ADVERTISEMENT

ಕಾನ್‌ಸ್ಟೆಬಲ್‌ಗಳು ಸೇರಿ ಮೂವರ ಬಂಧನ

ಗಿರಿ ನಗರ ಠಾಣೆಯ ಪೊಲೀಸರಿಂದ ದರೋಡೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 20:15 IST
Last Updated 4 ಡಿಸೆಂಬರ್ 2016, 20:15 IST

ಬೆಂಗಳೂರು: ಗಿರಿನಗರ ಠಾಣೆ  ವ್ಯಾಪ್ತಿಯಲ್ಲಿ ವಕೀಲೆ ಸುಕನ್ಯಾ ಎಂಬುವರನ್ನು ತಡೆದು ₹8 ಲಕ್ಷ ದೋಚಿದ್ದ ಆರೋಪದಡಿ ಹೆಡ್‌ ಕಾನ್‌ಸ್ಟೆಬಲ್‌ ಮಯೂರ್‌,  ಕಾನ್‌ಸ್ಟೆಬಲ್‌ ರಾಘವ್‌ ಕುಮಾರ್‌ ಹಾಗೂ ಕೃಷ್ಣಮೂರ್ತಿ ಎಂಬುವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

‘ಬಂಧಿತರಾದ ಮಯೂರ್‌ ಹಾಗೂ ರಾಘವ್‌ ಕುಮಾರ್‌ ಹಲವು ವರ್ಷಗಳಿಂದ ಗಿರಿನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಕೃಷ್ಣಮೂರ್ತಿ, ಬಾಣಸಿಗರಾಗಿದ್ದು ಅವರೇ ಪ್ರಮುಖ ಆರೋಪಿಯಾಗಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ದೋಚಿದ್ದ ಹಣದ ಪೈಕಿ ಮಯೂರ್‌ ಬಳಿ ಇದ್ದ ₹1.30 ಲಕ್ಷ ಹಾಗೂ ಕೃಷ್ಣಮೂರ್ತಿ ಬಳಿಯ ₹5.44 ಲಕ್ಷ ಸೇರಿದಂತೆ ಒಟ್ಟು ₹6.74 ಲಕ್ಷವನ್ನು ಜಪ್ತಿ ಮಾಡಲಾಗಿದೆ. ಎಲ್ಲವೂ ರದ್ದಾದ ₹500, ₹1,000 ಮುಖಬೆಲೆ ನೋಟುಗಳು. ಉಳಿದ ಹಣವನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಮಾಹಿತಿ ನೀಡಿ ಹಿಡಿಸಿದ್ದ: ‘ಸುಕನ್ಯಾ ಅವರು ಹಣದ ಸಮೇತ ಶುಕ್ರವಾರ (ಡಿ.2) ರಾತ್ರಿ ಮೆಜೆಸ್ಟಿಕ್‌ನಿಂದ ಪದ್ಮನಾಭನಗರಕ್ಕೆ ಆಟೊದಲ್ಲಿ ಹೋಗುತ್ತಿದ್ದ ವಿಷಯ ಕೃಷ್ಣಮೂರ್ತಿಗೆ ಗೊತ್ತಿತ್ತು. ಅವರೇ ಕಾನ್‌ಸ್ಟೆಬಲ್‌ಗಳಿಗೆ ಮಾಹಿತಿ ನೀಡಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.

‘ನನಗೆ ಸುಕನ್ಯಾ ವಂಚಿಸಿದ್ದಾರೆ. ಅವರು ತೆಗೆದುಕೊಂಡು ಹೋಗುತ್ತಿರುವ ಹಣ ನನ್ನದು. ಅದನ್ನು ಕೊಡಿಸಿದರೆ ಪಾಲು ನೀಡುತ್ತೇನೆಂದು ಕೃಷ್ಣಮೂರ್ತಿ ಕಾನ್‌ಸ್ಟೆಬಲ್‌ಗಳಿಗೆ ಹೇಳಿದ್ದರು. ಅದನ್ನು ನಂಬಿದ್ದ ಕಾನ್‌ಸ್ಟೆಬಲ್‌ಗಳು, ಅವರನ್ನು ತಡೆದು ಹಣವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದರು.’

‘ಬಳಿಕ ಅದರಲ್ಲಿದ್ದ ₹1.30 ಲಕ್ಷವನ್ನು ಹೆಡ್‌ ಕಾನ್‌ಸ್ಟೆಬಲ್‌್ ಮಯೂರ್‌ ಇಟ್ಟುಕೊಂಡಿದ್ದರು. ಉಳಿದ ಹಣವನ್ನು ಕೃಷ್ಣಮೂರ್ತಿಗೆ ಕೊಟ್ಟು ಕಳುಹಿಸಿದ್ದರು’ ಎಂದು ವಿವರಿಸಿದರು.

ದಾಖಲೆ ನೀಡುವಂತೆ ಸೂಚನೆ: ‘ಸುಕನ್ಯಾ ಅವರನ್ನು ಕಾನ್‌ಸ್ಟೆಬಲ್‌ಗಳು ರಾತ್ರಿ ಠಾಣೆಗೆ ಕರೆದೊಯ್ದಿದ್ದರು. ಆದರೆ, ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ತಾವೇ ಅಧಿಕಾರಿಗಳಂತೆ ವರ್ತಿಸಿ ದಾಖಲೆ ಕೊಟ್ಟು ಹಣ ತೆಗೆದುಕೊಂಡು ಹೋಗುವಂತೆ ಸುಕನ್ಯಾ ಅವರಿಗೆ ಹೇಳಿ ಕಳುಹಿಸಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.

‘ಮರುದಿನ ಸುಕನ್ಯಾ ಠಾಣೆಗೆ ಬಂದಿರಲಿಲ್ಲ. ಹೀಗಾಗಿ ತಮ್ಮ ಕೃತ್ಯ ಬಯಲಾಗುವುದಿಲ್ಲ ಎಂದು ಆರೋಪಿಗಳು ತಿಳಿದಿದ್ದರು. ಆದರೆ, ಸಂಜೆ ಕಮಿಷನರ್‌ ಕಚೇರಿಗೆ ಹೋದ ಸುಕನ್ಯಾ ದೂರು ಸಲ್ಲಿಸಿದ್ದರು. ಕಮಿಷನರ್‌ ಸೂಚನೆಯನ್ವಯ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ವಿವರಿಸಿದರು.

ನೋಟು ಬದಲಾವಣೆ ನೆಪ: ‘ಹಳೇ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ಕೊಡುವುದಾಗಿ  ಹೇಳಿ ಕೃಷ್ಣಮೂರ್ತಿ, ಸುಕನ್ಯಾ ಅವರನ್ನು  ಕರೆಸಿಕೊಂಡಿದ್ದ ಎಂಬ ಮಾಹಿತಿಯೂ ಇದೆ. ಆ ಬಗ್ಗೆ ದೂರುದಾರರು ಹಾಗೂ ಆರೋಪಿಯು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಿದೆ’ ಎಂದು ತನಿಖಾಧಿಕಾರಿ ತಿಳಿಸಿದರು.

ಕಾನ್‌ಸ್ಟೆಬಲ್‌ಗಳ ಅಮಾನತು
‘ಪ್ರಕರಣದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಮಯೂರ್‌ ಹಾಗೂ ಕಾನ್‌ಸ್ಟೆಬಲ್‌ ರಾಘವ್‌ ಕುಮಾರ್‌ ಭಾಗಿಯಾಗಿದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಜತೆಗೆ ಪ್ರಕರಣದ ತನಿಖೆ ಜವಾಬ್ದಾರಿಯನ್ನು  ಚಾಮರಾಜಪೇಟೆಯ ಎಸಿಪಿ ಅವರಿಗೆ ವಹಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ತಿಳಿಸಿದರು.

ಕೋರ್ಟ್‌ಗೆ ಹಣದ ದಾಖಲೆ ಸಲ್ಲಿಕೆ
‘ಹಣಕ್ಕೆ ಸೂಕ್ತ ದಾಖಲೆ ಇದೆ. ಅದಕ್ಕಾಗಿಯೇ ದೂರು ನೀಡಿದ್ದೇನೆ. ಕೋರ್ಟ್‌ಗೆ ಸೂಕ್ತ ದಾಖಲೆಗಳನ್ನು ಕೊಟ್ಟು ಹಣ ಪಡೆದುಕೊಳ್ಳುತ್ತೇನೆ’ ಎಂದು ಸುಕನ್ಯಾ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.