ADVERTISEMENT

ಕಾನ್‌ಸ್ಟೆಬಲ್‌ ಆಗಿದ್ದವ ಕಾರು ಕಳ್ಳನಾದ!

ಐಷಾರಾಮಿ ಕಾರುಗಳ ಮೇಲೆಯೇ ಈತನ ಕಣ್ಣು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:54 IST
Last Updated 2 ಮಾರ್ಚ್ 2017, 19:54 IST
ಕಾನ್‌ಸ್ಟೆಬಲ್‌ ಆಗಿದ್ದವ ಕಾರು ಕಳ್ಳನಾದ!
ಕಾನ್‌ಸ್ಟೆಬಲ್‌ ಆಗಿದ್ದವ ಕಾರು ಕಳ್ಳನಾದ!   
ಬೆಂಗಳೂರು: ಬಹ್ರೇನ್ ದೇಶದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದ ಈತ, 2006ರಲ್ಲಿ ನಗರಕ್ಕೆ ಬಂದು ಐಷಾರಾಮಿ ಕಾರುಗಳನ್ನು ಕಳವು ಮಾಡಲು ಆರಂಭಿಸಿದ್ದ. ಹನ್ನೊಂದು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಈತ, ಕೊನೆಗೂ ಮಡಿವಾಳ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಅತಿಥಿಯಾಗಿದ್ದಾನೆ.
 
‘ಕೇರಳದ ನಜೀರ್ ಅಲಿಯಾಸ್ ಪಿಲಾಕಲ್ ನಜೀರ್ (56) ಎಂಬಾತನನ್ನು ಬಂಧಿಸಿ, ಆತ ಚೆನ್ನೈ ಶೋರೂಂನಿಂದ ಕದ್ದಿದ್ದ ₹ 35 ಲಕ್ಷ ಮೌಲ್ಯದ ‘ಹುಂಡೈ ಸಾಂಟಾ ಫೆ’ ಕಾರನ್ನು ಜಪ್ತಿ ಮಾಡಲಾಗಿದೆ. ಬಂಧಿತನ ವಿರುದ್ಧ ಬೆಂಗಳೂರಿನಲ್ಲಿ ಒಂಬತ್ತು, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಒಂದೊಂದು ಪ್ರಕರಣಗಳು ದಾಖಲಾಗಿವೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ತಿಳಿಸಿದರು. 
 
ಮಾತೇ ಬಂಡವಾಳ: ಪಿಯುಸಿ ಓದಿರುವ ನಜೀರ್, 1998 ರಿಂದ 2006ರವರೆಗೆ ಬಹ್ರೇನ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದ. ಕರ್ತವ್ಯ ಲೋಪ ಆರೋಪದಡಿ ಇಲಾಖಾ ತನಿಖೆ ಎದುರಿಸಿದ್ದ ಈತ, ನಂತರ ಇಲಾಖೆ ತೊರೆದು ಬೆಂಗಳೂರಿಗೆ ಬಂದ. ಇಲ್ಲಿ ಪತ್ನಿ–ಮಕ್ಕಳ ಜತೆ ಹೊಸ ಗುರಪ್ಪನಪಾಳ್ಯದಲ್ಲಿ ವಾಸವಾಗಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದರು.
 
‘ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಚೆನ್ನಾಗಿ ಬಲ್ಲ ನಜೀರ್, ಗ್ರಾಹಕನ ಸೋಗಿನಲ್ಲಿ ಶೋರೂಂಗಳಿಗೆ ಹೋಗಿ ಮಾರಾಟ ಪ್ರತಿನಿಧಿಗಳ ಗಮನ ಬೇರೆಡೆ ಸೆಳೆಯುತ್ತಿದ್ದ. ಕಡಿಮೆ ದರದ ಕಾರುಗಳನ್ನು ಕಣ್ಣೆತ್ತಿಯೂ ನೋಡದ ಈತ, ₹ 25 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕಾರುಗಳನ್ನೇ ಕದಿಯುತ್ತಿದ್ದ.’
‘ಟೆಸ್ಟ್‌ ಡ್ರೈವ್ ನೆಪದಲ್ಲಿ ಶೋರೂಂನಿಂದ ಕಾರು ತೆಗೆದುಕೊಂಡು ಹೋಗುತ್ತಿದ್ದ ನಜೀರ್, ವಾಪಸ್ ಬರುತ್ತಲೇ ಇರಲಿಲ್ಲ. ಇತ್ತೀಚೆಗೆ ಚೆನ್ನೈನ ತಿರುವಿಕಾ ಕೈಗಾರಿಕಾ ಪ್ರದೇಶದ ಹುಂಡೈ ಶೋರೂಂನಲ್ಲೂ ಹೀಗೆ ಮಾಡಿದ್ದ. ಕದ್ದ ವಾಹನಗಳ ನಂಬರ್‌ ಪ್ಲೇಟ್ ಬದಲಿಸಿಕೊಂಡು, ಟೋಲ್ ದಾಟಿ ಬರುತ್ತಿದ್ದ’ ಎಂದು ಮಾಹಿತಿ ನೀಡಿದರು.
 
ಮುಂಬೈನಲ್ಲಿ ಮಾರಾಟ:  ‘ಈತ ಮೊದಲ ವಾಹನ ಕದ್ದಿದ್ದು ಬಸವನಗುಡಿ ಠಾಣೆ ವ್ಯಾಪ್ತಿಯಲ್ಲಿ. 2007ರಲ್ಲಿ ಶೋರೂಂನಿಂದ ಕಾರು ತೆಗೆದುಕೊಂಡು ಹೋದ ಆತ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನು ಮುಂಬೈನಲ್ಲಿ ಮಾರಾಟ ಮಾಡಿದ್ದ. ಇಷ್ಟು ದಿನ ನಜೀರ್‌ನ ವಾಸಸ್ಥಳದ ಬಗ್ಗೆ ಮಾಹಿತಿ ಇರಲಿಲ್ಲ. 10 ವರ್ಷಗಳಿಂದ ಈತ ಗುರಪ್ಪನಪಾಳ್ಯದಲ್ಲಿ ವಾಸವಾಗಿರುವ ವಿಷಯ ಇತ್ತೀಚೆಗೆ ತಿಳಿಯಿತು. ಈ ಸುಳಿವು ಆಧರಿಸಿ ಆತನನ್ನು ಬಂಧಿಸಲಾಯಿತು’ ಎಂದು ಅಧಿಕಾರಿಗಳು ಹೇಳಿದರು.   
 
‘ಕ್ಯಾನ್ಸರ್ ಚಿಕಿತ್ಸೆಗೆ ಕದಿಯುತ್ತಿದ್ದೆ’
‘ಮಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಆತನಿಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಕಾರು ಕದಿಯಲು ಪ್ರಾರಂಭಿಸಿದ್ದೆ.    ಮಗ ಗುಣಮುಖನಾದರೂ, ನಾನು ಕಳ್ಳತನ ವೃತ್ತಿ ಬಿಡಲು ಆಗಲಿಲ್ಲ’ ಎಂದು ನಜೀರ್ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.