸಬೇಕು’ ಎಂದು ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲರು) ಹಸ್ಮತ್ ಪಾಷಾ ಮಧ್ಯಾಂತರ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕುಮಾರ್ ನೇತೃತ್ವದ ವಿಭಾಗೀಯ ಪೀಠವು ಅಮಿಕಸ್‌ ಕ್ಯೂರಿ ಅವರ ಅರ್ಜಿಯನ್ನು ಪರಿಗಣಿಸಿ ಈ ಆದೇಶ ನೀಡಿತು.

ಪೌರ ಕಾರ್ಮಿಕರ ಬಾಕಿ ವೇತನ ಬಿಡುಗಡೆ
‘ಕಸದ ನಿರ್ವಹಣೆಯ ಹೊಣೆ ಹೊತ್ತ ಗುತ್ತಿಗೆದಾರರು ಮತ್ತು ಪೌರ ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿದ್ದ ವೇತನವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ. ಮಂಗಳವಾರ ನ್ಯಾಯಮೂರ್ತಿ ಎನ್‌.ಕುಮಾರ್‌ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠಕ್ಕೆ ಈ ಕುರಿತ ಮಾಹಿತಿಯನ್ನು ಬಿಬಿಎಂಪಿ ಪರ ವಕೀಲರು ಸಲ್ಲಿಸಿದರು.

ವೇತನ ಪಾವತಿಗಾಗಿ ₹118 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಬಿಬಿಎಂಪಿ ವ್ಯಾಪ್ತಿಯ ಕಸದ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಆರೋಪ ಕುರಿತಂತೆ ಸಲ್ಲಿಸಲಾಗಿರುವ ಅರ್ಜಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT