ADVERTISEMENT

ಕೇಂದ್ರದ ಅನುದಾನ ಕಡಿತ: ಯೋಜನೆ ಅನುಷ್ಠಾನ ಆಮೆಗತಿ

ಬೆಂಗಳೂರು ಮಹಾನಗರ ಸಾರಿಗೆ ಬಸ್‌ಗಳಿಗೆ ಸಿಎನ್‌ಜಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 19:49 IST
Last Updated 5 ಅಕ್ಟೋಬರ್ 2015, 19:49 IST
ಕೇಂದ್ರದ ಅನುದಾನ ಕಡಿತ: ಯೋಜನೆ ಅನುಷ್ಠಾನ ಆಮೆಗತಿ
ಕೇಂದ್ರದ ಅನುದಾನ ಕಡಿತ: ಯೋಜನೆ ಅನುಷ್ಠಾನ ಆಮೆಗತಿ   

ಬೆಂಗಳೂರು: ಪರಿಸರ ಮಾಲಿನ್ಯ ಪ್ರಮಾಣ ಕಡಿಮೆ ಮಾಡುವ ಉದ್ದೇಶ ದಿಂದ ಸಾರ್ವಜನಿಕ ಸಾರಿಗೆಗಳಲ್ಲಿ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಬಳಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಕೇಂದ್ರ ಸರ್ಕಾ ರದ ಅನುದಾನ ಪ್ರಮಾಣ ಕಡಿಮೆ ಯಾದ ಕಾರಣ ಯೋಜನೆ ಅನುಷ್ಠಾನ ಆಮೆಗತಿಯಲ್ಲಿ ಸಾಗಿದೆ.

ಈಗಾಗಲೇ ದೆಹಲಿ ಮತ್ತು ಮುಂಬೈ ನಲ್ಲಿ ಬಸ್‌ಗಳಿಗೆ ಸಿಎನ್‌ಜಿ ಅಳವಡಿಸ ಲಾಗಿದೆ. ಡೀಸೆಲ್ ಆಧಾರಿತ ಕೆಎಸ್‌ಆರ್‌ ಟಿಸಿ ಮತ್ತು ಬಿಎಂಟಿಸಿ ಬಸ್ ಸೇರಿದಂತೆ ಇತರ ವಾಹನಗಳಿಗೆ ಸಿಎನ್‌ಜಿ   ಅಳವ ಡಿಸಲು ರಾಜ್ಯ ಸರ್ಕಾರ ಎರಡು ವರ್ಷ ಗಳ ಹಿಂದೆಯೇ ಒಪ್ಪಿಗೆ ಸೂಚಿಸಿತ್ತು.  ಆರಂಭಿಕ ಹಂತದಲ್ಲಿ ನರ್ಮ್ ಯೋಜನೆ ಅಡಿಯಲ್ಲಿ ಹೊಸದಾಗಿ ಖರೀದಿಸುವ ಬಿಎಂಟಿಸಿ 300 ಬಸ್‌ಗಳಿಗೆ ಸಿಎನ್‌ಜಿ ಬಳಸಲು ಬಿಎಂಟಿಸಿ ಚಿಂತನೆ ನಡೆಸಿತ್ತು.

‘ಕೇಂದ್ರ ಅನುದಾನದಿಂದ ಈ ಯೋಜನೆ ಜಾರಿಗೊಳಿಸಲು ನಿರ್ಧರಿಸ ಲಾಗಿತ್ತು. ಶೇ 80 ಮೊತ್ತ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕಿತ್ತು. ಇತ್ತೀಚೆಗೆ ಅನುದಾನ ಪ್ರಮಾಣವನ್ನು ಶೇ 50ಕ್ಕೆ ಇಳಿಸಿದೆ. ಈ ಕಾರಣದಿಂದ ಕೇಂದ್ರದ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಈಗಿನ ಸನ್ನಿವೇಶದಲ್ಲಿ ಈ ಹಿಂದೆ ಯೋಜಿಸಿದಷ್ಟೇ ಪ್ರಮಾಣದ ಬಸ್‌ ಖರೀದಿ ಕಷ್ಟ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಸಹಾಯಕತೆ ವ್ಯಕ್ತಪಡಿಸಿದರು.

ಡೀಸೆಲ್‌ಗಿಂತಲೂ ಸಿಎನ್‌ಜಿ ದರ ಕಡಿಮೆ. ಪರಿಸರ ಮಾಲಿನ್ಯವೂ ಕಡಿಮೆ.  ಹಂತ ಹಂತವಾಗಿ ಬಸ್‌ಗಳಲ್ಲಿ ಸಿಎನ್‌ಜಿ ಬಳಸಲು ಬಿಎಂಟಿಸಿ ಯೋಜಿಸಿದೆ. ಈ ಸಂಬಂಧ ಸಿಸ್ಟುಪ್‌ (ಮೂಲಸೌಕರ್ಯ, ಸುಸ್ಥಿರ ಸಾರಿಗೆ ಹಾಗೂ ನಗರ ಯೋಜನಾ ಕೇಂದ್ರ) ಜತೆ ಅಧ್ಯಯನ ನಡೆಸಿ ಶೀಘ್ರದಲ್ಲಿ ಪ್ರಾಯೋಗಿಕ ಯೋಜನೆ ಜಾರಿಗೆ ತರಲು ಸಂಸ್ಥೆ ಸಿದ್ಧತೆ ನಡೆಸಿದೆ. ಆರಂಭಿಕ ಹಂತದಲ್ಲಿ 5ರಿಂದ 10 ಸಾಮಾನ್ಯ ಬಸ್‌ಗಳಲ್ಲಿ ಸಿಎನ್‌ಜಿ ಬಳಸಲಾಗುವುದು.  ಮಾಲಿನ್ಯ ಪ್ರಮಾಣ ಹಾಗೂ ಜನರ ಪ್ರತಿಕ್ರಿಯೆ ಗಮನಿಸಿ ಯೋಜನೆ ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

‘ಲೋ ಫ್ಲೋರ್ ಸಿಎನ್‌ಜಿ ಬಸ್‌ಗಳಿಗೆ (ವೋಲ್ವೊದಂತಹ ಹವಾ ನಿಯಂತ್ರಿತ) ₹80ರಿಂದ ₹85 ಲಕ್ಷ ವೆಚ್ಚವಾಗುತ್ತದೆ. ಸಾಮಾನ್ಯ ಬಸ್‌ಗಳಿಗೆ ಇಷ್ಟು ವೆಚ್ಚವಾಗುವುದಿಲ್ಲ. ಹೀಗಾಗಿ ಇಂತಹ ಬಸ್‌ಗಳನ್ನು ಖರೀದಿಸಲು ಚಿಂತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಗೇಲ್‌ ಸಂಸ್ಥೆಯ ವತಿಯಿಂದ ದಾಬೋಲ್‌– ಬಿಡದಿ ನಡುವೆ ಸಿಎನ್‌ಜಿ ಮಾರ್ಗ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಪೈಪ್‌ಲೈನ್‌ ಅಳವಡಿಸಿ ಬಸ್‌ಗಳಿಗೆ ಇಂಧನ  ಪೂರೈಕೆ ಮಾಡಲು ಗೇಲ್‌ ಸಂಸ್ಥೆಗೆ ಡಿಪೊಗಳಲ್ಲಿ ಬಿಎಂಟಿಸಿ ಜಾಗ ಮಂಜೂರು ಮಾಡಿದೆ. ‘ಇನ್ನೊಂದು ಕಡೆ ಜಾಗ ಮಂಜೂರು ಮಾಡಲು ಜಂಟಿ ಪರಿಶೀಲನೆ ನಡೆಸಲಾಗಿದೆ. ಒಪ್ಪಂದ ಅಂತಿಮ ಹಂತಕ್ಕೆ ಬಂದಿದೆ’ ಎಂದು ಮಾಹಿತಿ ನೀಡಿದರು.

*
ಸಿಎನ್‌ಜಿ ಬಳಕೆ ಲಾಭವೇನು?
ಕೇಂದ್ರೀಕೃತ ನೈಸರ್ಗಿಕ ಅನಿಲ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್-ಸಿಎನ್‌ಜಿ) ಡೀಸೆಲ್ ಮತ್ತು ಪೆಟ್ರೋಲ್‌ಗೆ ಪರ್ಯಾಯ ಇಂಧನವಾಗಿದೆ. ಇದು ಪರಿಸರ ಕಾಪಾಡಲು ಪೂರಕ ವಾಗಿದ್ದು, ಇತರ ಇಂಧನ ಗಳಿಗಿಂತ ಶುದ್ಧ ಮತ್ತು ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಜತೆಗೆ ಕಡಿಮೆ ದರದಲ್ಲಿ ದೊರೆಯಲಿದೆ. ಹೆಚ್ಚಿನ ಒತ್ತಡ ಹಾಕುವ ಮೂಲಕ ನೈಸರ್ಗಿಕ ಅನಿಲವನ್ನು ಸಿಎನ್‌ಜಿಯಾಗಿ ಪರಿವರ್ತಿಸಲಾಗುತ್ತದೆ. ಸಿಎನ್‌ಜಿ ಬಳಸಿದರೆ ವಾಹನಗಳ ನಿರ್ವಹಣೆ ವೆಚ್ಚವೂ ಕಡಿಮೆ ಯಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.