ADVERTISEMENT

ಕಾರ್ನಾಡ್‌ಗೆ ಜ್ಞಾನಪೀಠ: ರಮೇಶ್‌ ಕುಮಾರ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ತುಮಕೂರು: ಸಾಹಿತಿ ಗಿರೀಶ್ ಕಾರ್ನಾಡ್‌ ಅವರಿಗೆ ಅದೆಂಥ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದಾರೊ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ವ್ಯಂಗ್ಯವಾಡಿದರು.

ತುಮಕೂರು ವಿ.ವಿ.ಯಲ್ಲಿ ಮಂಗಳವಾರ ದೇವರಾಜ ಅರಸು ಕುರಿತು ಮಾತನಾಡಿದ ಅವರು, ಸಾಹಿತಿ ಅನಂತಮೂರ್ತಿ ನಿಧನದ ದುಃಖ ಇನ್ನೂ ಇದೆ. ಇಂತಹ ಸಂದರ್ಭದಲ್ಲಿ ಅವರ ಕುರಿತು ಆಡಿರುವ ಮಾತು ಸರಿ ಅಲ್ಲ. ಅವರ ಸಾಹಿತ್ಯ ಕುರಿತು ಆಕ್ಷೇಪ ಇದ್ದಲ್ಲಿ ಅದನ್ನು ಬರವಣಿಗೆಯಲ್ಲಿ ದಾಖಲಿಸಬಹುದಿತ್ತು. ಆದರೆ ಬಹಿರಂಗವಾಗಿ ಮಾತನಾಡಿರುವುದು ನಮ್ಮ ಸಂಸ್ಕಾರ ಅಲ್ಲ ಎಂದರು.

ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಓನರ್‌ಶಿಪ್‌ ಪಕ್ಷಗಳಾಗಿವೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲವಾಗಿದೆ. ಚುನಾವಣೆ ಆಯೋಗ ಚುನಾವಣಾ ಸುಧಾರಣೆ ಭಾಗವಾಗಿ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಒತ್ತುಕೊಡಬೇಕಾಗಿದೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಕಾರಣದಿಂದಲೇ ದೇವರಾಜ ಅರಸು, ವೀರೇಂದ್ರ ಪಾಟೀಲ್‌, ನಿಜಲಿಂಗಪ್ಪ ಅವರಂಥ  ಮಹಾನ್‌ ನಾಯಕರನ್ನು ಮೂಲೆಗೊತ್ತಲಾಯಿತು ಎಂದರು.

‘ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ. ಆದರೆ ಸಚಿವ ಸ್ಥಾನ, ಅಧಿಕಾರಕ್ಕಾಗಿ ಯಾರ ಬಳಿಗೂ ಹೋಗುವುದಿಲ್ಲ. ಜನರಿಗೆ ಅನ್ಯಾಯವಾದರೆ ಅದನ್ನು ಪ್ರತಿಭಟಿಸದೆ ಬಿಡುವುದಿಲ್ಲ. ಸರ್ಕಾರ ಬೇರೆ, ಆಡಳಿತ ಪಕ್ಷ ಬೇರೆ. ಸರ್ಕಾರಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.