ADVERTISEMENT

ಕಾಯ್ದೆ ಜಾರಿ: ವಿದ್ಯಾರ್ಥಿಗಳಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:47 IST
Last Updated 22 ಡಿಸೆಂಬರ್ 2014, 19:47 IST

ಬೆಂಗಳೂರು: ‘2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಜಾರಿಯಾದರೆ ಬಡ ವಿದ್ಯಾರ್ಥಿ­ಗಳಿಗೆ ತೊಂದರೆಯಾಗಲಿದೆ’ ಎಂದು ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಬಾಲ­ಸುಬ್ರ­ಮಣಿಯನ್ ಅಭಿಪ್ರಾಯಪಟ್ಟರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ), ಮೆಡಿಕಲ್‌ ಸರ್ವೀಸ್‌ ಸೆಂಟರ್‌ (ಎಂಎಸ್‌ಸಿ)  ಮತ್ತು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘ­ಟನೆ (ಎಐಡಿಎಸ್‌ಓ) ವತಿಯಿಂದ ನಗರ­ದಲ್ಲಿ ಸೋಮವಾರ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಾಯ್ದೆ ಜಾರಿಯಾದರೆ ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಸಾಧ್ಯ­ವಾಗು­ವುದಿಲ್ಲ. ಅಲ್ಲದೇ, ಖಾಸಗಿ ಕಾಲೇಜು­ಗಳ ಮೇಲೆ ಸರ್ಕಾರದ ಹಿಡಿತ ತಪ್ಪಿ­ಹೋಗಲಿದೆ. ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಸೀಟು ಪಡೆಯಲು ವಿದ್ಯಾರ್ಥಿಗಳು ಕಾಮೆಡ್‌–ಕೆ ನಡೆಸುವ ಪ್ರವೇಶ ಪರೀಕ್ಷೆ ಬರೆಯುವುದು ಅನಿವಾರ್ಯವಾಗಲಿದೆ ಎಂದರು.

ವೃತ್ತಿ ಶಿಕ್ಷಣ ಸಂಪೂರ್ಣವಾಗಿ ವ್ಯಾಪಾರೀಕರಣವಾಗಿದೆ. ಖಾಸಗಿ ಕಾಲೇಜುಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.  ಶಿಕ್ಷಣ ಸಂಸ್ಥೆಗಳು ಚಾರಿಟಬಲ್‌ ಟ್ರಸ್ಟ್‌ ಹೆಸರಿನಲ್ಲಿ ಹೆಚ್ಚಿನ ವಂತಿಗೆ ವಸೂಲಿ ಮಾಡುತ್ತಿವೆ. ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಸೀಟುಗಳು ಕೋಟಿಗಟ್ಟಲೆ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಅವರು ಹೇಳಿದರು.

ಸಂವಿಧಾನ ತಜ್ಞ ಪ್ರೊ.ಸಿ.ಕೆ.­ಎನ್‌.­ರಾಜಾ ಮಾತನಾಡಿ, ‘ವೃತ್ತಿ ಶಿಕ್ಷಣ ಕೋರ್ಸ್‌­ಗಳ ಪ್ರವೇಶ ಸಂಬಂಧ ಸರ್ಕಾರ ಜಾರಿ­ಗೊಳಿಸಲು ಮುಂದಾಗಿ­ರುವ 2006ರ ಕಾಯ್ದೆ ಸಂವಿಧಾನದ ಮೂಲ ಆಶಯಕ್ಕೆ  ವಿರುದ್ಧವಾಗಿದೆ. ಕಾಯ್ದೆ­ಯನ್ನು ಯಾವ ಕಾರಣಕ್ಕೂ ಜಾರಿ­ಗೊಳಿಸಬಾರದು. ಅಲ್ಲದೇ, ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಬೇಕು’ ಎಂದರು.

ವೃತ್ತಿ ಶಿಕ್ಷಣದ ವ್ಯಾಪಾರೀಕರಣ ತಡೆಯಲು ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾದ ಅಗತ್ಯ ಇದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕು ಮತ್ತು ಯುಕೆಜಿ­ಯಿಂದ ಸ್ನಾತಕೋತ್ತರ ಪದವಿ­ವರೆಗಿನ ಶಿಕ್ಷಣವನ್ನು  ರಾಷ್ಟ್ರೀಕರಣ­ಗೊ­ಳಿಸ­ಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.