ADVERTISEMENT

ಕೋಳಿವಾಡ ವರದಿ ನೀಡಿದ ಬಳಿಕ ಕ್ರಮ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 24 ಮೇ 2016, 20:05 IST
Last Updated 24 ಮೇ 2016, 20:05 IST
ಮೆಟ್ರೊ ರೈಲಿನಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕೂತಿದ್ದ ಸಿದ್ದರಾಮಯ್ಯ –ಪ್ರಜಾವಾಣಿ ಚಿತ್ರಗಳು
ಮೆಟ್ರೊ ರೈಲಿನಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕೂತಿದ್ದ ಸಿದ್ದರಾಮಯ್ಯ –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ‘ಕೆ.ಬಿ. ಕೋಳಿವಾಡ ಅವರ ಅಧ್ಯಕ್ಷತೆಯ ಕೆರೆ ಒತ್ತುವರಿ ಪತ್ತೆ ಕುರಿತ ಸದನ ಸಮಿತಿಯು ಅಂತಿಮ ವರದಿ ಸಲ್ಲಿಸಿದ ಬಳಿಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ನಗರ ಸಂಚಾರ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ 837 ಕೆರೆಗಳಿದ್ದು, 1,232 ಎಕರೆ ಒತ್ತುವರಿಯಾಗಿದೆ. ನಗರ ಸಂಚಾರದ ಸಂದರ್ಭದಲ್ಲಿ ಇಬ್ಬಲೂರು ಕೆರೆಗೆ ಭೇಟಿ ನೀಡಿದ್ದೆ. ಈ ಕೆರೆ 18 ಎಕರೆ 6 ಗುಂಟೆ ವಿಸ್ತೀರ್ಣ ಹೊಂದಿದ್ದು, 9 ಎಕರೆ ಭೂಮಿ ಒತ್ತುವರಿಯಾಗಿದೆ. ನಗರ ಜಿಲ್ಲಾಡಳಿತ ಎಲ್ಲ ಒತ್ತುವರಿದಾರರಿಗೆ ನೋಟಿಸ್‌ ನೀಡಿದ್ದು, ಅವರಿಂದ ಪ್ರತಿಕ್ರಿಯೆಯೂ ಬಂದಿದೆ’ ಎಂದರು.

‘ನಗರದ ಎಲ್ಲ ಕೆರೆಗಳನ್ನು ಸರ್ವೆ ಮಾಡಿ ತಂತಿ ಅಳವಡಿಸಲಾಗುತ್ತಿದೆ. ಕೆರೆ, ರಾಜಕಾಲುವೆಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಶೇಷಾದ್ರಿಪುರದ ಕಿನೋ ಥಿಯೇಟರ್ ಜಂಕ್ಷನ್ ಸಮೀಪದ ಅಂಡರ್ ಪಾಸ್‌ನಲ್ಲಿ ಮಳೆ ನೀರು ನಿಂತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ನೀರನ್ನು ಬೇರೆಡೆಗೆ ಸಾಗಿಸಲು ₹ 1.5 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ’ ಎಂದರು.

‘ಮಡಿವಾಳ ಮಾರುಕಟ್ಟೆಯನ್ನು ₹ 15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, 440 ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಕಗ್ಗದಾಸಪುರ ರೈಲ್ವೆ ಜಂಕ್ಷನ್‌ನಲ್ಲಿ ₹ 27 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ’ ಎಂದು ಹೇಳಿದರು.

ನಗರ ಪ್ರದಕ್ಷಿಣೆ: ಆರು ತಿಂಗಳ ಬಳಿಕ ನಗರ ಪ್ರದಕ್ಷಿಣೆ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಬೆಳಿಗ್ಗೆ 10.30ಕ್ಕೆ ಗೃಹ ಕಚೇರಿ ಕೃಷ್ಣಾ ದಿಂದ ಹೊರಟ ಸಿದ್ದರಾಮಯ್ಯ ಅವರು, ಕಿನೋ ಥಿಯೇಟರ್ ಜಂಕ್ಷನ್ ಬಳಿ ಅಂಡರ್ ಪಾಸ್‌ ಪರಿಶೀಲಿಸಿದರು. ಸಮಸ್ಯೆ ನಿವಾರಣೆಗೆ ರೂಪಿಸಿರುವ ಯೋಜನೆ ಕುರಿತು ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಮುಖ್ಯಮಂತ್ರಿ ಅವರಿಗೆ ವಿವರಿಸಿದರು.

ಬಳಿಕ ಕಂಠೀರವ ಕ್ರೀಡಾಂಗಣದಲ್ಲಿರುವ ರಾಜಕಾಲುವೆ ಕಾಮಗಾರಿಯನ್ನು ವೀಕ್ಷಿಸಿದರು.

‘ಮಳೆ ಬಂದಾಗ ವಿಠಲ್‌ ಮಲ್ಯ ರಸ್ತೆಯ ನೀರು ಕ್ರೀಡಾಂಗಣದೊಳಗೆ ನುಗ್ಗುತ್ತದೆ. ಟೆಂಡರ್‌ ಶ್ಯೂರ್‌ ವ್ಯವಸ್ಥೆಯಡಿ ರಸ್ತೆ ನಿರ್ಮಿಸಿದಾಗ ಮಳೆಯ ನೀರು ಹೋಗಲು ಸಣ್ಣ ಜಾಗ ಬಿಡಲಾಗಿತ್ತು. ಈಗ ಅದರ ವಿನ್ಯಾಸವನ್ನು ಬದಲಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಲ್ಲಿಂದ ರೆಸಿಡೆನ್ಸಿ ರಸ್ತೆಯಲ್ಲಿ ಟೆಂಡರ್‌ ಶ್ಯೂರ್‌ ಕಾಮಗಾರಿಯನ್ನು ಪರಿಶೀಲಿಸಲು ತೆರಳಲಾಯಿತು. ಆದರೆ, ಮುಖ್ಯಮಂತ್ರಿ ಅವರು ಕಾಮಗಾರಿ ಪರಿಶೀಲಿಸದೇ ಮಡಿವಾಳದ ಕಡೆಗೆ ಹೊರಟರು.

ಮಡಿವಾಳದ ಮಾರುಕಟ್ಟೆ ಬಳಿ ನಿರ್ಮಿಸುತ್ತಿರುವ 840 ಮೀಟರ್‌ ಉದ್ದದ ಕಾಂಕ್ರೀಟ್‌ ರಸ್ತೆಯ ಕಾಮಗಾರಿಯನ್ನು ಪರಿಶೀಲಿಸಿದರು.

‘₹ 4.41 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸುತ್ತಿದ್ದು, 150 ಮೀಟರ್‌ ರಸ್ತೆ ಕಾಮಗಾರಿ ಬಾಕಿ ಉಳಿದಿದೆ. 20 ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ರಸ್ತೆಯ ಎರಡೂ ಬದಿಯಲ್ಲಿ ಸ್ಲ್ಯಾಬ್‌ಗಳನ್ನು ಅಳವಡಿಸಿದ್ದು, ಇಲ್ಲಿ ಬೆಸ್ಕಾಂ ಕೇಬಲ್, ಒಎಫ್‌ಸಿ ಹಾಕಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಡಿವಾಳ ಮಾರುಕಟ್ಟೆಯ ವ್ಯಾಪಾರಿಗಳ ಯೋಗಕ್ಷೇಮ ವಿಚಾರಿಸಿದ ಸಿದ್ದರಾಮಯ್ಯ, ‘ಪ್ರತಿದಿನ ಎಷ್ಟು ವ್ಯಾಪಾರ ಆಗುತ್ತದೆ? ಜೀವನೋಪಾಯಕ್ಕೆ ದುಡಿಯುವ ದುಡ್ಡು ಸಾಕಾಗುತ್ತದೆಯೇ?’ ಎಂದು ಪ್ರಶ್ನಿಸಿದರು.

ಈ ವೇಳೆ ತರಕಾರಿ ವ್ಯಾಪಾರಿ ಷಣ್ಮುಗಪ್ಪ, ಮಳಿಗೆ ಕಟ್ಟಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ, ಆಯ್ತು ನೋಡೋಣ ಎಂದು ಸಿದ್ದರಾಮಯ್ಯ ಅವರು ಉತ್ತರಿಸಿದರು.

ಎಚ್‌.ಎಸ್‌.ಆರ್‌ ಬಡಾವಣೆಯಲ್ಲಿ ಒತ್ತುವರಿಯಾಗಿದ್ದ 7 ಎಕರೆ ಜಾಗವನ್ನು ತೆರವುಗೊಳಿಸಿದ್ದು, ಇಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಸಿದ್ದರಾಮಯ್ಯ ಅವರು ಅರಳಿ ಗಿಡನೆಟ್ಟು ನೀರುಣಿಸಿದರು.

ಪಾರ್ಕ್‌ ಅಭಿವೃದ್ಧಿ ಪಡಿಸಲು ಬಿಡಿಎಗೆ ವಹಿಸುವಂತೆ ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಅವರಿಗೆ ಸೂಚಿಸಿದರು. ಅಲ್ಲದೆ, ಮೂರು ಕೊಳವೆ ಬಾವಿ ಕೊರೆಸುವಂತೆ ಬಿಡಿಎ ಆಯುಕ್ತರಿಗೆ ಸೂಚಿಸಿದರು.

ಇಬ್ಬಲೂರು ಸಮೀಪದ ಇಕೊ ಸ್ಪೇಸ್‌ ಬಳಿ ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತದೆ. ಮೇಲ್ಸೇತುವೆಗಳ ನೀರು ಹೊರ ಹೋಗುವ ವ್ಯವಸ್ಥೆ ಮಾಡಿಲ್ಲ ಎಂದು ಸಚಿವ ಕೆ.ಜೆ.ಜಾರ್ಜ್‌ ಅವರು ಮಾಹಿತಿ ನೀಡಿದರು.

ಕಗ್ಗದಾಸಪುರ ರೈಲ್ವೆ ಜಂಕ್ಷನ್‌, ಟಿನ್‌ ಫ್ಯಾಕ್ಟರಿ ಜಂಕ್ಷನ್‌ ಪರಿಶೀಲಿಸಿದರು.

ಸಚಿವರಾದ ದಿನೇಶ್‌ ಗುಂಡೂರಾವ್, ರಾಮಲಿಂಗಾರೆಡ್ಡಿ, ವಿಧಾನ ಪರಿಷತ್‌ನ ಆಡಳಿತ ಪಕ್ಷದ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್‌, ಶಾಸಕರಾದ ಮುನಿರತ್ನ, ಎಸ್‌.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯರಾದ ಉಗ್ರಪ್ಪ, ಎಚ್.ಎಂ. ರೇವಣ್ಣ ಇದ್ದರು.

ಮೆಟ್ರೊ ರೈಲಿನಲ್ಲಿ ಪ್ರಯಾಣ: ಬೈಯ್ಯಪ್ಪನಹಳ್ಳಿವರೆಗೂ ಬಸ್‌ನಲ್ಲಿ ಬಂದ ಸಿಎಂ ಸಿದ್ದರಾಮಯ್ಯ ಅವರು ಮೆಟ್ರೊ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಇದೇ ರೈಲಿನಲ್ಲಿ ಪ್ರಯಾಣಿಸಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಯಿತು. ಡಾ.ಬಿ.ಆರ್‌. ಅಂಬೇಡ್ಕರ್‌ ರೈಲು ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಬಸ್‌ ಮೂಲಕ ಗೃಹ ಕಚೇರಿ ಕೃಷ್ಣಾಗೆ ತಲುಪಿದರು.

ಮುಖ್ಯ ಎಂಜಿನಿಯರ್‌ ಅಮಾನತು
ಎಚ್‌ಎಸ್‌ಆರ್‌ ಬಡಾವಣೆ ಬಳಿ ಒಳಚರಂಡಿ ಕಾಮಗಾರಿ ವಿಳಂಬ ಮಾಡಿದ್ದಕ್ಕಾಗಿ ಜಲಮಂಡಳಿಯ ಮುಖ್ಯ ಎಂಜಿನಿಯರ್‌ ರುದ್ರಮೂರ್ತಿ ಅವರನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

‘ನಾಲ್ಕು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ₹ 18 ಕೋಟಿ ವೆಚ್ಚದ ಸಣ್ಣ ಕಾಮಗಾರಿಯನ್ನೇ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿಲ್ಲ. ರಸ್ತೆ, ವಿದ್ಯುತ್‌ ಕಂಬಗಳನ್ನು ಹಾಳು ಮಾಡಲಾಗಿದೆ. ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಏರುಧ್ವನಿಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸ್ಥಳದಲ್ಲಿದ್ದ ಪ್ರಧಾನ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ಅವರನ್ನೂ ತರಾಟೆಗೆ ತೆಗೆದುಕೊಂಡರು.

ಔಷಧಿ ಖರೀದಿಯಲ್ಲಿ ಅಕ್ರಮ ನಡೆದಿಲ್ಲ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಔಷಧಿ ಖರೀದಿ ಹಾಗೂ ಆರೋಗ್ಯ ಸೇವೆ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಖಾದರ್‌ ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಅವರ ಆರೋಪ ಸತ್ಯಕ್ಕೆ ದೂರವಾದದ್ದು’ ಎಂದು   ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಬಾಲಾಪರಾಧಿಗಳಿಗೆ ಸಿ.ಎಂ ಬುದ್ಧಿವಾದ
ಮಡಿವಾಳದಲ್ಲಿರುವ ಬಾಲ ನ್ಯಾಯ ಮಂಡಳಿಗೆ ದಿಢೀರ್‌ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ,   ಅತ್ಯಾಚಾರ, ಕೊಲೆ, ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಮಕ್ಕಳಿಗೆ ಬುದ್ಧಿವಾದ ಹೇಳಿದರು.

‘ಒಳ್ಳೆಯ ಪ್ರಜೆಗಳಾಗಿ ತಪ್ಪನ್ನು ತಿದ್ದಿಕೊಳ್ಳಿ. ಇಲ್ಲಿಂದ ಹೋದ ಮೇಲೆ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇನ್ಮುಂದೆ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಶಪಥ ಮಾಡಬೇಕು’  ಎಂದು ಕಿವಿಮಾತು ಹೇಳಿದರು. ಈ ವೇಳೆ, ಹಲವು ಬಾಲಾಪರಾಧಿಗಳು ನಾವು ತಪ್ಪೇ ಮಾಡಿಲ್ಲ ಎಂದು ಹೇಳಿದರು.

ಬಾಲ ನ್ಯಾಯ ಮಂಡಳಿಯಲ್ಲಿ 12ರಿಂದ 18 ವರ್ಷದ 43 ಬಾಲಾಪರಾಧಿಗಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.