ADVERTISEMENT

ಕಾರ್ಖಾನೆಗಳಲ್ಲಿ ಕನ್ನಡಿಗರ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ಕಾರ್ಮಿಕ ಇಲಾಖೆಯ ಅಧಿಕಾರಿಗಳು  ಕೆಲ ದಿನಗಳಿಂದ ತಮ್ಮ ವ್ಯಾಪ್ತಿಯ ಕಾರ್ಖಾನೆಗಳಲ್ಲಿ ಎಷ್ಟು ಜನ ಕನ್ನಡಿಗರು  ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವುದರಲ್ಲಿ ನಿರತರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ಸೂಚನೆ­ಯಂತೆ ಕಾರ್ಮಿಕ ಇಲಾಖೆ,  ಸೆಪ್ಟೆಂಬರ್‌ 11ರಂದು ರಾಜ್ಯದ ಉತ್ಪಾದನೆ, ಸಂಸ್ಕರಣೆ ಘಟಕಗಳನ್ನೂ ಸೇರಿ­ದಂತೆ ಎಲ್ಲ ಕೈಗಾರಿಕಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿ­ರುವ ಕನ್ನಡಿಗರ  ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸುತ್ತೋಲೆ ಹೊರಡಿಸಿತ್ತು.

ಈ ಕೆಲಸ ಎರಡು ವಾರಗಳಲ್ಲಿ ಪೂರ್ಣಗೊಳ್ಳ­ಲಿದ್ದು, ಜಿಲ್ಲಾವಾರು ಮಟ್ಟದಲ್ಲಿ ಕಲೆ ಹಾಕಿದ ಮಾಹಿತಿಗಳನ್ನು ಸಂಪುಟದ ಮುಂದಿಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡ­ಬೇಕು’ ಎಂಬ ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ವರದಿಯನ್ನು ಆಧರಿಸಿ  ಸಂಪುಟ ಸಭೆ ತೀರ್ಮಾನ ಕೈಗೊಳ್ಳಲಿದೆ.

‘ಜಿಲ್ಲಾಧಿಕಾರಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ,  ಕೈಗಾರಿಕಾ ಸುರಕ್ಷೆ ಮತ್ತು ಆರೋಗ್ಯ ವಲ­ಯ­ದವರನ್ನೂ ಸೇರಿಸಿಕೊಂಡು ಮಾಹಿತಿ ಸಂಗ್ರಹಿ­ಸ­ಲಾಗುತ್ತಿದೆ’ ಎಂದು ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಬಿ.ರಾಮಮೂರ್ತಿ ಮಾಹಿತಿ ನೀಡಿದ್ದಾರೆ.

ಹನ್ನೊಂದು ಜಂಟಿ ಕಾರ್ಮಿಕ ಆಯುಕ್ತರು, 11 ಸಹಾಯಕ ಆಯುಕ್ತರು, 41 ಕಾರ್ಮಿಕ ಅಧಿಕಾರಿಗಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.  ‘ಮಾತೃ ಭಾಷೆಯಾಗಿ  ಕನ್ನಡ ಬಳಸುವ ಮತ್ತು ಹದಿನೈದು ವರ್ಷಕ್ಕಿಂತ ಹೆಚ್ಚು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವವರನ್ನು ಕನ್ನಡಿಗರು ಎಂದು ಪರಿಗಣಿಸಲಾಗುತ್ತದೆ’ ಎಂದು ಕಾರ್ಮಿಕ ಆಯುಕ್ತ ಎಸ್‌. ವಿಶ್ವನಾಥ್‌ ಮಾಹಿತಿ ನೀಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಂಪೆನಿಗಳನ್ನೂ ಈ ಸಮೀಕ್ಷೆ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ, ಸರ್ಕಾರ ಇತ್ತೀಚೆಗಷ್ಟೇ ಮುಂದಿನ ಐದು ವರ್ಷಗಳ ಮಟ್ಟಿಗೆ ಐಟಿ ಕಂಪೆನಿಗಳಿಗೆ 1946ರ ಕಾರ್ಮಿಕ  ಕಾಯ್ದೆಯಿಂದ ವಿನಾಯಿತಿ ನೀಡಿದೆ.  ಹಾಗಾಗಿ ಐಟಿ ಕಂಪೆನಿಗಳು ವಿನಾಯಿತಿಯ ಲಾಭ ಪಡೆಯಲಿವೆ.

2014–19ರ ಹೊಸ ಕೈಗಾರಿಕಾ ನೀತಿಯಲ್ಲಿ ಕನ್ನಡಿಗರಿಗೆ ಎಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎಂದು ನಿಖರವಾಗಿ ಹೇಳಿಲ್ಲ. ಇದನ್ನು ಸಂಪುಟವೇ ನಿರ್ಧರಿಸಲಿದೆ.  ನಂತರ ಅಧಿಕೃತ ಆದೇಶ  ಹೊರಬೀಳಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.