ADVERTISEMENT

ಕ್ರೀಡಾಪಟು ಡೆನ್‌ ತಿಮ್ಮಯ್ಯ ವಿರುದ್ಧ 18 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:39 IST
Last Updated 24 ಅಕ್ಟೋಬರ್ 2014, 19:39 IST

ಬೆಂಗಳೂರು: ಏಕಮುಖ ಸಂಚಾರ ವ್ಯವಸ್ಥೆ ಇರುವ ರಸ್ತೆಯಲ್ಲಿ ಕಾರು ಚಾಲನೆ ಮಾಡಿ,  ಪೊಲೀಸರಿಂದ  ತಪ್ಪಿಸಿ­ಕೊಳ್ಳಲು ಯತ್ನಿಸಿದ ರಾಷ್ಟ್ರ­ಮಟ್ಟದ ಮೋಟಾರ್‌ ಸ್ಪೋರ್ಟ್‌ ಕ್ರೀಡಾಪಟು ಡೆನ್‌ ತಿಮ್ಮಯ್ಯ ಅವರ  ಮೇಲೆ ಹೈಗ್ರೌಂಡ್ಸ್‌ ಸಂಚಾರ ಪೊಲೀಸರು 18 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಶುಕ್ರವಾರ ಸಂಜೆ 5.30ರ ಸುಮಾ­ರಿಗೆ ಹಜ್ ಕ್ಯಾಂಪ್‌ ಕಡೆಯಿಂದ ಕಾರಿ­ನಲ್ಲಿ ಬಂದ ತಿಮ್ಮಯ್ಯ,  ವಸಂತ­ನಗರದ ಕಡೆಗೆ ಹೋಗಲು ಏಕಮುಖ ಸಂಚಾರ ವ್ಯವಸ್ಥೆ ಇರುವ ರಸ್ತೆಯಲ್ಲಿ ವಾಹನ ಚಲಾಯಿಸಿದ್ದಾರೆ. ಆಗ ದಂಡು ರೈಲು ನಿಲ್ದಾಣದ ಬಳಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆ­ಬಲ್‌ ಆನಂದ್‌ ಅವರು ಕಾರು ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಆದರೆ, ಅವರು ಕಾರು ನಿಲ್ಲಿಸದೆ ಬಲ ತಿರುವು ಪಡೆದು ನಂದಿದುರ್ಗ ರಸ್ತೆ ಮಾರ್ಗವಾಗಿ ಹೋಗಲು ಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಆನಂದ್‌ ಅವರು  ಹೈಗ್ರೌಂಡ್ಸ್‌ ಸಂಚಾರ ಠಾಣೆಯ ಎಸ್‌ಐ ಶ್ರೀನಿವಾಸ್‌ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ನಂದಿದುರ್ಗ ರಸ್ತೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್‌, ಬೈಕ್‌ನಲ್ಲಿ ಹಿಂಬಾಲಿಸಿ ತಿಮ್ಮಯ್ಯ ಅವರ ಕಾರನ್ನು ತಡೆದಿದ್ದಾರೆ.
ತಿಮ್ಮಯ್ಯ ಅವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿರುವ ವಿಷಯ ತಿಳಿದ ಅವರ ಸ್ನೇಹಿತರು,  ಕೂಡಲೇ ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸದಂತೆ ಕೆಲ ಕಾಲ ವಾಗ್ವಾದ ನಡೆಸಿದರು. ನಂತರ ಪೊಲೀಸರು ಆ ಕಾರನ್ನು ಜಪ್ತಿ ಮಾಡಿ ಠಾಣೆಗೆ ಎಳೆದೊಯ್ದರು.

ಏಕಮುಖ ರಸ್ತೆಯಲ್ಲಿ ವಾಹನ ಚಾಲನೆ, ಪರವಾನಗಿ ಇಲ್ಲದೆ ಕಾರು ಚಾಲನೆ, ಸೀಟ್‌ ಬೆಲ್ಟ್‌ ಧರಿಸದಿರು­ವುದು, ವಿಮೆ ಇಲ್ಲದಿರುವುದು, ಅಜಾಗ­ರೂಕತೆಯ ವಾಹನ ಚಾಲನೆ  ಸೇರಿ­ದಂತೆ ತಿಮ್ಮಯ್ಯ ವಿರುದ್ಧ  ಹೈಗ್ರೌಂಡ್ಸ್‌ ಸಂಚಾರ ಪೊಲೀಸರು  ಒಟ್ಟು 18 ಪ್ರಕರಣಗಳನ್ನು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.