ADVERTISEMENT

‘ಕಾಡಿಗೆ ಬೆಂಕಿಬಿದ್ದ ತಕ್ಷಣ ಸಂದೇಶ!’

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನೆರವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:35 IST
Last Updated 2 ಮಾರ್ಚ್ 2017, 19:35 IST
ಸೈಬಲ್‌ ದಾಸ್‌ಗುಪ್ತ (ಎಡದಿಂದ ಎರಡನೆಯವರು) ಹಾಗೂ ಆರ್‌.ಎಸ್‌. ಸುರೇಶ್‌ ಪರಸ್ಪರ ಮಾತುಕತೆ ನಡೆಸಿದರು. ಎಫ್‌ಎಸ್‌ಐ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕ ಅಶುತೋಷ್‌ ಇದ್ದಾರೆ  –ಪ್ರಜಾವಾಣಿ ಚಿತ್ರ
ಸೈಬಲ್‌ ದಾಸ್‌ಗುಪ್ತ (ಎಡದಿಂದ ಎರಡನೆಯವರು) ಹಾಗೂ ಆರ್‌.ಎಸ್‌. ಸುರೇಶ್‌ ಪರಸ್ಪರ ಮಾತುಕತೆ ನಡೆಸಿದರು. ಎಫ್‌ಎಸ್‌ಐ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕ ಅಶುತೋಷ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚರಿಕೆಯ ಸಂದೇಶ ರವಾನಿಸುವ ‘ಕಾಳ್ಗಿಚ್ಚು ಎಚ್ಚರಿಕೆ ವ್ಯವಸ್ಥೆ’ಯನ್ನು (ಎಫ್‌ಎಫ್‌ಎಎಸ್‌) ಕಳೆದ ತಿಂಗಳು ಅಳವಡಿಸಿಕೊಳ್ಳಲಾಗಿದೆ’ ಎಂದು ಡೆಹ್ರಾಡೂನ್‌ನ ಭಾರತೀಯ ಅರಣ್ಯ ಸಮೀಕ್ಷೆ (ಎಫ್‌ಎಸ್‌ಐ) ಸಂಸ್ಥೆಯ ಉಪ ನಿರ್ದೇಶಕ ಇ.ವಿಕ್ರಂ ಹೇಳಿದರು.

ಎಫ್‌ಎಸ್‌ಐ ಹಾಗೂ ಆಹಾರ ಕೃಷಿ ಸಂಸ್ಥೆಯ ಆಶ್ರಯದಲ್ಲಿ  ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ರಾಜ್ಯಮಟ್ಟದಲ್ಲಿ ಅರಣ್ಯ ಮೇಲ್ವಿಚಾರಣಾ ವ್ಯವಸ್ಥೆಯ ಅಭಿವೃದ್ಧಿ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ‘ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ಎಚ್ಚರಿಕೆ ವ್ಯವಸ್ಥೆಯ ಉಪಕರಣಗಳನ್ನು ಅಳವಡಿಸಲಾಗುತ್ತದೆ.

ಇದರಲ್ಲಿ ಸೆನ್ಸರ್‌ಗಳಿದ್ದು, ಕಾಳ್ಗಿಚ್ಚು ಕಾಣಿಸಿಕೊಂಡ ಸಂದರ್ಭದಲ್ಲಿ ಅಥವಾ ವಾತಾವರಣದ ಉಷ್ಣಾಂಶ ನಿರ್ದಿಷ್ಟಮಟ್ಟ ಮೀರಿದಾಗ ಎಚ್ಚರಿಕೆಯ ಸಂದೇಶಗಳನ್ನು ಉಪಗ್ರಹಕ್ಕೆ ರವಾನಿಸುತ್ತದೆ. ಯಾವ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವಿಷಯವಾಗಿ ಭೌಗೋಳಿಕ ನಿಖರ ಮಾಹಿತಿ ದೊರೆಯಲಿದೆ. ಕೂಡಲೇ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಬಹುದು’ ಎಂದರು.

ADVERTISEMENT

‘ಇದಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನೆರವು ಪಡೆಯಲಾಗಿದೆ. ದೇಶದಾದ್ಯಂತ 10,500 ಅರಣ್ಯಾಧಿಕಾರಿಗಳು ಕಾಳ್ಗಿಚ್ಚು ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿದ್ದಾರೆ’ ಎಂದು ಮಾಹಿತಿ ನೀಡಿದರು. ಎಫ್‌ಎಸ್‌ಐ ಪ್ರಧಾನ ನಿರ್ದೇಶಕ ಸೈಬಲ್‌ ದಾಸ್‌ಗುಪ್ತ ಮಾತನಾಡಿ, ‘ಕಾಳ್ಗಿಚ್ಚು ಎಚ್ಚರಿಕೆ ವ್ಯವಸ್ಥೆಯಡಿ ಮಾಹಿತಿ ಪಡೆಯಬೇಕಾದರೆ ಎಫ್‌ಎಸ್‌ಐನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಆದರೆ, ಕರ್ನಾಟಕದಿಂದ 300 ಅಧಿಕಾರಿಗಳು ಮಾತ್ರ ಹೆಸರು ನೋಂದಾಯಿಸಿದ್ದಾರೆ’ ಎಂದರು.

ಪೈಲಟ್‌ ಯೋಜನೆಗೆ ಕೊಡಗು ಆಯ್ಕೆ: ರಾಷ್ಟ್ರೀಯ ಅರಣ್ಯ ಮೇಲ್ವಿಚಾರಣಾ ವ್ಯವಸ್ಥೆ (ಎನ್‌ಎಫ್‌ಎಂಎಸ್‌) ಯೋಜನೆಗೆ ನೋಡಲ್‌ ರಾಜ್ಯಗಳಾಗಿ ಕರ್ನಾಟಕ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಪಂಜಾಬ್‌, ಉತ್ತರಾಖಂಡ ಹಾಗೂ ಮೇಘಾಲಯವನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಕೊಡಗು ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಅಲ್ಲಿನ ಮರಗಳು, ಅವುಗಳ ಬೆಳವಣಿಗೆ, ಇಂಗಾಲದ ಪ್ರಮಾಣ, ಮಣ್ಣಿನ ಸವಕಳಿ ಹಾಗೂ ಸಾಮರ್ಥ್ಯದ ಪರೀಕ್ಷೆ ನಡೆಸಲಾಗುತ್ತದೆ.

‘ಕೊಡಗು ಜಿಲ್ಲೆಯಲ್ಲಿ ಒಂದು ಹೆಕ್ಟೇರ್‌ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಲಾಗುತ್ತದೆ. ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ. ಬಳಿಕ ಉಳಿದ ರಾಜ್ಯಗಳಿಗೆ ಯೋಜನೆವಿಸ್ತರಿಸಲಾಗುತ್ತದೆ’  ಎಂದರು.

ಮೂವರು ತಜ್ಞರ ತಂಡ ರಚನೆ
‘ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ’ ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್‌.ಎಸ್‌. ಸುರೇಶ್‌ ತಿಳಿಸಿದರು. ‘ರಕ್ಷಿತಾರಣ್ಯದಲ್ಲಿ ಪ್ರತಿ ವರ್ಷ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ತಾತ್ಕಾಲಿಕ ಅಗ್ನಿಶಾಮಕ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಅಲ್ಲದೆ,
ಬೆಂಕಿ ನಂದಿಸಲು ಸಣ್ಣಗಾತ್ರದ ಅಗ್ನಿಶಾಮಕ ವಾಹನಗಳನ್ನು ಖರೀದಿಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.