ADVERTISEMENT

ಕೋರಮಂಗಲದಲ್ಲಿ ಸಾವಯವ–ಸಿರಿಧಾನ್ಯ ಸಂತೆ

ಬೆಳೆಗಾರರು, ಮಾರಾಟಗಾರರು, ಗ್ರಾಹಕರ ಸಮಾಗಮ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:21 IST
Last Updated 18 ನವೆಂಬರ್ 2017, 19:21 IST
ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಸಾರ್ವಜನಿಕರು 'ನಮ್ಮೂರ ಅಂಗಡಿ' ಮಳಿಗೆಯಲ್ಲಿ ಸಿರಿಧಾನ್ಯಗಳನ್ನು ಖರೀದಿಸಿದರು - ಪ್ರಜಾವಾಣಿ ಚಿತ್ರ
ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಸಾರ್ವಜನಿಕರು 'ನಮ್ಮೂರ ಅಂಗಡಿ' ಮಳಿಗೆಯಲ್ಲಿ ಸಿರಿಧಾನ್ಯಗಳನ್ನು ಖರೀದಿಸಿದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೃಷಿ ಇಲಾಖೆ, ಜೈವಿಕ ಕೃಷಿ ಸಮಾಜದ ಸಹಯೋಗದಲ್ಲಿ ನಗರದ ಕೋರಮಂಗಲದ ಆಟದ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಸಾವಯವ ಮತ್ತು ಸಿರಿಧಾನ್ಯ ಮೇಳ ಶನಿವಾರ ಆರಂಭವಾಯಿತು. ಸಿರಿಧಾನ್ಯ ಬೆಳೆಗಾರರು, ಮಾರಾಟಗಾರರು ಮತ್ತು ಗ್ರಾಹಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.

ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಗೃಹ ಸಚಿವ ಎಂ.ರಾಮಲಿಂಗಾರೆಡ್ಡಿ ಮೇಳಕ್ಕೆ ಚಾಲನೆ ನೀಡಿದರು. ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು, ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟಕ್ಕೆ ಈ ಮೇಳ ವೇದಿಕೆ ಒದಗಿಸಿದೆ. ಭಾನುವಾರವೂ ಮೇಳ ನಡೆಯಲಿದೆ.

‘ಸಿರಿ ಧಾನ್ಯಗಳನ್ನು ಉತ್ತಮ ಪೋಷಕಾಂಶಯುಕ್ತ ಆಹಾರವಾಗಿ ಪರಿಗಣಿಸಲಾಗುತ್ತದೆ. ಈ ಧಾನ್ಯಗಳ ಬಳಕೆ ಆರೋಗ್ಯಕ್ಕೂ ಒಳ್ಳೆಯದು. ಸಿರಿಧಾನ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಸಿರಿಧಾನ್ಯ ಬೆಳೆಯುವ ಕೃಷಿಕರಿಗೂ ಇದರ ಲಾಭ ತಲುಪಿಸುವುದು ಮೇಳದ ಉದ್ದೇಶ’ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.

ADVERTISEMENT

ಮಳಿಗೆಗಳಲ್ಲಿ ರಾಗಿ, ಜೋಳ ಹಾಗೂ ಹಲವು ಬಗೆಯ ಸಿರಿಧಾನ್ಯ, ಸಾವಯವ ಕೃಷಿ ಉತ್ಪನ್ನಗಳನ್ನು ಮಾರಾಟಗಾರರು ಪ್ರದರ್ಶನಕ್ಕೆ ಇಟ್ಟಿದ್ದರು. ಮೇಳಕ್ಕೆ ಬಂದಿದ್ದವರು ತಮಗಿಷ್ಟದ ಧಾನ್ಯಗಳನ್ನು ಖರೀದಿಸಿದರು.

‘ಅಕ್ಕಿ ಮತ್ತು ಗೋಧಿಗೆ ಸಿರಿಧಾನ್ಯಗಳು ಉತ್ತಮ ಪರ್ಯಾಯವಾಗಿವೆ. ನಗರದ ಜನರಲ್ಲಿ ಸಿರಿಧಾನ್ಯ ಬಳಕೆಯ ಆಸಕ್ತಿ ಬೆಳೆಯುತ್ತಿದೆ. ಸಿರಿಧಾನ್ಯಗಳಿಂದ ತಯಾರಿಸಬಹುದಾದ ಆಹಾರ ಮತ್ತು ತಿಂಡಿತಿನಿಸುಗಳ ಬಗ್ಗೆ ಮಾಹಿತಿ ಹೆಚ್ಚು ಪಡೆದುಕೊಳ್ಳುತ್ತಿದ್ದಾರೆ’ ಎಂದು ಸಿರಿಧಾನ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದ ಕೃಷಿಕರೊಬ್ಬರು ತಿಳಿಸಿದರು.

‘ಜೈವಿಕ ಕೃಷಿಕ ಸಮಾಜದಲ್ಲಿ 120 ಸದಸ್ಯರಿದ್ದಾರೆ. ಜತೆಗೆ 11 ರೈತರ ಸಮೂಹಗಳಿವೆ. ಇವರು ಆಹಾರ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಇದಕ್ಕೆ ಶೀಘ್ರದಲ್ಲೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಮಾಣಪತ್ರ ಒದಗಿಸಲಾಗುತ್ತದೆ’ ಎಂದು ಸಮಾಜದ ಅಧ್ಯಕ್ಷ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮಕೃಷ್ಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.