ADVERTISEMENT

ಕೊಚ್ಚಿಹೋದ ವ್ಯಕ್ತಿಗಾಗಿ ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 22 ಮೇ 2017, 20:04 IST
Last Updated 22 ಮೇ 2017, 20:04 IST
ಕುಂಬಳಗೋಡು ಬಳಿಯ ಕಂಬಿಪುರ ಗ್ರಾಮದ ಬಳಿಯ ರಾಜಕಾಲುವೆಯಲ್ಲಿ  ಸೋಮವಾರ ಮುಳುಗು ತಜ್ಞರು ಹುಡುಕಾಟ ನಡೆಸಿದರು - ಪ್ರಜಾವಾಣಿ ಚಿತ್ರ
ಕುಂಬಳಗೋಡು ಬಳಿಯ ಕಂಬಿಪುರ ಗ್ರಾಮದ ಬಳಿಯ ರಾಜಕಾಲುವೆಯಲ್ಲಿ ಸೋಮವಾರ ಮುಳುಗು ತಜ್ಞರು ಹುಡುಕಾಟ ನಡೆಸಿದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಕುರುಬರಹಳ್ಳಿಯ ಜೆ.ಸಿ.ನಗರದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಶಾಂತಕುಮಾರ್‌ (34) ಅವರಿಗಾಗಿ ಸೋಮವಾರ ದಿನವಿಡೀ ಹುಡುಕಾಟ ನಡೆಸಲಾಯಿತು. ಆದರೂ, ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ.

ಸೋಮವಾರ ಬೆಳಿಗ್ಗೆ ಸುಮನಹಳ್ಳಿಯ ಕೆಂಗೇರಿಯ ರಾಜಕಾಲುವೆ ಬಳಿ ಕಾರ್ಯಾಚರಣೆ ಆರಂಭವಾಯಿತು. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಜತೆ  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವು ಸೇರಿಕೊಂಡಿತು.

ಹಿಟಾಚಿ ಹಾಗೂ ಜೆ.ಸಿ.ಬಿ ಯಂತ್ರಗಳನ್ನು ಬಳಸಿ, ಹಂಪಾಪುರ, ಕುಂಬಳಗೋಡು, ಭೈರಮಂಗಲ ಬಳಿಯ ರಾಜಕಾಲುವೆಯಲ್ಲಿ ತೀವ್ರ ಶೋಧ ನಡೆಸಲಾಯಿತು. ಅಲ್ಲಲ್ಲಿ ನಿಂತಿದ್ದ ತ್ಯಾಜ್ಯ ರಾಶಿಗಳನ್ನು ಕೆದಕುತ್ತಾ ಕತ್ತಲಾಗುವ ವರೆಗೂ ಹುಡುಕಾಟ ನಡೆಯಿತು.

ADVERTISEMENT

ಹುಡುಕಾಟಕ್ಕೆ ಸಂಬಂಧಿಕರ ಸಾಥ್: ಕಾರ್ಯಾಚರಣೆ ತಂಡದ ಜತೆಗೆ ಶಾಂತಕುಮಾರ್ ಅವರ ಕುಟುಂಬಸ್ಥರು ಸಹ ರಾಜಕಾಲುವೆಗೆ ಇಳಿದು ಹುಡುಕಾಡಿದರು. ಶ್ಯಾನಮಂಗಲ ಗ್ರಾಮದ ರಾಜಕಾಲುವೆ ಬಳಿಯ ಶೋಧಕಾರ್ಯದಲ್ಲಿ ಅವರ ಚಿಕ್ಕಮ್ಮ, ಸೋದರತ್ತೆ, ಚಿಕ್ಕಪ್ಪಂದಿರು, ಅಣ್ಣ–ತಮ್ಮಂದಿರು ಭಾಗಿಯಾಗಿದ್ದರು.

ಅಪರಿಚಿತ ಶವ ಪತ್ತೆ ಬಗ್ಗೆ ಸ್ಥಳೀಯರ ಮಾಹಿತಿ: ‘ಮೈಸೂರು ರಸ್ತೆಯ ಕಂಬಿಪುರ ಹತ್ತಿರದ ರಾಜಕಾಲುವೆಯಲ್ಲಿ ಭಾನುವಾರ ಶವವನ್ನು ಕಂಡ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಮಾಹಿತಿ ಆಧರಿಸಿ ಇಲ್ಲಿ ಹುಡುಕಾಟ ನಡೆಸಲಾಯಿತು. ಆದರೆ, ಇಲ್ಲಿ ಯಾವುದೇ ಶವ ಪತ್ತೆಯಾಗಿಲ್ಲ’ ಎಂದು ಅಗ್ನಿ ಶಾಮಕ ಸಿಬ್ಬಂದಿ ತಿಳಿಸಿದರು.



ಪತಿ ವಾಪಸ್ ಬರುವ ನಿರೀಕ್ಷೆಯಲ್ಲಿ ಪತ್ನಿ
‘ಗಂಡ ಜೀವಂತವಾಗಿದ್ದಾರೆ. ಅವರು ವಾಪಸ್ ಬಂದೇ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಂತಕುಮಾರ್ ಅವರ ಪತ್ನಿ ಸರಸ್ವತಿ ಅವರು ಹೇಳುತ್ತಿದ್ದಾರೆ’ ಎಂದು ಅವರ ಸಂಬಂಧಿ ಅಂದಾನಿ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಂಡನ ಬರುವಿಕೆಗೆ ಕಾಯುತ್ತಿರುವ ಅವರು ಊಟ–ತಿಂಡಿ ಬಿಟ್ಟಿದ್ದು, ಅವರ ಆರೋಗ್ಯ ಹದಗೆಟ್ಟಿದೆ. ಮಗ ಗೃಹಿತ್ ಗೌಡಗೆ ಎದೆಹಾಲು ಕುಡಿಸಲು ಸಹ ಅವರಿಂದ ಸಾಧ್ಯವಾಗುತ್ತಿಲ್ಲ. ಮತ್ತೊಬ್ಬ ಮಗ ಅಪ್ಪನಿಗಾಗಿ ಗೋಳಾಡುತ್ತಿದ್ದಾನೆ’ ಎಂದು ಹೇಳಿದರು.

‘ಮಗ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಸುದ್ದಿ ತಿಳಿದಾಗಿನಿಂದಲೂ ತಂದೆ–ತಾಯಿ ಕಂಗಾಲಾಗಿದ್ದಾರೆ. ಮೂರು ದಿನವಾದರೂ ಮಗ ಪತ್ತೆಯಾಗದ ಕಾರಣಕ್ಕೆ ತಂದೆ ಸಿದ್ದಪ್ಪ ಅವರಿಗೆ ರಕ್ತದೊತ್ತಡ ಹೆಚ್ಚಾಗಿ ಸೋಮವಾರ ಅಸ್ವಸ್ಥಗೊಂಡಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ತಿಳಿಸಿದರು.

ಮಳೆಗಾಲ ಮುಗಿಯುವವರೆಗೆ ರಜೆ ಇಲ್ಲ: ಮಂಜುನಾಥ ಪ್ರಸಾದ್‌
ಬೆಂಗಳೂರು:
‘ಎಲ್ಲ ವಲಯಗಳ ಜಂಟಿ ಆಯುಕ್ತರಿಂದ ಹಿಡಿದು ಎಲ್ಲ ಅಧಿಕಾರಿಗಳಿಗೆ (ಸಹಾಯಕ ಎಂಜಿನಿಯರ್‌ ಹುದ್ದೆವರೆಗೆ) ಮಳೆಗಾಲ ಮುಗಿಯುವ ತನಕ ರಜೆ ನಿರ್ಬಂಧಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಆದೇಶಿಸಿದರು.

ಬಿಬಿಎಂಪಿಯಲ್ಲಿ ಸೋಮವಾರ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿ, ‘ಅನಿವಾರ್ಯ ಸಂದರ್ಭಗಳಲ್ಲಿ ನನ್ನಿಂದ ಒಪ್ಪಿಗೆ ಪಡೆದು ರಜೆ ಪಡೆಯಬೇಕು’ ಎಂದು ಸೂಚಿಸಿದರು.

‘ಮಳೆ ಅನಾಹುತ ತಡೆಯಲು ಎಲ್ಲ ವಲಯಗಳ ಜಂಟಿ ಆಯುಕ್ತರು ಮುಖ್ಯ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಕಾರ್ಯದ ಬಗ್ಗೆ ಮಾಹಿತಿ ಪಡೆಯಬೇಕು. ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಸೂಚಿಸಿದರು.

ಪಾಲಿಕೆಯ ಕೇಂದ್ರ ಕಚೇರಿ, 8 ವಲಯಗಳ ಕಚೇರಿ ಹಾಗೂ ಐಪಿಪಿ ನಿಯಂತ್ರಣ ಕೊಠಡಿಗಳ ವಯರ್‌ಲೆಸ್‌,  ವಾಕಿಟಾಕಿ ವ್ಯವಸ್ಥೆಯನ್ನು ತುರ್ತಾಗಿ ದುರಸ್ತಿ ಮಾಡಬೇಕು ಎಂದೂ ಹೇಳಿದರು.

ನಗರದಲ್ಲಿ 72 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಬೇಕು. ಮೂರು ದಿನಗಳ ಒಳಗಾಗಿ ಇಲ್ಲಿಗೆ ವಾಹನ, ಸಿಬ್ಬಂದಿ ಹಾಗೂ ಅಗತ್ಯ ಸಲಕರಣೆ ಒದಗಿಸಬೇಕು ಎಂದರು. ‘ಅರಣ್ಯ ಘಟಕ ವಿಭಾಗವು 21 ತಂಡಗಳನ್ನು ರಚಿಸಿದೆ. ಈ ತಂಡಗಳನ್ನು  ಕಾರ್ಯಾಚರಣೆಗೆ ಬಳಸಿಕೊಳ್ಳಬೇಕು’ ಎಂದರು.
*
ಸುಮನಹಳ್ಳಿಯಿಂದ ಭೈರಮಂಗಲದ ವರೆಗೆ ಕಾರ್ಯಾಚರಣೆ ನಡೆದಿದೆ. ಮಂಗಳವಾರ ಬೆಳಿಗ್ಗೆ ಇದೇ ಜಾಗದಿಂದ ಶೋಧಕಾರ್ಯ ನಡೆಸಲಾಗುತ್ತದೆ.
ಸಿದ್ದೇಗೌಡ,
ಬಿಬಿಎಂಪಿ ಮುಖ್ಯ ಎಂಜಿನಿಯರ್ (ರಾಜಕಾಲುವೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.