ADVERTISEMENT

ಕೈಗಾರಿಕೆಗಳ ಕೊಳಕು ನೀರಿನಿಂದ ಕೆರೆ ಮಲಿನ

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:30 IST
Last Updated 21 ಮೇ 2015, 19:30 IST

ಬೆಂಗಳೂರು: ಶುದ್ಧೀಕರಣ ಘಟಕಗಳ ಕೊರತೆ, ಹತ್ತಿರದ ಕೈಗಾರಿಕೆಗಳು ಕೊಳಕು ನೀರನ್ನು ಬಿಡುತ್ತಿರುವುದೇ ಬೆಳ್ಳಂದೂರು ಕೆರೆ ಮಲಿನಗೊಳ್ಳಲು ಪ್ರಮುಖ ಕಾರಣ ಎಂದು ಬೆಂಗಳೂರು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಉಪ ಲೋಕಾಯುಕ್ತರಿಗೆ ಪ್ರಾಥಮಿಕ ವರದಿ ಸಲ್ಲಿಸಿದೆ.

ಬೆಳ್ಳಂದೂರು ಕೆರೆಗೆ 17 ಕಡೆಗಳಿಂದ ನೀರು ಹರಿದುಬರುತ್ತದೆ. ಆದರೆ ಇವುಗಳಲ್ಲಿ ಎರಡು ಕಡೆ ಮಾತ್ರ ನೀರು ಶುದ್ಧೀಕರಣ ಘಟಕಗಳಿವೆ. ಇನ್ನುಳಿದ ಕಡೆಗಳಿಂದ ಕೆರೆಗೆ ಬರುವ ನೀರು ಕೊಳಕನ್ನು ಹಾಗೇ ಹೊತ್ತು ತರುತ್ತದೆ ಎಂದು ಎಂದು ಮಂಡಳಿಯ ಮುಖ್ಯ ಎಂಜಿನಿಯರ್ ವೆಂಕಟರಾಜು ಅವರು ಉಪ ಲೋಕಾಯುಕ್ತರಿಗೆ ತಿಳಿಸಿದ್ದಾರೆ.

‘ಕೆರೆ ಇರುವ ಪ್ರದೇಶದ ಸುತ್ತ–ಮುತ್ತ 500 ಕೈಗಾರಿಕೆಗಳು ಇವೆ ಎಂದು ಮಂಡಳಿ ಹೇಳಿದೆ. ಕೈಗಾರಿಕೆಗಳಿಂದ ಬರುವ ಕೊಳಕು ನೀರು ಬೆಳ್ಳಂದೂರು ಮತ್ತು ವರ್ತೂರು ಕೆರೆ ಪ್ರವೇಶಿಸುತ್ತಿದೆ. ಕೆರೆ ನೀರಿಗೆ ದೊಡ್ಡ ಪ್ರಮಾಣದಲ್ಲಿ ಸೇರಿರುವ ರಾಸಾಯನಿಕ ಅಲ್ಲಿ ಈಚೆಗೆ ಬೆಂಕಿ ಕಾಣಿಸಿಕೊಳ್ಳಲು ಕಾರಣ. ಈ ಎರಡೂ ಕೆರೆಗಳಿಗೆ ನೀರು ಬರುತ್ತಿದ್ದ ಬಹುಪಾಲು ರಾಜಕಾಲುವೆಗಳು ಒತ್ತುವರಿಗೆ ಒಳಗಾಗಿವೆ. ಹಾಗಾಗಿ, ಅಗರ ಕೆರೆಯಿಂದ ಬೆಳ್ಳಂದೂರು ಕೆರೆಗೆ, ಅಲ್ಲಿಂದ ವರ್ತೂರು ಕೆರೆಗೆ ನೀರಿನ ಸುಗಮ ಹರಿಯುವಿಕೆ ಇಲ್ಲವಾಗಿದೆ. ಹಾಗಾಗಿ, ನೀರು ಚಿಕ್ಕದಾಗಿ ಹರಿಯುತ್ತಿರುವಲ್ಲಿ ದೊಡ್ಡ ಪ್ರಮಾಣದಲ್ಲಿ ನೊರೆ ಸೃಷ್ಟಿಯಾಗಿದೆ’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಹೇಳಿದ್ದಾರೆ.

ಬೆಳ್ಳಂದೂರು ಮತ್ತು ವರ್ತೂರು ಕೆರೆ ಸುತ್ತ ಆಗಿರುವ ಒತ್ತುವರಿ ಸಮೀಕ್ಷೆ ಪೂರ್ಣಗೊಳ್ಳಲು 15 ದಿನ ಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಅವರು ಉಪ ಲೋಕಾಯುಕ್ತರಿಗೆ ತಿಳಿಸಿದ್ದಾರೆ. ಒತ್ತುವರಿ ಪತ್ತೆ ಮಾಡಿ, ಒತ್ತುವರಿದಾರರನ್ನು ತೆರವು ಮಾಡಿದ ನಂತರ ಕೆರೆಗಳ ಸುತ್ತ ಬೇಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮುಖ್ಯ ಎಂಜಿನಿಯರ್ (ಕೆರೆ) ಅವರು ವಿವರ ನೀಡಿದ್ದಾರೆ.

ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಅಪಾರ್ಟ್‌ಮೆಂಟ್‌ಗಳು ಸ್ಥಾಪಿಸುವ ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಜಲ ಮಾಲಿನ್ಯ ಕಡಿಮೆ ಮಾಡಲು ಆಗದು ಎಂದು ಪರಿಸರವಾದಿಗಳು ಮತ್ತು ಈ ಕೆರೆಗಳ ಸಮೀಪ ವಾಸಿಸುತ್ತಿರುವವರು ಹೇಳಿಕೆ ಸಲ್ಲಿಸಿದ್ದಾರೆ.
ಈ ಕೆರೆಗಳ ಸಂರಕ್ಷಣೆ, ಸ್ವಚ್ಛತೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅಡಿ ಜೂನ್‌ 4ರಂದು ವಿಶೇಷ ಸಭೆ ನಡೆಸಲಿದ್ದಾರೆ.

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಐಐಎಸ್‌ಸಿಯ ಪರಿಸರ ವಿಜ್ಞಾನ ಕೇಂದ್ರದ ಪ್ರೊ.ಪಿ.ವಿ. ರಾಮಚಂದ್ರ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.