ADVERTISEMENT

‘ಕೆಂಪುದೀಪ’ದ ಪ್ರಶ್ನೆಗೆ ಸಿದ್ದರಾಮಯ್ಯ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 20:09 IST
Last Updated 25 ಏಪ್ರಿಲ್ 2017, 20:09 IST

ಬೆಂಗಳೂರು: ತಮ್ಮ ಕಾರಿನ ಮೇಲಿನ ಕೆಂಪು ದೀಪ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಮತ್ತೊಮ್ಮೆ ಸಿಡಿಮಿಡಿಗೊಂಡರು.

ವಿಧಾನಸೌಧಕ್ಕೆ ಬೆಳಿಗ್ಗೆ ಅವರು ಕಾರಿನಲ್ಲಿ  ಬಂದಿಳಿಯುತ್ತಿದ್ದಂತೆ, ಕೆಂಪು ದೀಪ ಇಲ್ಲದಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು.

‘ನಿಮಗೆ ಕೆಂಪು ದೀಪ ಬಿಟ್ಟು ಬೇರೆ ಏನೂ ಪ್ರಶ್ನೆ ಇಲ್ಲವೆ? ಮೇ ತಿಂಗಳ ಕೊನೆಯವರೆಗೂ ಕೆಂಪು ದೀಪ ತೆಗೆಯಲು ಸಮಯ ಇದೆ. ಪದೆಪದೇ ಅದನ್ನೇ ಕೇಳುತ್ತೀರಲ್ಲಾ’ ಎಂದು ಅವರು ಗುಡುಗಿದರು.

ADVERTISEMENT

ತಲೆ ಮೇಲೆ ಇಲ್ಲ– ಖಾದರ್‌: ‘ಕೆಂಪು ದೀಪ ಕಾರಿನ ಮೇಲೆ ಇದೆ ವಿನಃ ನನ್ನ ತಲೆ ಮೇಲೆ ಇಲ್ಲ. ನಾನ್ಯಾಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಪ್ರತಿಕ್ರಿಯಿಸಿದರು.

ಕೆಂಪು ದೀಪ ತೆರವುಗೊಳಿಸದ ಕುರಿತು ಪ್ರಶ್ನಿಸಿದಾಗ, ‘ಅದು ನನ್ನ ಕಾರಲ್ಲ.  ಸರ್ಕಾರ ನನಗೆ ನೀಡಿದ ಕಾರು. ಕೆಂಪು ದೀಪ ಅಳವಡಿಸಿರುವುದು ಅಧಿಕಾರಿಗಳು. ನನ್ನ ತಲೆಯ ಮೇಲೆ ಇದ್ದಿದ್ದರೆ ತೆಗೆಸುವ ಕುರಿತು ಯೋಚಿಸುತ್ತಿದ್ದೆ. ಅದು ನನಗೆ ಸಂಬಂಧಿಸಿದ ವಿಷಯವಲ್ಲ’ ಎಂದು ಹೇಳಿದರು.

ಕೇಂದ್ರ ಸರ್ಕಾರ ಆದೇಶ ಹೊರಡಿಸುವ ಮುನ್ನವೇ ಕೃಷಿ ಸಚಿವ ಕೃಷ್ಣ ಬೈರೇಗೌಡ ಕೆಂಪು ದೀಪ ಇರುವ ಕಾರು ಬಳಸುತ್ತಿರಲಿಲ್ಲ. ಆದೇಶ ಹೊರಡಿಸಿದ ಮೇಲೆ ಗೃಹ ಸಚಿವ ಪರಮೇಶ್ವರ್,  ದೀಪ ತೆಗೆಸಿದ್ದರು.

ತಮ್ಮ ಗಮನಕ್ಕೆ ತರದೇ ಕಾರಿನ ಮೇಲಿನ ಕೆಂಪು ದೀಪ ತೆಗೆಸಿದ್ದಕ್ಕೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಗದರಿದ್ದರು. ಉಳಿದ ಸಚಿವರು ಕೆಂಪು ದೀಪ ಇರುವ ಕಾರನ್ನು ಇನ್ನೂ  ಬಳಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.