ADVERTISEMENT

ಗುಂಡಿಗಳಿಂದ ತುಂಬಿದೆ ಗೂಡ್‌ ಶೆಡ್‌ ರಸ್ತೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 20:03 IST
Last Updated 21 ಸೆಪ್ಟೆಂಬರ್ 2017, 20:03 IST
ಗೂಡ್‌ಶೆಡ್‌ ರಸ್ತೆಯಲ್ಲಿ ಬಿದ್ದಿರುವ ಗುಂಡಿ
ಗೂಡ್‌ಶೆಡ್‌ ರಸ್ತೆಯಲ್ಲಿ ಬಿದ್ದಿರುವ ಗುಂಡಿ   

ಬೆಂಗಳೂರು: ನಗರದ ಕಾಟನ್‌ಪೇಟೆ ವಾರ್ಡ್‌ನಲ್ಲಿ ಹಾದುಹೋಗಿರುವ ಟಿ.ಸಿ.ಎಂ.ರಾಯನ್‌ ರಸ್ತೆಯಲ್ಲಿ (ಗೂಡ್‌ಶೆಡ್‌ ರಸ್ತೆ) ಗುಂಡಿಗಳು ಬಿದ್ದಿವೆ. ಅಲ್ಲಲ್ಲಿ ಟಾರು ಕಿತ್ತುಹೋಗಿ ಜೆಲ್ಲಿ ಕಲ್ಲುಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಗೂಡ್‌ ಶೆಡ್‌ ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಗೆ ಸಂಧಿಸುವ ಸ್ಥಳ, ಬಿಜಿಎಸ್‌ ಬಾಲಕರ ವಿದ್ಯಾರ್ಥಿನಿಲಯ, ವಿನಾಯಕ ಮುದ್ರಣಾಲಯ, ಬಜಾಜ್‌ ಷೋರೂಮ್‌ ಮತ್ತು ಶಾಂತಲಾ ವೃತ್ತದ ಮುಂಭಾಗದಲ್ಲಿ ಬಿದ್ದಿರುವ ಗುಂಡಿಗಳು ಸರಾಗ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿವೆ.

‘ಗುಂಡಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ನಿತ್ಯ ಸಣ್ಣ–ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ಸವಾರರಿಗೆ ಗಾಯಗಳಾಗಿವೆ. ಬೈಕ್‌ಗಳ ಬಿಡಿಭಾಗಗಳು ಸಡಿಲಗೊಳ್ಳುತ್ತಿವೆ’ ಎಂದು ವಾಹನ ಸವಾರ ಮಧ್ವರಾಜ್‌ ತಿಳಿಸಿದರು.

ADVERTISEMENT

‘ಗುಂಡಿಗಳಿಂದಾಗಿ ಸಂಚಾರ ದಟ್ಟಣೆ ಹೆಚ್ಚಿದೆ. ಹಾಗಾಗಿ ಕೆಲವರು ಪಾದಚಾರಿ ಮಾರ್ಗದ ಮೇಲೆಯೇ ಬೈಕ್‌ಗಳನ್ನು ಓಡಿಸಿಕೊಂಡು ಹೋಗುತ್ತಾರೆ’ ಎಂದರು.

‘ಪ್ರತಿ ಮಳೆಗಾಲದಲ್ಲಿ ಈ ಪ್ರದೇಶದ ರಸ್ತೆಗಳು ಹಾಳಾಗುತ್ತವೆ. ಬಿಬಿಎಂಪಿಯವರು ಗುಂಡಿಗಳಿಗೆ ತೇಪೆ ಹಾಕಿ ಹೋಗುತ್ತಾರೆ. ಅವು ಒಂದೆರಡು ತಿಂಗಳೊಳಗೆ ಕಿತ್ತು ಹೋಗುತ್ತವೆ. ಈ ರಸ್ತೆಗೆ ವೈಟ್‌ಟಾಪಿಂಗ್‌ ಮಾಡಬೇಕು’ ಎಂದು ಸ್ಥಳೀಯ ನಿವಾಸಿ ಬಾಬು ಒತ್ತಾಯಿಸಿದರು.

‘ರಸ್ತೆ ಗುಂಡಿ ಮುಚ್ಚಲು ಮಿಲ್ಲಿಂಗ್‌ ಯಂತ್ರ, ಪೈಥಾನ್‌ ಯಂತ್ರ ಬಳಸುತ್ತಿದ್ದೇವೆಂದು ಅಧಿಕಾರಿಗಳು ಹೇಳುತ್ತಾರೆ. ಅವುಗಳು ಎಲ್ಲಿ ಹೋದವು’ ಎಂದು ಆಟೊ ಚಾಲಕ ರಾಜು ಪ್ರಶ್ನಿಸಿದರು.

ಈ ಕುರಿತು ವಿಚಾರಿಸಲು ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ ಸಿ.ಸೋಮಶೇಖರ್‌ ಅವರಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.