ADVERTISEMENT

ಕೌಶಲಕ್ಕೆ ಒತ್ತು: ರಾಷ್ಟ್ರಪತಿ ಆಶಯ

‘ಅಕ್ಷಯ ಪಾತ್ರೆ’ ಫೌಂಡೇಷನ್‌ನಿಂದ 200 ಕೋಟಿ ಊಟ ವಿತರಣೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 20:10 IST
Last Updated 27 ಆಗಸ್ಟ್ 2016, 20:10 IST
‘ಅಕ್ಷಯ ಪಾತ್ರೆ’ ಪ್ರತಿಷ್ಠಾನ 200 ಕೋಟಿ ಊಟ ವಿತರಿಸಿದ ನೆನಪಿಗಾಗಿ ಬೆಂಗಳೂರಿನ ಇಸ್ಕಾನ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಶಾಲಾ ಮಕ್ಕಳಿಗೆ ಸ್ಮರಣಿಕೆಗಳನ್ನು ನೀಡಿದರು. ಫೌಂಡೇಷನ್‌ ಅಧ್ಯಕ್ಷ ಮಧುಪಂಡಿತ ದಾಸ, ರಾಜ್ಯಪಾಲ ವಜುಭಾಯ್‌ ವಾಲಾ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ
‘ಅಕ್ಷಯ ಪಾತ್ರೆ’ ಪ್ರತಿಷ್ಠಾನ 200 ಕೋಟಿ ಊಟ ವಿತರಿಸಿದ ನೆನಪಿಗಾಗಿ ಬೆಂಗಳೂರಿನ ಇಸ್ಕಾನ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಶಾಲಾ ಮಕ್ಕಳಿಗೆ ಸ್ಮರಣಿಕೆಗಳನ್ನು ನೀಡಿದರು. ಫೌಂಡೇಷನ್‌ ಅಧ್ಯಕ್ಷ ಮಧುಪಂಡಿತ ದಾಸ, ರಾಜ್ಯಪಾಲ ವಜುಭಾಯ್‌ ವಾಲಾ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ   

ಬೆಂಗಳೂರು: ‘ಉತ್ತಮ ಶಿಕ್ಷಣ, ಕೌಶಲ ಅಭಿವೃದ್ಧಿ ಮೂಲಕ ಯುವ ಶಕ್ತಿಯನ್ನು ದುಡಿಯುವ ಶಕ್ತಿಯಾಗಿ ಪರಿವರ್ತಿಸಬೇಕಾಗಿದೆ’ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಭಿಪ್ರಾಯಪಟ್ಟರು. ‘ಅಕ್ಷಯ ಪಾತ್ರೆ’ ಪ್ರತಿಷ್ಠಾನ 200 ಕೋಟಿ ಬಿಸಿಯೂಟ ವಿತರಿಸಿದ ನೆನಪಿಗಾಗಿ ಇಸ್ಕಾನ್‌ನಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘2030ರ ವೇಳೆಗೆ ಭಾರತ ಅತಿ ಹೆಚ್ಚು ಯುವ ಶಕ್ತಿಯನ್ನು ಹೊಂದಿದ ದೇಶವಾಗಲಿದೆ. ಅದರಲ್ಲೂ ಶೇ 50ಕ್ಕೂ ಹೆಚ್ಚು ಜನಸಂಖ್ಯೆ 25ರ ವಯೋಮಾನದ ಒಳಗಿನವರಾಗಿರುತ್ತಾರೆ. ಆ ಯುವಸಮೂಹಕ್ಕೆ ದುಡಿಯುವ ಶಕ್ತಿ ಮತ್ತು ಸಾಮರ್ಥ್ಯ ನೀಡುವ ನಿಟ್ಟಿನಲ್ಲಿ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಜತೆಗೆ ಉದ್ಯೋಗ ಮಾರುಕಟ್ಟೆಯನ್ನೂ ಸೃಷ್ಟಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

‘ಹಸಿವು, ರೋಗ, ಅನಕ್ಷರತೆ ಮುಕ್ತ ದೇಶ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು’ ಎಂದೂ ಅವರು ಮನವಿ ಮಾಡಿದರು. ‘ಪ್ರತಿಯೊಬ್ಬರಿಗೂ ಆಹಾರ, ಶಿಕ್ಷಣ ಸಿಗುವಂತಾಗಬೇಕು. ಬಾಲ್ಯದಿಂದಲೇ ಮಕ್ಕಳನ್ನು ಆರೋಗ್ಯವಂತರನ್ನಾಗಿಸಿ ಉತ್ತಮ ಶಿಕ್ಷಣ ಮತ್ತು ಕೌಶಲ ವೃದ್ಧಿಯ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು.ಪ್ರತಿಯೊಬ್ಬರಲ್ಲೂ ಈ ಬದ್ಧತೆ ಇರಬೇಕು’ ಎಂದರು.

‘ಅಕ್ಷಯ ಪಾತ್ರೆ ಫೌಂಡೇಷನ್‌ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಣೆ ಯೋಜನೆಯನ್ನು ನಿಷ್ಠೆ ಮತ್ತು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುತ್ತಿದೆ. ಇದು ಶ್ಲಾಘನೀಯ ಕೆಲಸ’ ಎಂದೂ ಅವರು ಬಣ್ಣಿಸಿದರು. ಅದಕ್ಕೂ ಮೊದಲು ಮಾತನಾಡಿದ ರಾಜ್ಯಪಾಲ ವಜುಭಾಯ್‌ ವಾಲಾ, ‘ಮಕ್ಕಳನ್ನು ಸಶಕ್ತರನ್ನಾಗಿಸಿ ಸ್ವಾಭಿಮಾನದಿಂದ ಬೆಳೆಸುವ ಹೊಣೆಗಾರಿಕೆ ನಮ್ಮಲ್ಲರಿಗೆ ಇದೆ. ಜ್ಞಾನ ಮತ್ತು ಹಣ ಇದ್ದವರು,  ಅದರಲ್ಲಿ ಒಂದಷ್ಟನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಪರೋಪಕಾರಿಗಳಾಗಬೇಕು’ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ,  ‘ರಾಜ್ಯ ಸರ್ಕಾರ ಶಿಕ್ಷಣದ ಜತೆಗೆ ಅನ್ನ ದಾಸೋಹಕ್ಕೂ ಹೆಚ್ಚಿನ ಮಹತ್ವ ನೀಡಿದೆ’ ಎಂದರು. ‘ಅಕ್ಷಯ ಪಾತ್ರೆ ಫೌಂಡೇಷನ್‌ ಇನ್ನಷ್ಟು ಶಾಲೆಗಳಿಗೆ ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಿದ್ದು, ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ’ ಎಂದರು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೆಕರ್‌, ‘ಗುಣಮಟ್ಟ ಮತ್ತು ಶುದ್ಧ ಆಹಾರವನ್ನು ನಿರಂತರ ವಿತರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಅಕ್ಷಯ ಪಾತ್ರೆ ಫೌಂಡೇಷನ್‌ 16 ವರ್ಷಗಳಿಂದ ಯಾವುದೇ ಪಂಚತಾರಾ ಹೋಟೆಲ್‌ನಲ್ಲಿ ಸಿಗುವ ಆಹಾರಕ್ಕಿಂತ ಉತ್ತಮವಾದುದನ್ನು ಶಾಲಾ ಮಕ್ಕಳಿಗೆ ವಿತರಿಸುತ್ತಿದೆ’ ಎಂದು ಬಣ್ಣಿಸಿದರು. ‘ಇಂತಹ ಸಾಮಾಜಿಕ ಕಾರ್ಯವನ್ನು ಕೇವಲ ಒಂದು ಸಂಸ್ಥೆ ಅಥವಾ ಸರ್ಕಾರದಿಂದ ಮಾಡಲು ಸಾಧ್ಯ ಇಲ್ಲ. ಅದಕ್ಕೆ ಸಮುದಾಯದ ಬೆಂಬಲವೂ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.