ADVERTISEMENT

ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಅಮಾನತು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:53 IST
Last Updated 17 ಫೆಬ್ರುವರಿ 2017, 19:53 IST
ಬೆಂಗಳೂರು: ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪ್ರಾಂಶುಪಾಲ ಕುಮಾರ್‌ ಠಾಕೂರ್‌ ಅವರನ್ನು ಕೇಂದ್ರೀಯ ವಿದ್ಯಾಲಯದ ಸಂಘಟನೆ (ಕೆವಿಎಸ್‌) ಅಮಾನತುಗೊಳಿಸಿದೆ.
 
‘ಪ್ರಾಥಮಿಕ ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾದ ಕಾರಣ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ಕೈಗೊಳ್ಳಲಾಗುವುದು’ ಎಂದು ಕೆವಿಎಸ್ ತಿಳಿಸಿದೆ.
 
ಆರೋಪ ಎದುರಿಸುತ್ತಿರುವ ಪ್ರಾಂಶುಪಾಲರನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಕೇಂದ್ರೀಯ ವಿದ್ಯಾಲಯಗಳ ಆಯುಕ್ತರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್‌) ಈ ಹಿಂದೆ ಪತ್ರ ಬರೆದಿತ್ತು. ಈ ಪ್ರಕರಣ ಸಂಬಂಧ   ಕೆವಿಎಸ್‌ಗೆ ಆಯೋಗ ನೋಟಿಸ್‌ ನೀಡಿತ್ತು. 
 
ಕೆವಿಎಸ್‌ ಆಯುಕ್ತರ ಪರವಾಗಿ ಬೆಂಗಳೂರು ವಿಭಾಗದ ಉಪ ಆಯುಕ್ತ ಪಿ. ದೇವಕುಮಾರ್‌ ಅವರು ಶುಕ್ರವಾರ ವಿಚಾರಣೆಗೆ ಹಾಜರಾದರು. ಪ್ರಕರಣ ಸಂಬಂಧ ಇದುವರೆಗೂ ಕೈಗೊಂಡ ಕ್ರಮಗಳ ಕುರಿತು ವಿವರಣೆ ನೀಡಿದರು. 
 
‘ದೇವಕುಮಾರ್‌ ಅವರ ವಿವರಣೆ ತೃಪ್ತಿ ನೀಡಿಲ್ಲ. ಕೆವಿಎಸ್‌ ಆಯುಕ್ತರು ಫೆ.25ಕ್ಕೆ ಆಯೋಗದ ಎದುರು ಹಾಜರಾಗಬೇಕು’ ಎಂದು ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.