ADVERTISEMENT

ಕೆರೆಯಲ್ಲಿ ಸಕ್ರಮ;ದಂಡೆಯಲ್ಲಿ ಅಕ್ರಮ!

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಸೋಜಿಗ ಮೂಡಿಸಿದ ಆಯುಕ್ತರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:32 IST
Last Updated 29 ಆಗಸ್ಟ್ 2016, 19:32 IST
ಕೆರೆಯಲ್ಲಿ ಸಕ್ರಮ;ದಂಡೆಯಲ್ಲಿ ಅಕ್ರಮ!
ಕೆರೆಯಲ್ಲಿ ಸಕ್ರಮ;ದಂಡೆಯಲ್ಲಿ ಅಕ್ರಮ!   

ಬೆಂಗಳೂರು: ನಗರದ 41 ಕೆರೆಗಳಲ್ಲಿ ಬಿಡಿಎಯಿಂದ ನಿರ್ಮಾಣ ಮಾಡಲಾದ ನಿವೇಶನಗಳಲ್ಲಿ ಮನೆ ಕಟ್ಟಿದರೆ ಅದು ಸಕ್ರಮ. ಆದರೆ, ಅಸ್ತಿತ್ವದಲ್ಲೇ ಇಲ್ಲದ ಆ ಕೆರೆಗಳ ಅಂಚಿನ ಮೀಸಲು ಪ್ರದೇಶದಲ್ಲಿ ಮನೆ ಕಟ್ಟಿದರೆ ಅದು ಅಕ್ರಮ!

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಸೋಮವಾರ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಈ ರೀತಿ ಹೇಳಿಕೆ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
‘ಕೆರೆಗಳಲ್ಲಿ ಬಡಾವಣೆ ನಿರ್ಮಾಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ನಿರ್ಧಾರ ಮಾಡಲಾಗಿದೆ. ಹೀಗಾಗಿ ಅಲ್ಲಿ ನಿರ್ಮಾಣವಾದ ಮನೆ
ಗಳೆಲ್ಲ ಸಕ್ರಮದ ವ್ಯಾಪ್ತಿಗೆ ಬರುತ್ತವೆ.

ಆದರೆ, ಅಸ್ತಿತ್ವದಲ್ಲಿಲ್ಲದ ಆ 41 ಕೆರೆಗಳನ್ನು ಈಗಲೂ ಕಂದಾಯ ಇಲಾಖೆ ದಾಖಲೆಗಳಲ್ಲಿ ಕೆರೆಗಳೆಂದೇ ಗುರುತು ಮಾಡಲಾಗಿದೆ’ ಎಂದು ಹೇಳಿದರು.
‘ಹಸಿರು ನ್ಯಾಯಮಂಡಳಿಯ ಈಚಿನ ನಿರ್ದೇಶನದಂತೆ ಕೆರೆಗಳ ಅಂಚಿ ನಿಂದ 75 ಮೀಟರ್, ಬೃಹತ್ ಕಾಲುವೆ ಗಳ ಅಂಚಿನಿಂದ 50 ಮೀಟರ್, ಪ್ರಾಥಮಿಕ ಕಾಲುವೆಗಳ ಅಂಚಿನಿಂದ 35 ಮೀಟರ್ ಮೀಸಲು ಪ್ರದೇಶ ಬಿಡ ಬೇಕಿದೆ.

ಅಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಡುವಂತಿಲ್ಲ. ಹೀಗಾಗಿ ಕೆರೆಗಳ ಪಾತ್ರದಲ್ಲಿ ಮನೆಗಳು ನಿರ್ಮಾಣವಾಗಿದ್ದರೂ ಅವುಗಳ  ಅಂಚಿನ ಖಾಲಿ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲು ನಕ್ಷೆ ಮಂಜೂರು ಮಾಡಲು ಅವಕಾಶವಿಲ್ಲ’ ಎಂದು ತಿಳಿಸಿದರು. ಈ ಮಾಹಿತಿ ಕೇಳಿ ಸದಸ್ಯರೆಲ್ಲ ಸೋಜಿಗಪಟ್ಟರು.

ಈಗ ಪಾಲಿಕೆ ಮೀಸಲು ಪ್ರದೇಶಕ್ಕೆ ಕೈಹಾಕುತ್ತಿಲ್ಲ. ಈಗಿನ ಸಂದರ್ಭ ರಾಜಕಾಲುವೆ ಒತ್ತುವರಿ ತೆರವಿಗೆ ಮಾತ್ರ ಗಮನ ನೀಡಿದ್ದೇವೆ. ರಾಜಕಾಲುವೆ ಇರುವ ಸ್ಥಳ ತಿಳಿಸುವ ಹೊಸ ವ್ಯವಸ್ಥೆ ರೂಪಿಸುತ್ತಿದ್ದೇವೆ ಎಂದು ಹೇಳಿದರು.

ಮಾರ್ಗದ ಗೊಂದಲ: ‘ರಾಜಕಾಲುವೆ ಮಾರ್ಗ ಗುರುತಿಸುವಲ್ಲಿ ಗೊಂದಲಗಳು ಉಂಟಾಗಿರುವುದು ನಿಜ. ಈ ಗೊಂದಲಗಳ ನಿವಾರಣೆಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಭೆ ಕರೆಯಬೇಕಿದೆ’ ಎಂದು ಆಯುಕ್ತರು ಹೇಳಿದರು.

‘ಬಿಡಿಎ 2007ರಲ್ಲಿ ಸಿದ್ಧಪಡಿಸಿದ ಮಹಾಯೋಜನಾ ನಕ್ಷೆ ಆಧಾರದ ಮೇಲೆ ರಾಜಕಾಲುವೆ ಮಾರ್ಗ ಗುರುತಿಸಬೇಕು ಎಂಬುದು ಬಹುತೇಕ ಬಿಲ್ಡರ್‌ಗಳ ವಾದ. ಆದರೆ, ಈ ವಾದ ಒಪ್ಪಲು ಸಾಧ್ಯವಿಲ್ಲ. ಗ್ರಾಮನಕ್ಷೆಯೇ ರಾಜಕಾಲುವೆ ಗುರುತಿಸಲು ಮುಖ್ಯ ಆಧಾರವಾಗಿದೆ’ ಎಂದು  ಅವರು ಅಭಿಪ್ರಾಯಪಟ್ಟರು.

‘ರಾಜಕಾಲುವೆ ಸಂಬಂಧ ಎದ್ದಿರುವ ಎಲ್ಲ ಗೊಂದಲಗಳನ್ನು ಆದಷ್ಟು ಬೇಗ ನಿವಾರಣೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂಬ ಭರವಸೆ  ಈಗಾಗಲೇ ಮುಖ್ಯಮಂತ್ರಿ ಅವರಿಂದ ಸಿಕ್ಕಿದೆ. ನಮ್ಮ ಅಧಿಕಾರಿಗಳು ಮನೆ ಕಳೆದುಕೊಂಡವರ ಪಟ್ಟಿಯನ್ನು ಸಿದ್ಧ ಪಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಹಾಗೂ ಅಧೀನ ಕೋರ್ಟ್‌ಗಳಿಂದ ಆದೇಶವಿತ್ತು. ಹೀಗಾಗಿ ಮೂರು ವರ್ಷದ ಹಿಂದೆಯೇ ಕಂದಾಯ ಇಲಾಖೆಯ ಅಧಿಕಾರಿಗಳು ರಾಜಕಾಲುವೆಗಳ ಸರ್ವೇ ಮಾಡಿ, ಒತ್ತುವರಿಯನ್ನು ಗುರುತು ಮಾಡಿದ್ದರು. ಅದನ್ನೇ ಈಗ ತೆರವು ಮಾಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ದೊಡ್ಡ ಬೊಮ್ಮಸಂದ್ರದಲ್ಲಿ ರಾಜಕಾಲುವೆ ಮುಚ್ಚಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದ ಕುರಿತು ಲೋಕಾಯುಕ್ತ ಕಚೇರಿಯಿಂದ ವರದಿ ನೀಡಲಾಗಿತ್ತು. ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

*
ಕುಸಿದ ಕೆರೆ–ಕಾಲುವೆ ಪ್ರದೇಶ
ನಗರದ ತ್ವರಿತ ಬೆಳವಣಿಗೆಯಿಂದ ಕೆರೆಗಳು ಹಾಗೂ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಒಟ್ಟು 2,342 ಹೆಕ್ಟೇರ್‌ನಷ್ಟು ಇದ್ದ ಕೆರೆ ಪ್ರದೇಶ ಈಗ 918 ಹೆಕ್ಟೇರ್‌ಗೆ ಇಳಿದಿದೆ. ಪ್ರವಾಹದ ಪರಿಸ್ಥಿತಿ ನಿರ್ಮಾಣಕ್ಕೆ ಕೆರೆ ಪ್ರದೇಶದ ಕುಸಿತವೇ ಪ್ರಮುಖ ಕಾರಣ ಎಂದು ಆಯುಕ್ತರು ತಿಳಿಸಿದರು.

‘ನಗರದಲ್ಲಿ ನಾಲ್ಕು ಕಣಿವೆ ಪ್ರದೇಶಗಳಿವೆ. ಹೆಬ್ಬಾಳ, ಚಲ್ಲಘಟ್ಟ, ಕೋರಮಂಗಲ ಹಾಗೂ ವೃಷಭಾವತಿ – ಆ ಕಣಿವೆ ಪ್ರದೇಶಗಳಾಗಿವೆ. ಇವುಗಳಲ್ಲಿ ಹೆಬ್ಬಾಳ, ಚಲ್ಲಘಟ್ಟ, ಕೋರಮಂಗಲ ಕಣಿವೆಗಳ ನೀರು ಪೂರ್ವಕ್ಕೆ ಹರಿದರೆ, ವೃಷಭಾವತಿ ಕಣಿವೆ ನೀರು ಪಶ್ಚಿಮದತ್ತ ಹರಿಯುತ್ತದೆ. ಆದರೆ, ಈಗೀಗ ಮಳೆ ನೀರಿನ ಜಾಡು ಸಂಪೂರ್ಣವಾಗಿ ತಪ್ಪಿಹೋಗಿದೆ’ ಎಂದು ವಿವರಿಸಿದರು.

‘ನಗರದಲ್ಲಿ 50 ವರ್ಷಗಳ ಹಿಂದೆ ಎಷ್ಟು ಪ್ರಮಾಣದಲ್ಲಿ ಮಳೆ ಬೀಳುತ್ತಿತ್ತೋ ಈಗಲೂ ಅಷ್ಟೇ ಪ್ರಮಾಣದಲ್ಲಿ (ಸರಾಸರಿ 900 ಮಿ.ಮೀ) ಮಳೆಯಾಗುತ್ತಿದೆ. ಆದರೆ, ಹಿಂದೆ ಇದ್ದಂತೆ ಈಗ ಕಾಲುವೆಗಳಿಲ್ಲ. 220 ಕಿ.ಮೀ.ಯಷ್ಟು ರಾಜಕಾಲುವೆ

ಗಳಲ್ಲೇ ಒಳಚರಂಡಿ ಕೊಳವೆ ಅಳವಡಿಸಲಾಗಿದೆ. ಹೀಗಾಗಿ ಕಾಲುವೆಗಳಲ್ಲಿ ನೀರಿನ ಹರಿವು ಸುಲಲಿತವಾಗಿಲ್ಲ. ಕಟ್ಟಡದ ಅವಶೇಷ ಸಹ ಅದರಲ್ಲಿ ತುಂಬಿಕೊಂಡಿದೆ’ ಎಂದು ವಾಸ್ತವ ಸನ್ನಿವೇಶಕ್ಕೆ ಕನ್ನಡಿ ಹಿಡಿದರು.

‘ಜಲಮಂಡಳಿ ಪ್ರಕಾರ ನಗರಕ್ಕೆ ಪ್ರತಿದಿನ ಕಾವೇರಿಯಿಂದ 140 ಕೋಟಿ ಲೀಟರ್ (ಎಂಎಲ್‌ಡಿ) ಹಾಗೂ ಕೊಳವೆ ಬಾವಿಗಳಿಂದ 40 ಕೋಟಿ ಲೀಟರ್ ನೀರು ಪೂರೈಕೆ ಆಗುತ್ತಿದೆ. ಇದರಲ್ಲಿ ಶೇ 80ರಷ್ಟು ಅಂದರೆ 144 ಕೋಟಿ ಲೀಟರ್‌ನಷ್ಟು ನೀರು ಪ್ರತಿದಿನ ಚರಂಡಿಯಲ್ಲಿ ಹರಿದು ಹೋಗುತ್ತಿದೆ. ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಕಾಲುವೆಗಳು ಸದಾ ತುಂಬಿರುವುದು ಕಾರಣವಾಗಿದೆ’ ಎಂದು ವಿಶ್ಲೇಷಿಸಿದರು.

*
ಸಾಧನೆ: ಹತ್ತಕ್ಕೆ ಸೊನ್ನೆ ಅಂಕ!
ಮೇಯರ್‌ ಬಿ.ಎನ್‌. ಮಂಜುನಾಥ್‌  ರೆಡ್ಡಿ  ತಮ್ಮ ಅಧಿಕಾರಾವಧಿಯ ಕೊನೆಯ ಕೌನ್ಸಿಲ್‌ ಸಭೆಯನ್ನು ಸೋಮವಾರ ನಡೆಸಿದರು.

ADVERTISEMENT

ಮೇಯರ್‌ ಸಾಧನೆ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹತ್ತಕ್ಕೆ ಸೊನ್ನೆ ಅಂಕ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ವಿರೋಧ ಪಕ್ಷದ ನಾಯಕರಾಗಿ ನಿಮ್ಮ ಸಾಧನೆ ಕೂಡ ಸೊನ್ನೆಯೇ ಎಂದು ತಿರುಗೇಟು ನೀಡಿದರು.

ಅಡಮಾನ ಇಟ್ಟ ಕಟ್ಟಡಗಳನ್ನು ಬಿಡಿಸಿಕೊಂಡಿದ್ದು, ಆನ್‌ಲೈನ್‌ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೆ ತಂದಿದ್ದು, ಕೌನ್ಸೆಲಿಂಗ್‌ ಮೂಲಕ ಸಿಬ್ಬಂದಿ ವರ್ಗಾವಣೆ ಮಾಡಿದ್ದು ಮೇಯರ್‌ ಆಡಳಿತದ ಅವಧಿಯಲ್ಲಿನ ಸಾಧನೆಗಳು ಎಂದು ಕಾಂಗ್ರೆಸ್‌ ಸದಸ್ಯರು ಹೊಗಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.