ADVERTISEMENT

ಕುಡಿದದ್ದು 4 ಬಾಟಲಿ ಮದ್ಯ!

ನೀರಿನ ಬಾಟಲಿಯಲ್ಲೂ ಮದ್ಯ ತುಂಬಿಸಿದ್ದ ಮರಿಯನ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 20:01 IST
Last Updated 29 ಜೂನ್ 2016, 20:01 IST

ಬೆಂಗಳೂರು:  ಎರಡು ಬಿಯರ್, ವೋಡ್ಕಾ ಹಾಗೂ ರೆಡ್‌ವೈನ್ ಕುಡಿದಿದ್ದ ಆಫ್ರಿಕಾ ಖಂಡದ ನಂಫ್ಲಿಮಾ ಮರಿಯನ್‌, ಕೊನೆಗೆ ನೀರಿನ ಬಾಟಲಿಯಲ್ಲೂ ಮದ್ಯ ತುಂಬಿಕೊಂಡು ನ್ಯಾಷನಲ್ ಮಾರ್ಕೆಟ್‌ಗೆ ಬಂದಿದ್ದಳು ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಗಾಂಧಿನಗರದ ನ್ಯಾಷನಲ್‌ ಮಾರ್ಕೆಟ್ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ ಆರೋಪದಡಿ ಬಂಧಿತಳಾಗಿರುವ ಮರಿಯನ್‌, ಉಪ್ಪಾರಪೇಟೆ ಠಾಣೆಯಲ್ಲಿ  ಬುಧವಾರ ಮೂರು ತಾಸು ಪೊಲೀಸರ ವಿಚಾರಣೆ ಎದುರಿಸಿದಳು.

‘ಕುಡಿದಿದ್ದೆ ನಿಜ...’ ‘ನಾನು ಮತ್ತು ಗೆಳೆಯ ಯೇಸುದಾಸ್ ಸೋಮವಾರ (ಜೂನ್ 27) ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೂ ಪಬ್‌ವೊಂದರಲ್ಲಿ ಮದ್ಯ ಕುಡಿದಿದ್ದೆವು.  ಆ ನಂತರ ನೀರಿನ ಬಾಟಲಿಯಲ್ಲೂ ಮದ್ಯ ತುಂಬಿಕೊಂಡು ಪಬ್‌ನಿಂದ ಹೊರ ಬಂದ ನಾವು, ಮೊಬೈಲ್ ರಿಪೇರಿ ಮಾಡಿಸಲು ಮಧ್ಯಾಹ್ನ 3 ಗಂಟೆಗೆ ನ್ಯಾಷನಲ್ ಮಾರ್ಕೆಟ್‌ಗೆ ಹೋಗಿದ್ದೆವು’ ಎಂದು ಆಕೆ ಹೇಳಿಕೆ ನೀಡಿದ್ದಾಗಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಮೊಬೈಲ್ ಪಡೆದ ಅಂಗಡಿ ಮಾಲೀಕ, ಒಂದು ತಾಸು ಬಿಟ್ಟು ಬರಲು ಹೇಳಿದ. ಆಗ ಯೇಸುದಾಸ್  ತನಗೆ ಬೇರೆ ಕೆಲಸ ಇರುವುದಾಗಿ ಹೇಳಿ ಹೊರಡಲು ಸಿದ್ಧನಾದ. ಈ ವೇಳೆ ಆತನನ್ನು ತಬ್ಬಿಕೊಂಡು ಮುತ್ತಿಕ್ಕಿದೆ. ಸ್ನೇಹಿತನನ್ನು ಕಳುಹಿಸಿಕೊಡುವಾಗ ಹೀಗೆ ಆತ್ಮೀಯತೆಯಿಂದ ಅಪ್ಪಿಕೊಳ್ಳುವುದು ಸಾಮಾನ್ಯ.

‘ಆದರೆ, ಮೊಬೈಲ್ ಅಂಗಡಿ ಮಾಲೀಕ ಸೇರಿ ಅಲ್ಲಿದ್ದ ಕೆಲವರು ನಮ್ಮನ್ನು ಕೆಟ್ಟದಾಗಿ ನೋಡಿದರು. ಅಶ್ಲೀಲ ರೀತಿ ಸಂಜ್ಞೆ ಮಾಡಿ ನಕ್ಕರು. ಇದರಿಂದ ಸಿಟ್ಟು ಬಂದು ಮೊಬೈಲನ್ನು ಅಂಗಡಿಯವನ ಮುಖದ ಮೇಲೆ ಎಸೆದೆ.

‘ಸ್ವಲ್ಪ ಸಮಯದಲ್ಲೇ ಅಕ್ಕ–ಪಕ್ಕದ ಅಂಗಡಿಯವರು ಜಮಾಯಿಸಿದರು. ಹೊರಗೆ ಹೋಗುವಂತೆ ಜಗಳ ಪ್ರಾರಂಭಿಸಿದರು. ಮದ್ಯದ ನಶೆಯಲ್ಲಿದ್ದ ನನಗೆ, ಸಿಟ್ಟನ್ನು ನಿಯಂತ್ರಿಸಿಕೊಳ್ಳಲು ಆಗಲಿಲ್ಲ. ಕೋಪದ ಭರದಲ್ಲಿ ಗಾಜನ್ನು ಒಡೆದು ಹೊರಬಂದೆ.

‘ಆ ನಂತರ ಸಂಪೂರ್ಣ ನಿಯಂತ್ರಣ ಕಳೆದುಕೊಂಡೆ. ಕೆ.ಸಿ.ಜನರಲ್ ಆಸ್ಪತ್ರೆ ಬಳಿ ನಾನು ಮಾಡಿದ ರಂಪಾಟದ ಬಗ್ಗೆ ಅರಿವಿರಲಿಲ್ಲ. ಮರುದಿನ ಸುದ್ದಿ ವಾಹಿನಿಗಳಲ್ಲಿ ಆ ದೃಶ್ಯಗಳನ್ನು ನೋಡಿ ಮುಜುಗರವಾಯಿತು’ ಎಂದು ಯುವತಿ ಹೇಳಿಕೆ ಕೊಟ್ಟಿದ್ದಾಳೆ.

‘ಪ್ರೇಮಿಗಳಲ್ಲ’:   ‘ಯೇಸುದಾಸ್ ಹಾಗೂ ಮರಿಯನ್ ಪ್ರೇಮಿಗಳಲ್ಲ. ಅವರಿಬ್ಬರೂ ಒಂದೇ ಮನೆಯಲ್ಲೂ ವಾಸವಾಗಿಲ್ಲ. ಆಕೆ ಮದ್ಯಪ್ರಿಯಳು. ಕುಡಿದರೆ ನಿಯಂತ್ರಿಸುವುದು ಅಸಾಧ್ಯ. ಮನೆ ಹತ್ತಿರವೂ ಹೀಗೆ ರಂಪಾಟ ಮಾಡುತ್ತಾಳೆ. ಆದರೆ, ಉಳಿದ ಸಮಯದಲ್ಲಿ  ಚೆನ್ನಾಗಿಯೇ ಮಾತನಾಡಿ ಕೊಂಡಿರುತ್ತಾಳೆ’ ಎಂದು ಮರಿಯನ್‌ಳ ಗೆಳತಿ ಲಕ್ಷ್ಮಿ ತಿಳಿಸಿದರು.

ಎಲ್ಲಿಯವಳು ತಿಳಿಯುತ್ತಿಲ್ಲ
‘ತಾನು ಐವರಿ ಕೋಸ್ಟಾದವಳು ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಉಗಾಂಡದವಳು ಎನ್ನುತ್ತಿದ್ದಾಳೆ. ಪಾಸ್‌ಪೋರ್ಟ್ ಹಾಗೂ ವೀಸಾ  ಬಗ್ಗೆ ಕೇಳಿದರೆ, ಅವಧಿ ಮುಗಿದು ಹೋಗಿದ್ದರಿಂದ ನಾನೇ ಬಿಸಾಡಿದ್ದೆ ಎನ್ನುತ್ತಿದ್ದಾಳೆ. ಸಿಬ್ಬಂದಿಯ ಒಂದು ತಂಡ ಆಕೆಯ ಮನೆ ಪರಿಶೀಲಿಸಲು ತೆರಳಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ದೆಹಲಿಯಲ್ಲಿ ದೂರು
‘ತನ್ನ ಪಾಸ್‌ಪೋರ್ಟ್ ನಾಪತ್ತೆಯಾಗಿರುವ ಬಗ್ಗೆ ಮರಿಯನ್ ಕಳೆದ ಜೂನ್ 25ರಂದು ದೆಹಲಿಯ ತಿಲಕ್‌ನಗರ ಠಾಣೆಗೆ ದೂರು ಕೊಟ್ಟಿದ್ದಳು. ಹೀಗಾಗಿ ಎಫ್‌ಆರ್‌ಆರ್‌ಒ  ಕಚೇರಿ ಮೂಲಕ ಆಫ್ರಿಕಾ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಆಕೆಯ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಮುಂದಾಗಿದ್ದೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅಜಯ್‌ ಹಿಲೋರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.