ADVERTISEMENT

ಕಾಶ್ಮೀರ ಜನರಲ್ಲಿ ಭಾರತೀಯತೆ ಬೆಳೆಸಿ

ಲೇಖಕ ಬಿಲ್ ಕೆ.ಕೌಲ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:24 IST
Last Updated 18 ನವೆಂಬರ್ 2017, 19:24 IST
ಲೇಖಕ ಬಿಲ್ ಕೆ.ಕೌಲ್‌ (ಎಡದಿಂದ ಎರಡನೆಯವರು) ಅವರ ಮೂರು ಕೃತಿಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುಳಾ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ಆರ್.ಕೆ.ಮಟ್ಟೂ, ನಿವೃತ್ತ ಐಎಎಸ್‌ ಅಧಿಕಾರಿ ವೀಣಾ ಎಸ್.ರಾವ್ ಇದ್ದರು -
ಲೇಖಕ ಬಿಲ್ ಕೆ.ಕೌಲ್‌ (ಎಡದಿಂದ ಎರಡನೆಯವರು) ಅವರ ಮೂರು ಕೃತಿಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುಳಾ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ಆರ್.ಕೆ.ಮಟ್ಟೂ, ನಿವೃತ್ತ ಐಎಎಸ್‌ ಅಧಿಕಾರಿ ವೀಣಾ ಎಸ್.ರಾವ್ ಇದ್ದರು -   

ಬೆಂಗಳೂರು: ‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಷ್ಟೇ ಅಲ್ಲ, ಭೌಗೋಳಿಕವಾಗಿಯೂ ಈ ತಾಯ್ನೆಲದ ಶಿರವೆನಿಸಿದೆ. ಕಣಿವೆ ರಾಜ್ಯದ ಜನತೆಯಲ್ಲಿ ಪ್ರತ್ಯೇಕತೆ ಭಾವನೆ ಬೆಳೆಯಗೊಡದೆ, ಸಂವಿಧಾನದ ಚೌಕಟ್ಟಿನೊಳಗೆ ಅವರನ್ನು ಸಂಪೂರ್ಣ ಭಾರತೀಯರನ್ನಾಗಿರುವ ತುರ್ತು ಅಗತ್ಯವಿದೆ’ ಎಂದು ಲೇಖಕ ಬಿಲ್‌ ಕೆ.ಕೌಲ್‌ ಅಭಿಪ್ರಾಯಪಟ್ಟರು.

ಸಪ್ನಾ ಬುಕ್‌ ಹೌಸ್‌ ನಗರದಲ್ಲಿ ಶನಿವಾರ ಆಯೋಜಿಸಿದ್ದ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಕಾಶ್ಮೀರದ ಸಮಸ್ಯೆ ಅತ್ಯಂತ ಗಂಭೀರವಾದುದು. ಕೇಂದ್ರ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರ್ಕಾರಗಳು ಸ್ಥಳೀಯ ಜನರ ಸಮಸ್ಯೆಗಳಿಗೆ, ಆಶೋತ್ತರಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ಅದರಲ್ಲೂ ಯುವಜನರಲ್ಲಿ ಭಾರತೀಯತೆಯನ್ನು ಬಲವಾಗಿ ಬೇರೂರುವಂತೆ ಮಾಡಬೇಕು. ಈ ದೇಶ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ. ಬಹುಸಂಸ್ಕೃತಿ ಗೌರವಿಸುತ್ತದೆ, ಅತ್ಯಂತ ಪ್ರಗತಿಪರವಾಗಿದೆ. ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಇದೆಲ್ಲವನ್ನೂ ಕಾಶ್ಮೀರಿ ಜನರಿಗೆ ಮನದಟ್ಟು ಮಾಡಿಸಬೇಕು’ ಎಂದರು.

ADVERTISEMENT

‘ಕಾಶ್ಮೀರಿ ಪಂಡಿತರು ಕೂಡ ಈ ನೆಲದ ಮಕ್ಕಳು. ನಮ್ಮ ಸಂಸ್ಕೃತಿ, ಜೀವನ ಶೈಲಿ ಭಿನ್ನವಾಗಿಲ್ಲ. ಆದರೆ, 1989ರಲ್ಲಿ ನಡೆದ ಬೆಳವಣಿಗೆಗಳು ಮತ್ತು ಪರಕೀಯರಂತೆ ನಡೆಸಿಕೊಂಡ ಪರಿಣಾಮ ಅಸ್ತಿತ್ವ ಉಳಿಸಿಕೊಳ್ಳಲು ಪಂಡಿತ ಸಮುದಾಯ ಕಣಿವೆ ತೊರೆಯಿತು. ಸುರಕ್ಷತೆ ದೊರೆತ ಮೇಲೆ ಸಾಕಷ್ಟು ಪಂಡಿತರು ಕಣಿವೆಗೆ ವಾಪಸಾದರು. ಕೃತಿಗಳಲ್ಲಿ ನನ್ನೊಬ್ಬನ ಕುಟುಂಬದ ಕಥೆ ಅಷ್ಟೇ ಅಲ್ಲ, ಒಂದು ಲಕ್ಷಕ್ಕೂ ಹೆಚ್ಚಿನ ಪಂಡಿತ ಕುಟುಂಬದ ಕಥೆ–ವ್ಯಥೆಗಳು ಅಡಗಿವೆ’ ಎಂದರು.

ಹಿರಿಯ ಪತ್ರಕರ್ತ ಹಾಗೂ ಕಾಶ್ಮೀರ ಹಿಂದು ಸಂಸ್ಕೃತಿ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಆರ್‌.ಕೆ.ಮಟ್ಟೂ, ‘ಏನೇ ಟೀಕೆಗಳಿರಬಹುದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಕಣಿವೆ ರಾಜ್ಯದಲ್ಲಿ ಐದಾರು ತಿಂಗಳುಗಳಿಂದ ಸಾಕಷ್ಟು ಬದಲಾವಣೆಗಳು ಮತ್ತು ಸುಧಾರಣೆಗಳು ಕಾಣಿಸುತ್ತಿವೆ. ಪಾಕಿಸ್ತಾನ ಪ್ರಚೋದಿತ ಗಲಭೆಗಳು, ಗಡಿ ನುಸುಳುವಿಕೆ ಕಡಿಮೆಯಾಗಿವೆ’ ಎಂದರು.

ಬಿಲ್‌ ಕೆ.ಕೌಲ್ ಅವರ ‘22 ಇಯರ್ಸ್‌–ಎ ಕಾಶ್ಮೀರ್ ಸ್ಟೋರಿ (ಒನ್‌ ಲ್ಯಾಕ್ ಪಂಡಿತ್‌ ಫ್ಯಾಮಿಲಿಸ್‌ ಮೆ ಹ್ಯಾವ್‌ ಒನ್‌ ಲ್ಯಾಕ್‌ ಸ್ಟೋರೀಸ್‌), ‘ಇಸ್ಯೂಸ್‌ ವೈಟ್‌–ಅಂಟಿಂಗ್‌ ಇಂಡಿಯಾ–ಆಸ್‌ ಆನ್‌ ಎನ್‌ಆರ್‌ಐ ಸೀಸ್‌ ಇಟ್‌’ ಹಾಗೂ ‘ಮೈ ಲೈಫ್‌ ಡಸ್‌ ನಾಟ್‌ ಹ್ಯಾವ್‌ ಟು ಬಿ ಅನ್‌ ಹ್ಯಾಪಿ’ ಕೃತಿಗಳು ಬಿಡುಗಡೆಯಾದವು.

**

ಹೊರ ದೇಶದಲ್ಲಿ ನೆಲೆಸಿದ್ದರೂ ಕಾಶ್ಮೀರಿ ಪಂಡಿತರ ಹೃದಯ ತಾಯ್ನೆಲಕ್ಕೆ ಮರಳಲು ತುಡಿಯುತ್ತದೆ.
–ಬಿಲ್‌ ಕೆ.ಕೌಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.