ADVERTISEMENT

ಕಾಂಗ್ರೆಸ್ಸಿಗರಲ್ಲಿ ಭೀತಿ ಸೃಷ್ಟಿಸುವ ಯತ್ನ

ಎನ್‌ಡಿಎ ವಿರುದ್ಧ ಪೃಥ್ವಿರಾಜ್ ಚವಾಣ್ ಆರೋಪ

​ಪ್ರಜಾವಾಣಿ ವಾರ್ತೆ
Published 26 ಮೇ 2016, 20:01 IST
Last Updated 26 ಮೇ 2016, 20:01 IST
ಕಾಂಗ್ರೆಸ್ಸಿಗರಲ್ಲಿ ಭೀತಿ ಸೃಷ್ಟಿಸುವ ಯತ್ನ
ಕಾಂಗ್ರೆಸ್ಸಿಗರಲ್ಲಿ ಭೀತಿ ಸೃಷ್ಟಿಸುವ ಯತ್ನ   

ಬೆಂಗಳೂರು: ‘ಆಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣವನ್ನು ಬಳಸಿಕೊಂಡು ಕಾಂಗ್ರೆಸ್ಸಿನಲ್ಲಿ ಭೀತಿ ಮೂಡಿಸಲು ಯತ್ನಿಸಲಾಗುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚವಾಣ್ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುಪಿಎ ಸರ್ಕಾರದ ಅವಧಿಯಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಆದರೆ, ಪ್ರಕರಣದ ಬಗ್ಗೆ ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ ಏನು ಮಾಡಿದೆ’ ಎಂದು ಪ್ರಶ್ನಿಸಿದರು.

‘ಆಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣದಲ್ಲಿ ತಪ್ಪು ಮಾಡಿದವರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಿದರೆ ಕಾಂಗ್ರೆಸ್ಸಿಗೆ ನಿಜಕ್ಕೂ ಸಂತೋಷವಾಗುತ್ತದೆ’ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾಧ್ರಾ ಅವರು ಹರಿಯಾಣದಲ್ಲಿ ನಡೆಸಿದ್ದಾರೆ ಎನ್ನಲಾದ ಕಾನೂನುಬಾಹಿರ ಜಮೀನು ವ್ಯವಹಾರದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಹರಿಯಾಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮಾತ್ರವಲ್ಲ, ಎಲ್ಲ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ಪೂರ್ಣಗೊಳಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲು ನರೇಂದ್ರ ಮೋದಿ ಸರ್ಕಾರ ಮುಂದಾಗಲಿ’ ಎಂದು ಉತ್ತರಿಸಿದರು.

ಎನ್‌ಡಿಎ ವಿಫಲ: ಎರಡು ವರ್ಷಗಳ ಆಡಳಿತ ಅವಧಿಯಲ್ಲಿ ಎನ್‌ಡಿಎ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಬರದಿಂದ ನಲುಗಿರುವ ಯಾವ ಪ್ರದೇಶಕ್ಕೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ 2015ರ ಜುಲೈ – ಸೆಪ್ಟೆಂಬರ್‌ ಅವಧಿಯಲ್ಲಿ ಕೇವಲ 1.34 ಲಕ್ಷ ಉದ್ಯೋಗ ಸೃಷ್ಟಿ ಆಗಿದೆ ಎಂದು ಚವಾಣ್ ಆರೋಪಿಸಿದರು.

ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರ ಶೇ 7.5ರಷ್ಟು ಇರಲಿದೆ ಎಂದು ಸರ್ಕಾರ ಹೇಳುತ್ತಿದೆ. ಜಿಡಿಪಿ ಬಗೆಗಿನ ಮಾತನ್ನು ವಿಶ್ವದ ಹಿರಿಯ ಆರ್ಥಿಕ ತಜ್ಞರು ಸೇರಿದಂತೆ ಯಾರೂ ಈ ಮಾತನ್ನು ನಂಬುತ್ತಿಲ್ಲ ಎಂದು ಹೇಳಿದರು.

ವಿದೇಶಿ ನೇರ ಬಂಡವಾಳ ಹೂಡಿಕೆ ಕಡಿಮೆಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಸೂಲಿಯಾಗದ ಸಾಲದ ಪ್ರಮಾಣ ಶೇ 7.3ಕ್ಕೆ ತಲುಪಿದೆ. ಸಾಲದ ಹಂಚಿಕೆ ಬೆಳವಣಿಗೆ ದರ 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ದೂರಿದರು.

ಮೋದಿ ಅವರ ವಿದೇಶಾಂಗ ನೀತಿಯಿಂದ ದೇಶಕ್ಕೆ ಸಿಕ್ಕಿದ್ದು ಪಠಾಣ್‌ಕೋಟ್‌ ಹಾಗೂ ಗುರುದಾಸಪುರ ಮೇಲಿನ ದಾಳಿ ಮಾತ್ರ. ಮೋದಿ ಪ್ರಧಾನಿಯಾದ ನಂತರ ನೇಪಾಳದ ಜೊತೆಗಿನ ಸಂಬಂಧ ಕೆಟ್ಟಿದೆ. ಉನ್ನತ ಶಿಕ್ಷಣವನ್ನು ಕೇಸರೀಕಣಗೊಳಿಸಿ,  ದುರ್ಬಲಗೊಳಿಸುವ ವ್ಯವಸ್ಥಿತ ಪ್ರಯತ್ನ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಸಿ.ಎಂ.ಗೆ ಪ್ರಶಂಸೆ
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಹಿರಿಯ ನಾಯಕರು. ಅವರು ಜನನಾಯಕರೂ ಹೌದು’ ಎಂದು ಚವಾಣ್ ಪ್ರಶಂಸಿಸಿದರು.

‘ಸಿದ್ದರಾಮಯ್ಯ ಅವರು ಹಲವು ಚುನಾವಣೆಗಳಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಆಗಿರುವ ಕುಸಿತದ ಪ್ರಕಾರ ದೇಶದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹ 31.99, ಡೀಸೆಲ್‌ಗೆ ₹ 25.40 ದರ ನಿಗದಿಯಾಗಿರಬೇಕಿತ್ತು. ಆದರೆ, ಹೆಚ್ಚಿನ ದರ ವಸೂಲು ಮಾಡಲಾಗುತ್ತಿದೆ.
-ಪೃಥ್ವಿರಾಜ್ ಚವಾಣ್, ಕಾಂಗ್ರೆಸ್ ಮುಖಂಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.