ADVERTISEMENT

ಕೋರ್ಟ್‌ಗೆ ಹಾಜರಾಗಿದ್ದಕ್ಕೆ ಧನ್ಯವಾದ!

ಐಎಎಸ್‌ ಅಧಿಕಾರಿ ಜಿ.ಕುಮಾರ್‌ ನಾಯಕ್‌ರಿಗೆ ತರಾಟೆ–ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:26 IST
Last Updated 5 ಅಕ್ಟೋಬರ್ 2015, 20:26 IST

ಬೆಂಗಳೂರು: ಅಧಿಕಾರಿಗಳು ಹೈಕೋರ್ಟ್‌ ಆದೇಶವನ್ನೇ ಓದಿಲ್ಲ ಎಂಬ ಕಾರಣಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಯುಕ್ತ ಐಎಎಸ್‌ ಅಧಿಕಾರಿ ಕುಮಾರ್‌ ನಾಯಕ್‌ರನ್ನು ತರಾಟೆಗೆ ತೆಗೆದುಕೊಂಡ ಏಕಸದಸ್ಯ ಪೀಠವು, ಅದೇ ಬೆನ್ನಲ್ಲೇ ಆಯುಕ್ತರನ್ನು ಮುಕ್ತಕಂಠದಿಂದ ಶ್ಲಾಘಿಸಿ ಕೋರ್ಟ್‌ಗೆ ಹಾಜರಾಗಿದ್ದಕ್ಕೆ ಧನ್ಯವಾದ ಅರ್ಪಿಸಿತು!

ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ಬೆಳಗಿನ ಕಲಾಪದಲ್ಲಿ ರಾಜಕಾಲುವೆ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಹೈಕೋರ್ಟ್‌ ಆದೇಶವನ್ನೇ ಓದಿಲ್ಲ ಎಂದು ಸಿಕ್ಕಾಪಟ್ಟೆ ಗರಂ ಆಯಿತು. ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು, ಆಯುಕ್ತರನ್ನು ಕೂಡಲೇ ಕೋರ್ಟ್‌ಗೆ ಕರೆಯಿಸಿ ಎಂದು ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿದರು.

ಮಧ್ಯಾಹ್ನದ ಕಲಾಪದ ಸಮಯದಲ್ಲಿ ಆಯುಕ್ತ ಕುಮಾರ್‌ ನಾಯಕ್‌ ಕೋರ್ಟ್‌ಗೆ ಹಾಜರಾದರು. ಈ ವೇಳೆ ರಾಮಮೋಹನ ರೆಡ್ಡಿ ಅವರು, ‘ಕೋರ್ಟ್‌ ಅಂದರೆ ಏನೆಂದುಕೊಂಡಿದ್ದೀರಿ? ನಿಮ್ಮ ಈ ರೀತಿಯ ಮನೋಭಾವ ಸರಿಯಲ್ಲ. ಬೆಂಗಳೂರಿನ ಜನತೆ ನಿಮಗೆ ಗುರುತರ ಜವಾಬ್ದಾರಿ ವಹಿಸಿದ್ದಾರೆ. ಅದನ್ನು ನಿಭಾಯಿಸಬೇಕಾದ್ದು ನಿಮ್ಮ ಆದ್ಯ ಕರ್ತವ್ಯ. ಕೋರ್ಟ್‌ ಪ್ರಕರಣಗಳನ್ನು ಸುಮ್ಮನೇ ವಿಳಂಬಿಸಿಕೊಂಡು ಹೋಗುವುದೆಂದರೆ ಏನರ್ಥ’ ಎಂದು ಕಿಡಿ ಕಾರುತ್ತಲೇ ಆಯುಕ್ತರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

‘ನೀವು ಬೇರೆಲ್ಲಾ ಅಧಿಕಾರಿಗಳಿಗಿಂತಲೂ ಉತ್ತಮ ಸ್ತರದಲ್ಲಿದ್ದೀರಿ. ನಿಮ್ಮ ಸೇವೆ ಎಂತಹುದು ಎಂಬುದು ನಮಗೆ ಗೊತ್ತಿದೆ. ಆದಾಗ್ಯೂ ನೀವು ಕೋರ್ಟ್‌ಗೆ ಹಾಜರಾಗಿದ್ದಕ್ಕೆ ಧನ್ಯವಾದ’ ಎಂದು ಹೇಳಿದರು.

ಮಾಗಡಿ ರಸ್ತೆಯಲ್ಲಿ ರಾಜಕಾಲುವೆ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಂಡ ಪ್ರಕರಣವೊಂದರಲ್ಲಿ ಜಮೀನು ನೀಡಿದವರಿಗೆ ಪರಿಹಾರ ನೀಡಿಲ್ಲ ಎಂಬ ಪ್ರಕರಣದಲ್ಲಿ ಈ ಪ್ರಸಂಗ ನಡೆಯಿತು. ವಾದ ಆಲಿಕೆ ನಂತರ, ‘ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಜೊತೆ ಜಂಟಿ ಸರ್ವೇ ಕಾರ್ಯ ನಡೆಸಿ ಅರ್ಜಿದಾರರಿಗೆ ಪರಿಹಾರ ನೀಡಿ’ ಎಂದು ಪೀಠವು ಬಿಬಿಎಂಪಿಗೆ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.