ADVERTISEMENT

ಕಸ ಹಾಕಿದರೆ ಪರವಾನಗಿ ರದ್ದು

ಸ್ವಚ್ಛತಾ ಕಾರ್ಯ: ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 20:33 IST
Last Updated 25 ಜುಲೈ 2015, 20:33 IST

ಬೆಂಗಳೂರು: ‘ರಸೆಲ್‌ ಮಾರುಕಟ್ಟೆ ಬಳಿ ತ್ಯಾಜ್ಯ ಸುರಿಯುವ ಹೋಟೆಲ್ ಮಾಲೀಕರಿಗೆ ಹೆಚ್ಚಿನ ದಂಡ ವಿಧಿಸುವ ಜತೆಗೆ ಮಾರಾಟ ಪರವಾನಗಿ ರದ್ದುಪಡಿಸಿ’ ಎಂದು ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್‌ ಅವರು ಪಾಲಿಕೆಯ ಆರೋಗ್ಯ ಅಧಿಕಾರಿಗಳಿಗೆ ಶನಿವಾರ ಸೂಚನೆ ನೀಡಿದರು.

ರಸೆಲ್ ಮಾರುಕಟ್ಟೆಗೆ ಭೇಟಿ ನೀಡಿದ ಅವರು ಸ್ವಚ್ಛತಾ ಕಾರ್ಯ ಪರಿಶೀಲಿಸಿದರು. ಭೇಟಿ ಸಂದರ್ಭದಲ್ಲಿ ಮಾರುಕಟ್ಟೆ ವ್ಯಾಪಾರಿಗಳು ಸ್ಥಳೀಯ ಹೋಟೆಲ್ ಮಾಲೀಕರು ತ್ಯಾಜ್ಯ ತಂದು ಮಾರುಕಟ್ಟೆ ಬಳಿ ಸುರಿಯುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಎಂದು ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕುಮಾರ್‌ ನಾಯಕ್‌, ‘ಹೋಟೆಲ್ನಲ್ಲಿ ಉತ್ಪತ್ತಿಯಾಗುವ ಹಸಿ ಕಸ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಹೋಟೆಲ್ ತ್ಯಾಜ್ಯ ವಿಲೇವಾರಿ ಮಾಡುವ ಸಂಸ್ಥೆಯೊಂದಿಗೆ ಮಾಲೀಕರು ಒಪ್ಪಂದ ಮಾಡಿಕೊಂಡು ಕಸ ಸಾಗಿಸಬೇಕು. ಒಂದೊಮ್ಮೆ, ಹೋಟೆಲ್ ತ್ಯಾಜ್ಯವನ್ನು ಚರಂಡಿಗೆ ಸುರಿದರೆ ಅಂತಹ ಹೋಟೆಲ್ ಮಾರಾಟ ಪರವಾನಗಿ ರದ್ದುಗೊಳಿಸಿ, ದಂಡ ಹಾಕಿ’ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆದೇಶಿಸಿದರು.

ಮಾರುಕಟ್ಟೆಯ ಅನೇಕ ಅಂಗಡಿ ಗಳಲ್ಲಿ ಕಸ ಗಮನಿಸಿದ ಆಯುಕ್ತರು ಅಂಗಡಿ ಮಾಲೀಕರಿಗೆ ‘ನೀವೇ ಈ ರೀತಿ ಕಸ ಇಟ್ಟು ಕೊಂಡರೆ ಹೇಗೆ? ಪ್ರತಿದಿನ ಕಸ ಪೌರ ಕಾರ್ಮಿಕರಿಗೆ ಕಸ ನೀಡಬೇಕು. ಅಂಗಡಿ ಮುಂದೆ ಕಸ ಹಾಕಲಿಕ್ಕೆ ಡಬ್ಬ ಇಟ್ಟು ಕೊಳ್ಳಬೇಕು’ ಎಂದು ಸೂಚಿಸಿದರು.

‘ಎಲ್ಲವನ್ನು ಪಾಲಿಕೆಯೇ ನಿರ್ವಹಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಸ್ವಚ್ಛವಾದ ವಾತಾವರಣ ಕಲ್ಪಿಸುವುದು ವ್ಯಾಪಾರಿಗಳ ಜವಾಬ್ದಾರಿ’ ಎಂದು ಹೇಳಿದರು.

‘ರಸೆಲ್ ಮಾರುಕಟ್ಟೆಯ ಒಳಭಾಗ ದಲ್ಲಿರುವ ಚರಂಡಿಯಲ್ಲಿ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿಯದೇ ದುರ್ವಾಸನೆ ಬರುತ್ತಿದೆ. ಕೂಡಲೇ ಚರಂಡಿ ಹೂಳು ತೆಗೆಸಬೇಕು. ಅವಶ್ಯಕತೆ ಇದ್ದರೆ ಚರಂಡಿ ದುರಸ್ತಿ ಕಾರ್ಯ ನಡೆಸಬೇಕು’ ಎಂದು ವಾರ್ಡ್  ಎಂಜಿನಿಯರ್‌ಗೆ ಆಯುಕ್ತರು ತಿಳಿಸಿದರು.

ಕಾರ್ಮಿಕರೊಂದಿಗೆ ಕಾಫಿ: ವಸಂತನಗರ ವಾರ್ಡ್‌ನಲ್ಲಿ ಪೌರ ಕಾರ್ಮಿಕರೊಂದಿಗೆ ಬೆಳಿಗ್ಗೆ ಕಾಫಿ ಕುಡಿದ ಕುಮಾರ್‌ ನಾಯಕ್‌, ಈ ವೇಳೆ ಪೌರ ಕಾರ್ಮಿಕರ ಸೌಲಭ್ಯಗಳ ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.

‘ವೇತನ ವಿಳಂಬವಾಗಿ ನೀಡುವ, ತುಟ್ಟಿಭತ್ಯೆ ಮತ್ತು ಅಗತ್ಯ ಸಲಕರಣೆಗಳನ್ನು ನೀಡದ ಗುತ್ತಿಗೆದಾರರ ವಿರುದ್ಧ ಧೈರ್ಯವಾಗಿ ದೂರು ಸಲ್ಲಿಸಿ. ಯಾವುದೇ ಕಾರಣಕ್ಕೂ ಹೋಟೆಲ್‌ಗಳಿಂದ ತ್ಯಾಜ್ಯ ಸಂಗ್ರಹಿಸಬೇಡಿ. ಅದಕ್ಕೆ ಪ್ರತ್ಯೇಕ ವ್ಯವಸ್ಥೆ ಇದೆ. ಗುತ್ತಿಗೆದಾರರು ಒತ್ತಾಯಿಸಿದರೆ ನನ್ನ ಗಮನಕ್ಕೆ ತನ್ನಿ’ ಎಂದು ಹೇಳಿದರು.

ಕ್ರಮಕ್ಕೆ ಸೂಚನೆ: ಆಜಾದ್ ನಗರ, ವಾಲ್ಮೀಕಿನಗರ, ಗಾಂಧಿನಗರ, ದೇವರಜೀವನ ಹಳ್ಳಿ ಮುಂತಾದೆಡೆ ಶನಿವಾರ ತಪಾಸಣೆ ನಡೆಸಿದ ಪಾಲಿಕೆ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ, ವಾರ್ಡ್-141  ರಲ್ಲಿ ಅನೇಕ ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದ ಆರೋಗ್ಯ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.