ADVERTISEMENT

ಕುದುರೆಮುಖ: ಪ್ರವಾಸೋದ್ಯಮ ಯತ್ನಕ್ಕೆ ವಿರೋಧ

‘ವೈಲ್ಡ್‌ ಲೈಫ್‌ ಫಸ್ಟ್‌’ ಸಂಘಟನೆ­ಯಿಂದ ಸರ್ಕಾರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:44 IST
Last Updated 18 ಏಪ್ರಿಲ್ 2014, 19:44 IST

ಬೆಂಗಳೂರು: ಗಣಿಗಾರಿಕೆಯ ಪರ­ವಾನಗಿ ಹಕ್ಕನ್ನೇ  ಕಳೆದುಕೊಂಡಿರುವ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯು ಕುದುರೆಮುಖ ರಾಷ್ಟ್ರೀಯ ಉದ್ಯಾನ­ದೊಳಗೆ ಹಕ್ಕು ಸ್ಥಾಪನೆ ಮಾಡಲು ಮುಂದಾಗಿರುವುದಕ್ಕೆ ‘ವೈಲ್ಡ್‌ ­ಲೈಫ್‌ ಫಸ್ಟ್‌’ ಸಂಘಟನೆಯು ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಸಂಬಂಧ ಟ್ರಸ್ಟಿಗಳಾದ ಕೆ.ಎಂ.­ಚಿನ್ನಪ್ಪ ಹಾಗೂ ಪ್ರವೀಣ ಭಾರ್ಗವ್‌ ಅವರು ರಾಜ್ಯ ಸರ್ಕಾರದ  ಮುಖ್ಯ ಕಾರ್ಯ­ದರ್ಶಿ ಕೌಶಿಕ್‌ ಮುಖರ್ಜಿ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮದನ್‌ ಗೋಪಾಲ್‌, ಕಂದಾಯ ಇಲಾಖೆಯ ಪ್ರಧಾನ ಕಾರ್ಯ­­ದರ್ಶಿ ಬಸವರಾಜು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್‌ ಲೂತ್ರ, ಚಿಕ್ಕಮಗಳೂರಿನ ಜಿಲ್ಲಾ­ಧಿಕಾರಿ ಬಿ.ಎಸ್‌.ಶೇಖರಪ್ಪ ಅವ­ರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

‘ಕಂಪೆನಿಯು ಪ್ರವಾಸೋದ್ಯಮ ಆರಂ­­ಭಕ್ಕೆ ಸಂಬಂಧ ಆಸಕ್ತಿ ಹೊಂದಿ­ರುವ ಪತ್ರವನ್ನು (ಇಒಐ) ತನ್ನ ವೆಬ್‌­ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಹಕ್ಕು ಸಾಧಿಸಲು ಹೊರಟಿದೆ. ಸರ್ಕಾರದ ಭೂಮಿಯನ್ನು ಉಪ ಗುತ್ತಿಗೆ ನೀಡುವು­ದಕ್ಕೆ ಕೋರ್ಟ್‌ ಅನುಮತಿ ನೀಡಿಲ್ಲ.

ಸರ್ಕಾರದ ಅಧಿಕೃತ ಸ್ಪಷ್ಟೀಕರಣವಿಲ್ಲದೇ,  ಪ್ರವಾಸೋದ್ಯಮ­ದಲ್ಲಿ ಭಾಗವಹಿಸುವ ಉದ್ಯಮಿಗಳು ಕಾನೂನಾತ್ಮಕ ಸಮಸ್ಯೆ­ಗಳನ್ನು ಎದುರಿಸ­ಬಹುದು. ಅಲ್ಲದೇ ಇಂತಹ ಚಟುವಟಿಕೆ­ಗಳಿಂದ ಉದ್ಯಾನದ ಭದ್ರತೆಗೆ ಧಕ್ಕೆಯಾ­ಗ­ಬಹುದು’ ಎಂದು  ದೂರಿದ್ದಾರೆ.

‘ಗಣಿಗಾರಿಕೆಯಿಂದಾಗಿ ಮೂರು ದಶಕ­ಗಳಲ್ಲಿ ಈ ಭಾಗದಲ್ಲಿ ಉಂಟಾದ ಹಾನಿಯ ಬಗ್ಗೆ ಸಂಘಟನೆಯು ದಾಖಲೆ ಒದಗಿಸಿದ್ದು, ಇದನ್ನು ಪರಾಮರ್ಶಿಸಿ ಸುಪ್ರೀಂ ಕೋರ್ಟ್‌ ಗಣಿಗಾರಿಕೆ ನಡೆಸ­ದಂತೆ ಆದೇಶ ನೀಡಿತ್ತು. ಸರ್ಕಾರ ಈ ಕೂಡಲೇ ಆಸಕ್ತಿ ಹೊಂದಿರುವ ಪತ್ರದ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ತಿಳಿಸಿದ್ದಾರೆ.

‘ಕಂಪೆನಿಯು ಅವಧಿ ಮುಗಿದ ನಂತರವೂ ಆರು ವರ್ಷಗಳ ಕಾಲ ಗಣಿಗಾರಿಕೆ ಮಾಡಿದೆ. ಗುತ್ತಿಗೆ ಅವಧಿ 1999ರ ಜುಲೈನಲ್ಲಿ ಮುಕ್ತಾಯ­ವಾಗಿತ್ತು. ನ್ಯಾಯಾಲಯ ನೀಡಿದ ಆದೇಶದ ಅನುಸಾರ ಕಂಪೆನಿಯು ಗಣಿಗಾರಿಕೆ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು 2005 ಡಿಸೆಂಬರ್‌ 31ರಿಂದಲೇ ಸ್ಥಗಿತಗೊಳಿಸಬೇಕಿತ್ತು. ಆದರೆ, ಕಂಪೆನಿಯು ಅದಿರು ಬೇರ್ಪಡಿಸುವ ಘಟಕ ಹಾಗೂ ಭಾರಿ ಯಂತ್ರಗಳನ್ನು ಹಾಗೇ ಉಳಿಸಿಕೊಂಡು ಕಾನೂನು ಉಲ್ಲಂಘಿಸಿದೆ’ ಎಂದು ಆರೋಪಿಸಿದ್ದಾರೆ.

‘ಕುದುರೆಮುಖದಲ್ಲಿ 30 ವರ್ಷಗಳ ಕಾಲ ಗಣಿಗಾರಿಕೆ ಮಾಡಿರುವ ಕಂಪೆನಿಯ ಪರವಾನಗಿಯನ್ನು ಸುಪ್ರೀಂ­ಕೋರ್ಟ್‌ ರದ್ದುಗೊಳಿಸಿದ್ದು, ಪರವಾ­ನಗಿ ನವೀಕರಣಗೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಕಂಪೆನಿಯ ಎಲ್ಲ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ ವರದಿ ತಯಾರಿ­ಸುವಂತೆ ಕೋರ್ಟ್‌ ಕಳೆದ ಸೆಪ್ಟೆಂಬರ್‌­ನಲ್ಲಿ ಸಿಇಸಿಗೆ ಸೂಚಿಸಿತ್ತು. ಹೀಗಿದ್ದೂ ಕಂಪೆನಿ ಹಕ್ಕು ಸಾಧಿಸಲು ಹೊರಟಿರುವುದು ಅಕ್ಷಮ್ಯ ಅಪರಾಧ ಕಂಪೆನಿಯನ್ನು ಅಲ್ಲಿಂದ ಎತ್ತಂಗಡಿ ಮಾಡಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.