ADVERTISEMENT

ಕೈ ಕುಯ್ದುಕೊಂಡು, ನೇಣು ಹಾಕಿಕೊಂಡ ಟೆಕ್ಕಿ

ನಾರಾಯಣರೆಡ್ಡಿ ಬಡಾವಣೆಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:39 IST
Last Updated 6 ಮೇ 2016, 19:39 IST

ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ಆನಂದ್‌ ಫುಲೆ (26) ಎಂಬುವರು ಕುತ್ತಿಗೆ ಹಾಗೂ ಕೈಗಳನ್ನು ಚಾಕುವಿನಿಂದ ಕುಯ್ದುಕೊಂಡು ನಂತರ ನೇಣು ಹಾಕಿಕೊಂಡ ಘಟನೆ  ಪರಪ್ಪನ ಅಗ್ರಹಾರ ಸಮೀಪದ ನಾರಾಯಣರೆಡ್ಡಿ ಲೇಔಟ್‌ನಲ್ಲಿ ನಡೆದಿದೆ.

ವಿಶಾಖಪಟ್ಟಣ ಮೂಲದ ಆನಂದ್, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಎಚ್‌ಎಎಲ್‌ ಸಮೀಪದ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು, ಮೂರು ತಿಂಗಳ ಅವಧಿಗೆ ಗೋವಾಗೆ ವರ್ಗಾವಣೆಗೊಂಡಿದ್ದರು.

ಮಂಗಳವಾರ ಬೆಳಿಗ್ಗೆ ಗೋವಾದಿಂದ ನಗರಕ್ಕೆ ವಾಪಸಾದ ಆನಂದ್, ನಾರಾಯಣರೆಡ್ಡಿ ಲೇಔಟ್‌ನಲ್ಲಿರುವ ಸ್ನೇಹಿತರ ಮನೆಯಲ್ಲಿ ಉಳಿದು ಕೊಂಡಿದ್ದರು.
ಎಂದಿನಂತೆ ಬುಧವಾರ ಬೆಳಿಗ್ಗೆ 10 ಗಂಟೆಗೆ ಸ್ನೇಹಿತರು ಕೆಲಸಕ್ಕೆ  ಹೋಗಿದ್ದರು.

ಆ ನಂತರ ಮನೆಯಲ್ಲಿ ಒಬ್ಬರೇ ಇದ್ದ ಆನಂದ್‌, ಕುತ್ತಿಗೆ ಹಾಗೂ ಕೈಗಳನ್ನು ಬ್ಲೇಡ್‌ನಿಂದ ಕುಯ್ದುಕೊಂಡಿದ್ದಾರೆ. ಬಳಿಕ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ರಾತ್ರಿ 7.30ರ ಸುಮಾರಿಗೆ ಸ್ನೇಹಿತರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಗೋವಾದಿಂದ ಬಂದಾಗ ಆನಂದ್ ಖುಷಿಯಾಗಿಯೇ ಇದ್ದ ಎಂದು ಸ್ನೇಹಿತರು ಹೇಳಿದ್ದಾರೆ. ಮೊಬೈಲ್ ಕರೆಗಳು ಹಾಗೂ ಸಂದೇಶಗಳನ್ನು ಪರಿಶೀಲಿಸಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ.

ಗೋವಾದಲ್ಲಿ ಅವರು ಉಳಿದುಕೊಂಡಿದ್ದ ಮನೆಯ ಮಾಲೀಕರ ಮೊಬೈಲ್ ಸಂಖ್ಯೆ ಕಲೆ ಹಾಕಲಾಗುತ್ತಿದೆ. ಅವರನ್ನು ವಿಚಾರಣೆ ನಡೆಸಿದರೆ ಏನಾದರೂ ಸುಳಿವು ಸಿಗಬಹುದು’ ಎಂದು ಪರಪ್ಪನ ಅಗ್ರಹಾರ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಟಿಶ್ಯೂ ಪೇಪರ್‌ನಲ್ಲಿ ಕ್ಷಮೆ ಯಾಚನೆ
‘ಕ್ಷಮಿಸಿ ಗೆಳೆಯರೆ. ಇಂಥ ಕೆಲಸಕ್ಕೆ ನಿಮ್ಮ ಮನೆಯನ್ನು ಬಳಸಿಕೊಳ್ಳುತ್ತಿದ್ದೇನೆ. ಕೆಲ ವೈಯಕ್ತಿಕ ಕಾರಣಗಳಿಂದ ಬೇಸರವಾಗಿದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಟಿಶ್ಯೂ ಪೇಪರ್‌ನಲ್ಲಿ ಬರೆದಿರುವ ಆನಂದ್, ಅದರ ಮೇಲೆ ಮೊಬೈಲ್ ಇಟ್ಟು ನೇಣು ಹಾಕಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.