ADVERTISEMENT

ಕಿಮ್ಸ್‌: ಪಟ್ಟು ಬಿಡದೆ ಪ್ರತಿಭಟನೆ

ಕರ್ತವ್ಯಕ್ಕೆ ಹಾಜರಾಗುವಂತೆ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:33 IST
Last Updated 8 ಅಕ್ಟೋಬರ್ 2015, 19:33 IST

ಬೆಂಗಳೂರು: ಸೇವೆ ಕಾಯಂ ಮತ್ತು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) ಆವರಣದಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ನಡೆಸುತ್ತಿರುವ ಪ್ರತಿಭಟನೆ ಗುರುವಾರ 18ನೇ ದಿನಕ್ಕೆ ಕಾಲಿಟ್ಟಿದೆ.

ಈ ವೇಳೆ ಒಕ್ಕಲಿಗರ ಸಂಘದ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆ ವೇಳೆ, ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಮತ್ತು ಇತರ ಪದಾಧಿಕಾರಿಗಳಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ಸಂಘದ ವಿರುದ್ಧ  ಘೋಷಣೆಗಳನ್ನು ಕೂಗಿದರು.

ಆಸ್ಪತ್ರೆಯಲ್ಲಿ ನಾಲ್ಕೈದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ.

ಕೆಲಸಕ್ಕೆ ಸೇರಿಕೊಳ್ಳುವಾಗ ಮೂರು ವರ್ಷದ ನಂತರ ಕಾಯಂಗೊಳಿಸುವುದಾಗಿ ಭರವಸೆ ನೀಡಿದ್ದರು. ಈಗ ಇದಕ್ಕಿದ್ದಂತೆ ಕಾಯಂ ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕರ್ತವ್ಯಕ್ಕೆ ಹಾಜರಾಗಿ: ‘ಪ್ರತಿಭಟನೆ ನಡೆಸುತ್ತಿರುವವರನ್ನು 2011ರಲ್ಲಿ ಮಾಸಿಕ ವೇತನ ₹7,500ಕ್ಕೆ ಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು’ ಎಂದು ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಪ್ರಸ್ತುತ ಎಲ್ಲರಿಗೂ ಅಕ್ಟೋಬರ್ 1ರಿಂದ ಅನ್ವಯವಾಗುವಂತೆ 1ರಿಂದ 2 ವರ್ಷ ಸೇವೆ ಸಲ್ಲಿಸಿರುವವರಿಗೆ ಮಾಸಿಕ ₹ 12 ಸಾವಿರ, 2ರಿಂದ 3 ವರ್ಷದವರೆಗೆ ಸೇವೆ ಸಲ್ಲಿಸಿದವರಿಗೆ ₹ 14 ಸಾವಿರ ಹಾಗೂ 3 ವರ್ಷ ಮೇಲ್ಪಟ್ಟವರಿಗೆ ₹ 16 ಸಾವಿರ ವೇತನ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಆದರೂ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಆಡಳಿತ ಮಂಡಳಿ ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲರಿಗೂ ಮತ್ತೊಮ್ಮೆ ಅವಕಾಶ ನೀಡುತ್ತಿದ್ದು, ತಪ್ಪಿದರೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.