ADVERTISEMENT

ಕೈಚೆಲ್ಲಿದ ಬಿಡಿಎ: 117 ಕೆರೆಗಳು ಅನಾಥ

ಕೆಂಪೇಗೌಡ ಬಡಾವಣೆಯ ನಿರ್ಮಾಣಕ್ಕೆ ಪ್ರಥಮ ಆದ್ಯತೆ–ಪ್ರಾಧಿಕಾರ ಸಮಜಾಯಿಷಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 20:06 IST
Last Updated 30 ನವೆಂಬರ್ 2015, 20:06 IST

ಬೆಂಗಳೂರು: ಅನುದಾನದ ಕೊರತೆ ಕಾರಣದಿಂದ 117 ಕೆರೆಗಳ ಅಭಿವೃದ್ಧಿ ಅಸಾಧ್ಯ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ  (ಬಿಡಿಎ) ಕೈಚೆಲ್ಲಿದೆ. ಈ ಸಂಬಂಧ ಪ್ರಾಧಿಕಾರದ ಆಡಳಿತ ಮಂಡಳಿ ಆರು ತಿಂಗಳ ಹಿಂದೆ ತೀರ್ಮಾನ ತೆಗೆದುಕೊಂಡಿತ್ತು. ಇತ್ತೀಚೆಗೆ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅಸಹಾಯಕತೆ ತೋಡಿಕೊಂಡಿತ್ತು. ಕೆಂಗೇರಿ ಬಳಿಯಲ್ಲಿ ಕೆಂಪೇಗೌಡ ಬಡಾವಣೆಯ ನಿರ್ಮಾಣಕ್ಕೆ ಪ್ರಾಧಿಕಾರ ಪ್ರಥಮ ಆದ್ಯತೆ ನೀಡುತ್ತಿದ್ದು, ಬಹುತೇಕ ಸಂಪನ್ಮೂಲ ಅದಕ್ಕೆ ಬೇಕಿದೆ ಎಂದು ಪ್ರಾಧಿಕಾರ ಸಮಜಾಯಿಷಿ ನೀಡಿದೆ.

2008ರಲ್ಲಿ ರಾಜ್ಯ ಸರ್ಕಾರ ನಗರದ ಕೆರೆಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನ ತೆಗೆದುಕೊಂಡಿತ್ತು. ಈ ಪೈಕಿ ಪಾಲಿಕೆ ವಶದಲ್ಲಿದ್ದ 117 ಕೆರೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಬಿಡಿಎಗೆ ವಹಿಸಲಾಗಿತ್ತು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದ ಮೇರೆಗೆ ರೋಬಸ್ಟ್‌ ಮೆಟಿರಿಯಲ್‌ ಟೆಕ್ನಾಲಜಿ ಸಂಸ್ಥೆಯು ಸುಬ್ರಹ್ಮಣ್ಯಪುರ ಕೆರೆಯ ಅಧ್ಯಯನ ನಡೆಸಿತ್ತು. ಕೆರೆಯ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳದಿದ್ದರೆ ನಾಶವಾಗಲಿದೆ ಎಂದು ಎಚ್ಚರಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಡಿಎ ಆಯುಕ್ತ ಟಿ.ಶ್ಯಾಮ್ ಭಟ್‌ ಅವರಿಗೆ ಕರೆ ಮಾಡಿದಾಗ ಅಸಹಾಯಕತೆ ವ್ಯಕ್ತಪಡಿಸಿದರು.

‘ವಿವಿಧ ಇಲಾಖೆಗಳ ವಶದಲ್ಲಿದ್ದ ಕೆರೆಗಳನ್ನು ಅಭಿವೃದ್ಧಿಪಡಿಸಲು ಬಿಡಿಎಗೆ ಹಸ್ತಾಂತರಿಸಲಾಗಿತ್ತು. ಸಂಪನ್ಮೂಲದ ಕೊರತೆ ಕಾರಣಕ್ಕೆ ಇವುಗಳ ಅಭಿವೃದ್ಧಿ ಅಸಾಧ್ಯ ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಂಬಂಧಿಸಿದ ಇಲಾಖೆಗಳಿಗೆ ಈ ಕೆರೆಗಳನ್ನು ಹಸ್ತಾಂತರಿಸಲಾಗುವುದು’ ಎಂದು ಅವರು ತಿಳಿಸಿದರು. ಈ ಕೆರೆಗಳ ನಿರ್ವಹಣೆ ಹೊಣೆ ಹೊಸದಾಗಿ ರಚಿಸಿದ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೋಗಲಿದೆ. ಈ ವರೆಗೆ ಪ್ರಾಧಿಕಾರಕ್ಕೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ನಿರ್ವಹಣೆ ಕೊರತೆ: 117 ಕೆರೆಗಳ ಪೈಕಿ ₹100 ಕೋಟಿ ವೆಚ್ಚದಲ್ಲಿ 12 ಕೆರೆಗಳನ್ನು ಬಿಡಿಎ ಅಭಿವೃದ್ಧಿಪಡಿಸಿತ್ತು. ಎರಡನೇ ಹಂತದಲ್ಲಿ ₹62 ಕೋಟಿ ವೆಚ್ಚದಲ್ಲಿ 17 ಕೆರೆಗಳ ಅಭಿವೃದ್ಧಿ ಕೈಗೆತ್ತಿಕೊಂಡಿತ್ತು. ಆದರೆ, ಈ ಕೆರೆಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಈ ಕೆಲಸವನ್ನು ಪಾಲಿಕೆ ಮಾಡುತ್ತಿಲ್ಲ ಎಂಬುದು ಬಿಡಿಎ ಅಧಿಕಾರಿಗಳ ಆರೋಪ. ಈಗ ಅಭಿವೃದ್ಧಿಪಡಿಸಿರುವ ಬಹುತೇಕ ಕೆರೆಗಳಲ್ಲಿ ಕಳೆ ಗಿಡಗಳು ಬೆಳೆದಿವೆ. ತಂತಿಬೇಲಿಗಳು ಮುರಿದಿವೆ. ಈ ಕೆರೆಗಳ ನಿರ್ವಹಣೆ ಮಾಡುವಂತೆ ಬಿಬಿಎಂಪಿಗೆ ನಾಲ್ಕೈದು ಪತ್ರ ಬರೆಯಲಾಗಿದೆ. ಇದಕ್ಕೆ ಬಿಬಿಎಂಪಿ ಪ್ರತಿಕ್ರಿಯೆ ನೀಡಿಲ್ಲ. ಅನುದಾನದ ಕೊರತೆ ಕಾರಣದಿಂದ ಈ ಕೆರೆಗಳ ನಿರ್ವಹಣೆ ಅಸಾಧ್ಯ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.

ಕ್ರಿಯಾಯೋಜನೆ: ಸುಬ್ರಹ್ಮಣ್ಯಪುರ ಕೆರೆಗೆ ಅಗಾಧ ಪ್ರಮಾಣದ ಕೊಳಚೆ ನೀರು ಸೇರುತ್ತಿದೆ. ಇದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಜಲಮಂಡಳಿ ಮುಂದಾಗಿವೆ. ಇದಕ್ಕೆ ₹1.05 ಕೋಟಿಯ ಕ್ರಿಯಾಯೋಜನೆ ರೂಪಿಸಲಾಗಿದೆ. ಬಿಡಿಎ ₹36 ಲಕ್ಷ, ಬಿಬಿಎಂಪಿ ₹38 ಲಕ್ಷ ವಿನಿಯೋಗಿಸಲಿವೆ. ಉಳಿದ ಮೊತ್ತವನ್ನು ಜಲಮಂಡಳಿ ಭರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.