ADVERTISEMENT

ಕೆರೆ ಪುನರುಜ್ಜೀವನ: ಸ್ಪರ್ಧೆಯಲ್ಲಿ 3 ಕಂಪೆನಿಗಳು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:55 IST
Last Updated 14 ಮಾರ್ಚ್ 2017, 19:55 IST

ಬೆಂಗಳೂರು: ಮಲಿನಗೊಂಡಿರುವ ಬೆಳ್ಳಂದೂರು ಕೆರೆಯನ್ನು ಪುನರುಜ್ಜೀವನಗೊಳಿಸಲು ಆಸಕ್ತಿ ತೋರಿಸಿರುವ ನಾಲ್ಕು ಸಂಸ್ಥೆಗಳ ಪೈಕಿ ಮೂರು ಸಂಸ್ಥೆಗಳಿಗೆ ವಿಸ್ತೃತ ಪ್ರಸ್ತಾವ ಸಲ್ಲಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅವಕಾಶ ನೀಡಿದೆ.

ಕೆರೆ ಪುನರುಜ್ಜೀವನದ ಮೊದಲ ಹಂತವಾಗಿ ಕಳೆ ನಿರ್ಮೂಲನೆ ಹಾಗೂ ಆಮ್ಲಜನಕ ಪೂರಣ ಮಾಡುವುದಕ್ಕೆ ಬಿಡಿಎ ಆಸಕ್ತ ಕಂಪೆನಿಗಳಿಂದ  ಪ್ರಸ್ತಾವ ಗಳನ್ನು ಆಹ್ವಾನಿಸಿತ್ತು.

ಹೈದರಾಬಾದ್‌ನ ಹಾರ್ವಿನ್ಸ್‌ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್‌, ಸೋಮ ಎಂಟರ್‌ಪ್ರೈಸಸ್‌ ಲಿಮಿಟೆಡ್, ಗುಜರಾತ್‌ನ ಯೂರೊ ಟೆಕ್‌ ಎನ್‌ವಿರಾನ್‌ಮೆಂಟಲ್‌ ಹಾಗೂ ಗುಜರಾತ್‌ ಇಕೊ ಮೈಕ್ರೊಬಿಯಲ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌   ಸಂಸ್ಥೆಗಳು  ಪ್ರಸ್ತಾವ ಸಲ್ಲಿಸಿದ್ದವು.

ADVERTISEMENT

ಈ ಸಂಸ್ಥೆಗಳು ಸೋಮವಾರ ನಡೆದ ಸಭೆಯಲ್ಲಿ ಕೆರೆ ಅಭಿವೃದ್ಧಿಯ ರೂಪರೇಷೆಗಳನ್ನು  ಪ್ರಸ್ತುತಪಡಿಸಿದವು. 

‘ಯೂರೊ ಟೆಕ್ ಸಂಸ್ಥೆಯು ಸಂಸ್ಥೆಯು  ಕಳೆ ನಿರ್ಮೂಲನೆಗೆ ಯಾವುದೇ ವ್ಯವಸ್ಥೆ ಹೊಂದಿಲ್ಲ. ಕೇವಲ ಆಮ್ಲಜನಕ ಪೂರಣವನ್ನು ಮಾತ್ರ ಮಾಡುವುದಾಗಿ ಹೇಳಿದೆ. ಹಾಗಾಗಿ  ಈ ಸಂಸ್ಥೆಯ ಪ್ರಸ್ತಾವ ತಿರಸ್ಕೃತಗೊಂಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ವಿವರವಾದ ಪ್ರಸ್ತಾವ ಸಲ್ಲಿಸಲು ಸಂಸ್ಥೆಗಳು ಕಾಲಾವಕಾಶ ಕೋರಿದ್ದು, ಇದಕ್ಕೆ ಒಪ್ಪಿದ್ದೇವೆ. ಅವರು ಸಲ್ಲಿಸುವ ಅಂತಿಮ ಪ್ರಸ್ತಾವಗಳನ್ನು  ನೋಡಿಕೊಂಡು ಅರ್ಹರಿಗೆ ಟೆಂಡರ್‌ ವಹಿಸುತ್ತೇವೆ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿಗದಿಯಾಗಿಲ್ಲ: ‘ಕಳೆ ನಿರ್ಮೂಲನೆ, ಆಮ್ಲಜನಕ ಪೂರಣಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬುದು ಇನ್ನೂ ನಿಗದಿಯಾಗಿಲ್ಲ. ಸಂಸ್ಥೆಗಳು ಯಾವ ವಿಧಾನ ಅನುಸರಿಸುತ್ತವೆ ಎಂಬುದನ್ನು ಆಧರಿಸಿ ಇದನ್ನು ನಿಗದಿ ಪಡಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಹಾರ್ವಿನ್ಸ್‌ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆಯು ಕಳೆಯಿಂದ ಸಾವಯವ ಗೊಬ್ಬರ ತಯಾರಿಸುವುದಾಗಿ ಹೇಳಿದೆ. ಆದರೆ, ಇದಕ್ಕೆ 35 ಎಕರೆ ಜಾಗ ಒದಗಿಸಬೇಕು ಎಂದು ಕೋರಿದೆ. ಗುಜರಾತ್‌ ಇಕೊ ಮೈಕ್ರೊಬಿಯಲ್‌ ಟೆಕ್ನಾಲಜೀಸ್‌ ಸಂಸ್ಥೆಯು ಕಳೆಯಿಂದ ಜೈವಿಕ ಅನಿಲ ಉತ್ಪಾದಿಸುವುದಾಗಿ ಹೇಳಿದೆ. ಈ ಕಂಪೆನಿ ಯು ಕಳೆಯಿಂದ ಜೈವಿಕ ಅನಿಲ ಉತ್ಪಾದಿಸುವ ಸೀಗೇಹಳ್ಳಿಯ ಸೆರಿ ಗ್ಯಾಸ್‌ ಸಂಸ್ಥೆಯ ಜೊತೆ ಸಹಭಾಗಿತ್ವ ಹೊಂದಿದೆ.  ಸೋಮ ಎಂಟರ್‌ಪ್ರೈಸಸ್‌ ಸಂಸ್ಥೆ ಕಳೆ ನಿರ್ಮೂಲನೆ ವಿಧಾನದ ಬಗ್ಗೆ ಪ್ರಸ್ತಾವ ಸಲ್ಲಿಸಲು ಕಾಲಾವಕಾಶ ಕೋರಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.