ADVERTISEMENT

‘ಗಮಕಗಳ ಪ್ರಸ್ತುತತೆ ಇಂದಿಗೂ ಇದೆ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2016, 19:30 IST
Last Updated 24 ಸೆಪ್ಟೆಂಬರ್ 2016, 19:30 IST
‘ಗಮಕಗಳ ಪ್ರಸ್ತುತತೆ ಇಂದಿಗೂ ಇದೆ’
‘ಗಮಕಗಳ ಪ್ರಸ್ತುತತೆ ಇಂದಿಗೂ ಇದೆ’   

ಬೆಂಗಳೂರು: ‘ಗಮಕಗಳಿಂದ ಪ್ರಾಚೀನ ಕಾಲದ ಜನರ ಜೀವನ ಮೌಲ್ಯ ತಿಳಿಯಲು ಸಾಧ್ಯ. ಇಂದಿಗೂ ಗಮಕಗಳ ಪ್ರಸ್ತುತತೆ ಇದೆ’ ಎಂದು ಗಮಕ ವ್ಯಾಖ್ಯಾನಕಾರ ಎ.ವಿ. ಪ್ರಸನ್ನ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತು­ಕತೆ’ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಹಳೆಗನ್ನಡವನ್ನು ಪಠ್ಯಗಳಲ್ಲಿ ಉಳಿಸಲು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸನ್ನಿವೇಶದಲ್ಲಿ ಗಮಕಿಗಳು ವಾಚನ–ವ್ಯಾಖ್ಯಾನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಉಳಿಸಿಕೊಂಡು ಬರುತ್ತಿದ್ದಾರೆ’ ಎಂದರು.

‘ಜನರಿಂದ ಕಂದಾಯ ವಸೂಲಿ ಮಾಡುವ ವಿಧಾನ, ಹೂವಿನ ಮಕರಂದ ಹೀರುವ ದುಂಬಿ ಪರಾಗಸ್ಪರ್ಶದ ಮೂಲಕ ಆ ಗಿಡಕ್ಕೂ ಉಪಯೋಗವಾಗುವಂತೆ ಮಾಡುತ್ತದೆಯೋ ಹಾಗೆ ಇರಬೇಕು ಎಂದು ಕುಮಾರವ್ಯಾಸ ಬರೆದಿದ್ದಾನೆ’ ಎಂದು ಗಮಕ ವ್ಯಾಖ್ಯಾನ ಮಾಡಿದರು.
‘ಹಾಸನ ಜಿಲ್ಲೆಯ ಪೊನ್ನಾಥಪುರದಲ್ಲಿ 1950ರಲ್ಲಿ ನಾನು ಹುಟ್ಟಿದ್ದು. ಎಲ್ಲಾ ಜಾತಿಗಳ ಜನರಿದ್ದ ಸುಸಂಸ್ಕೃತ ಊರು. ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಯಿತು. ಉಪನ್ಯಾಸಕ, ತಹಶೀಲ್ಡಾರ್‌ ಹಾಗೂ ವಿಶೇಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರೂ ವೇದಿಕೆ ಮೇಲೆ ಗಮಕ ವ್ಯಾಖ್ಯಾನ ಮಾಡುವುದಕ್ಕೆ ಸಂಕೋಚ ಪಡುತ್ತಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.