ADVERTISEMENT

ಕ್ಯಾಂಟರ್‌ ಕದ್ದು, 24 ತಾಸಿನಲ್ಲೇ ಸಿಕ್ಕ ಕಳ್ಳರು

ಫ್ರಿಜ್‌–ಎಲ್‌ಇಡಿಗಳಿದ್ದ ಕ್ಯಾಂಟರ್, ನೈಸ್‌ ರಸ್ತೆಯಲ್ಲಿ ವಾಹನ ಬದಲು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2015, 20:01 IST
Last Updated 25 ಸೆಪ್ಟೆಂಬರ್ 2015, 20:01 IST

ಬೆಂಗಳೂರು: ಫ್ರಿಜ್‌ ಹಾಗೂ ಎಲ್‌ಇಡಿ ಟಿವಿಗಳನ್ನು ತುಂಬಿದ್ದ ಕ್ಯಾಂಟರ್‌ ಕಳವು ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳು, ಕೃತ್ಯ ಎಸಗಿದ 24 ತಾಸುಗಳಲ್ಲೇ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಪ್ರದೀಪ್ (25) ಹಾಗೂ ಆತನ ಸ್ನೇಹಿತ ಸಿ.ಎಚ್.ವೆಂಕಟೇಶ್ ಅಲಿಯಾಸ್ ಅರುಣ (25) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ವಿವಿಧ ಕಂಪೆನಿಗಳ 11 ಎಲ್‍ಇಡಿ ಟಿವಿಗಳು, ಫ್ರಿಜ್‌ ಹಾಗೂ ಸರಕು ಸಾಗಣೆ ಆಟೊವನ್ನು ಜಪ್ತಿ ಮಾಡಲಾಗಿದೆ.

ಗೋಕುಲ್‌ದಾಸ್‌ ಪೈ ಎಂಬುವರು ಬನಶಂಕರಿಯಲ್ಲಿ ಟ್ರಾನ್ಸ್‌ಪೋರ್ಟ್‌ ಏಜೆನ್ಸಿ ನಡೆಸುತ್ತಿದ್ದು, ಅವರ ಬಳಿ ಪ್ರದೀಪ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇನ್ನು, ಮೊದಲು ಇದೇ ಏಜೆನ್ಸಿಯಲ್ಲಿ ಚಾಲಕನಾಗಿದ್ದ ಮತ್ತೊಬ್ಬ ಆರೋಪಿ ಅರುಣ್, ನಾಲ್ಕು ತಿಂಗಳ ಹಿಂದೆ ಬೇರೆಡೆ ಕೆಲಸಕ್ಕೆ ಸೇರಿದ್ದ.


ರಾಮನಗರದ ವಂಡರ್‌ಲಾ ಗೇಟ್ ಬಳಿ ನೆಲೆಸಿದ್ದ ಈ ಇಬ್ಬರೂ, ಮೋಜಿನ ಜೀವನಕ್ಕಾಗಿ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಹಣಕ್ಕಾಗಿ ನಿತ್ಯ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದ ಕಾರಣ ಕಳವು ಮಾಡಲು ಸಂಚು ರೂಪಿಸಿದರು.

ಸೆ.21ರಂದು ಹೆಬ್ಬಗೋಡಿ ಸಮೀಪದ ಶೋರೂಂನಿಂದ ಫ್ರಿಜ್‌ ಹಾಗೂ 11 ಎಲ್‌ಇಡಿಗಳನ್ನು ಮೈಸೂರಿಗೆ ಸಾಗಿಸಬೇಕಿತ್ತು. ಸರಕನ್ನು ಕ್ಯಾಂಟರ್‌ಗೆ ತುಂಬಿದ ಪ್ರದೀಪ್, ಕತ್ತಲಾದ ಕಾರಣ ಮಾಲೀಕರ ಸೂಚನೆಯಂತೆ ಮರುದಿನ ಬೆಳಿಗ್ಗೆ ಹೋಗಲು ನಿರ್ಧರಿಸಿದ್ದ.

ನಂತರ ಬನಶಂಕರಿ ಸಮೀಪದ ಭುವನೇಶ್ವರಿ ನಗರದಲ್ಲಿರುವ ಪೈ ಅವರ ಮನೆ ಮುಂದೆ ಕ್ಯಾಂಟರ್ ನಿಲ್ಲಿಸಿ ಮನೆಗೆ ತೆರಳಿದ್ದ ಆತ, ಸ್ವಲ್ಪ ಸಮಯದ ನಂತರ ಸಹಚರನ ಜತೆ ಮತ್ತೆ ಅಲ್ಲಿಗೆ ಬಂದಿದ್ದ. ಯಾವುದೇ ಕೀ ಹಾಕಿದರೂ ಕ್ಯಾಂಟರ್ ಚಾಲನೆ ಆಗುತ್ತಿತ್ತು. ಈ ಬಗ್ಗೆ ಅರಿತಿದ್ದ ಆರೋಪಿಗಳು, ರಾತ್ರೋರಾತ್ರಿ ಕ್ಯಾಂಟರ್ ಕಳವು ಮಾಡಿಕೊಂಡು ಹೋಗಿದ್ದರು.

ನೈಸ್ ರಸ್ತೆಯಲ್ಲಿ ಫ್ರಿಜ್‌ ಮತ್ತು ಎಲ್‌ಇಡಿಗಳನ್ನು ಸರಕು ಸಾಗಣೆ ಆಟೊಗೆ ಸ್ಥಳಾಂತರಿಸಿದ ಅವರು, ಕ್ಯಾಂಟರನ್ನು ಅಲ್ಲೇ ಬಿಟ್ಟು ಆಟೊದಲ್ಲಿ ಪರಾರಿಯಾಗಿದ್ದರು. ಮರುದಿನ ಬೆಳಿಗ್ಗೆ 6.30ಕ್ಕೆ ಪೈ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಅವರು ಸಿ.ಕೆ.ಅಚ್ಚುಕಟ್ಟು ಠಾಣೆಗೆ ದೂರು ಕೊಟ್ಟರು.

ಕ್ಯಾಮೆರಾ ಸುಳಿವು: ‘ನೈಸ್ ರಸ್ತೆಯಲ್ಲಿ ಪೈ ಅವರು ಕ್ಯಾಂಟರ್ ಪತ್ತೆಯಾಯಿತು. ಟೋಲ್‌ ಬಳಿ ಇದ್ದ ಸಿ.ಸಿ ಟಿ.ವಿ ಕ್ಯಾಮರಾ ಪರಿಶೀಲಿಸಿದಾಗ ರಾತ್ರಿ ಆ ಕ್ಯಾಂಟರ್ ಹಿಂದೆಯೇ ಸರಕು ಸಾಗಣೆ ಆಟೊ ಬರುತ್ತಿದ್ದ ದೃಶ್ಯ ಸಿಕ್ಕಿತು. ಅನುಮಾನದ ಮೇಲೆ ಆ ವಾಹನದ ನೋಂದಣಿ ಸಂಖ್ಯೆ ಪಡೆದು ತನಿಖೆ ನಡೆಸಿದಾಗ, ಅದು ಮದ್ದೂರಿನ ವ್ಯಕ್ತಿ ಹೆಸರಲ್ಲಿರುವುದು ಗೊತ್ತಾಯಿತು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಮದ್ದೂರಿಗೆ ಹೋಗಿ ಆ ವ್ಯಕ್ತಿಯನ್ನು ವಿಚಾರಿಸಿದಾಗ, ವಾಹನವನ್ನು ಅರುಣ್‌ಗೆ ಬಾಡಿಗೆ ಕೊಟ್ಟಿದ್ದಾಗಿ ಹೇಳಿದರು. ನಂತರ ಆತನ ಮನೆ ಮೇಲೆ ದಾಳಿ ನಡೆಸಿದಾಗ ಫ್ರಿಜ್ ಹಾಗೂ ಎಲ್‌ಇಡಿ ಗಳೊಂದಿಗೆ ಇಬ್ಬರೂ ಸಿಕ್ಕಿಬಿದ್ದರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT